ದೇವರ ತೋಟ
Kannada Translation of Robert Frost's poem "God's Garden" ದೇವರ ತೋಟ ದೇವರು ಸುಂದರ ತೋಟವನೊಂದನು ಮಾಡುತ ಹೂಗಿಡ ಹರಹಿದನು; ದಾರಿಯನೊಂದನು ಚಿಕ್ಕದು ಚೊಕ್ಕದು ಅವುಗಳ ನಡುವೆಯೆ ತೋರಿದನು. ಈ ಸುಂದರಬನದೊಳು ಜೀವಿಸಲೆನೆ ಮನುಕುಲವನು ತಾ ಕರೆಸಿದನು, ಇಂತೆಂದನು - "ಓ ನನ್ನಯ ಮಕ್ಕಳೆ, ಚಂದದಲರುಗಳ ನೀಡಿಹೆನು, ಲತೆಗಳನೋರಣಗೊಳಿಸುತಲರಳಿಯ ಪೋಷಿಸಿ ಹೂಗಳನುಪಚರಿಸಿ! ಹಾದಿಗೆ ತೆರಪಿರುವಂತೆಯೆ ಬಿಟ್ಟರೆ ನಿಮ್ಮಯ ಮನೆಯದೊ! ಕಾಣುವಿರಿ" ಹೊಸತೊಬ್ಬನು ಧಣಿ ಬಂದನು ನಂತರ, ಮನುಕುಲದೆಡೆಗವಗೊಲವಿಲ್ಲ, ಪಥವನೆ ಮುಚ್ಚುವ ಪರಿಯಲಿ ಹೊನ್ನಿನ ಹೂಗಳ ಬೆಳೆಸುತ ಸೆಳೆದಿದ್ದ. ಹೊಳೆಯುವ ಹೂಗಳ ಕಂಡಿತು ಮನುಕುಲ, ಥಳಥಳಿಸಿದವವು ಬೆಳಗಿನಲಿ! ಲೋಭದ ಮುಳ್ಳುಗಳಿದ್ದವು ಮರೆಯಲಿ ನಂಜನು ಸೂಸಿದವಾಳದಲಿ! ದೂರಕೆ ದೂರಕೆ ಅಲೆದರು ಹಲವರು ಹೊನ್ನಿನ ಹೂಗಳಲೊಲವಿಟ್ಟು, ಬಾಳಿನಿರುಳಿನಲಿ ದಾರಿಯು ತಪ್ಪಿರೆ ತೊಳಲಾಡಿದರಲ ಗತಿಗೆಟ್ಟು! ಸೊಗಸಿನ ಮಾಯೆಯು ಕುರುಡಾಗಿಸುವುದು ಕೈವಶವಾಗದೆ ಎಚ್ಚರಿರು! ದೇವರು ಸೃಜಿಸಿದ ಬಾನೊಳು ಮಿನುಗುವ ತಾರೆಗಳತ್ತಲೆ ಗಮನವಿಡು. ಅಪ್ಪಟ ನಡೆಯಿಹ ಕೇಡನು ಬಯಸದ ದಾರಿಯ ತೋರುವ ಕೆಳೆಗಳವು, ತಪ್ಪಿದ ಹೆಜ್ಜೆಯ ನೀನಿಡುತಿರಲವು ಹಾದಿಗೆ ಮರಳಿಸಿ ಸಲಹುವುವು. ನೇಸರ ಬೆಳಗಿರೆ ದೇವರು ನೆಟ್ಟಿಹ ಹೂಗಿಡಗಳ ಕಾಪಿಡುತಲಿರು, ಸಗ್ಗವ ತೋರುವ ಹಾದಿಯ ತೆರಪಿಗೆ ಬೆವರನು ಹರಿಸುತ ದುಡಿಯುತಿರು! - ವೆಂಕಟೇಶಪ್ರಸನ್ನ The or...