ಬಾಲ್ಯದ ಓದಿನ ನೆನಪುಗಳು
ಈ ಕೆಳಗಿನ ದಿ ಅರುಣ್ ಮೇಷ್ಟ್ರು ಶೋ ಎರಡನೇ ಆವೃತ್ತಿಯ ಮಾತುಗಳನ್ನು ಕೇಳಿದ ಮೇಲೆ ನನಗೂ ಬಾಲ್ಯದಲ್ಲಿ ಓದಲು ಪುಸ್ತಕಗಳಿಗಾಗಿ ಹಾತೊರೆಯುತ್ತಿದ್ದ ದಿನಗಳು ನೆನಪಾದವು. The Arun Meshtru Show S1-E2 ದಿ ಅರುಣ್ ಮೇಷ್ಟ್ರು ಶೋ S1-E2 Feat. @arunmeshtru Like | Share | Subscribe https://t.co/pdRGVzCfiT pic.twitter.com/Wj7RNRPoqx — Talk Of The Town (@TalkOf_TheT0wn) July 26, 2019 ನಾನು ಇದ್ದದ್ದು ಒಂದು ಸಣ್ಣ ಊರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ . ಈಗ ಊರು ದೊಡ್ಡದಾಗಿ ಬೆಳೆದಿದ್ದರೂ ನನ್ನ ಬಾಲ್ಯದ ಕಾಲಕ್ಕೆ ಅದು ಸಣ್ಣ ಊರು. ಅಲ್ಲಿ ಕೊಳ್ಳಲು ಪುಸ್ತಕದ ಅಂಗಡಿಗಳು ಹೆಚ್ಚಾಗಿ ಇರಲಿಲ್ಲ. ನನ್ನ ಪಾಲಿಗೆ ವರವಾಗಿದ್ದಂತಹವು ಊರಿನ "ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿ" ಎಂಬ ಒಂದು ಖಾಸಗಿ ಗ್ರಂಥಾಲಯ ಮತ್ತು ಸರ್ಕಾರಿ ಗ್ರಂಥಾಲಯ . ಅಲ್ಲಿಂದ ಎರವಲು ತಂದು ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲ. ನನಗೆ ಪುಸ್ತಕಗಳ ಪರಿಚಯವಾದದ್ದು ಮನೆಯಲ್ಲಿದ್ದ ಅಮರ ಚಿತ್ರ ಕಥೆ ಪುಸ್ತಕಗಳಿಂದ. ನಮ್ಮ ತಂದೆಯವರು, ಚಿಕ್ಕಪ್ಪ ಆಗಾಗ ಈ ಪುಸ್ತಕಗಳನ್ನು ತಂದಿಟ್ಟಿದ್ದರು. ಅವು ಕೇವಲ ಕಾಮಿಕ್ಸ್ ಪುಸ್ತಕಗಳಾಗಿದ್ದರೂ ಅವುಗಳಿಂದ ಕಲಿತದ್ದು ಬಹಳ. ಮಕ್ಕಳಿಗೆ ಭಾರತದ ಮೂಲೆ ಮೂಲೆಗಳಿಂದ ಪುರಾಣ ಮತ್ತು ನೀತಿಕಥೆಗಳನ್ನು ಹೆಕ್ಕಿ ತಂದು ಮನಮುಟ್ಟುವಂತೆ ಕಲಿಸಿದ ಶ್ರೇಯ ಅಮರ ಚಿತ್ರ ಕಥೆ ಮ...