Posts

Showing posts from December, 2021

ಪರಿವಾದಿನೀ ಸ್ವಗತ

Image
  ಪರಿವಾದಿನೀ ಸ್ವಗತ ನನ್ನೆದೆಯ ತಂತಿಗಳನವಳು ಮೀಟಿದ ನೆನಪು ನೆನ್ನೆಯೋ ಎಂಬಂತೆ ಹಸಿರಾಗಿದೆ, ಶತಮಾನವನೆ ದಾಟಿದೆನ್ನಿರವಿನವಧಿಯಲಿ ಹಲವರೊಡೆತನವೆನಗೆ ಹಳತಾಗಿದೆ. ಹತ್ತು ವರ್ಷದ ಬಾಲೆಗೊಲವಿನಿಂದವಳಜ್ಜ ಹುಟ್ಟುಹಬ್ಬಕ್ಕಿತ್ತ ಕೊಡುಗೆ ನಾನು, ಪುಟ್ಟ ಬೆರಳುಗಳಿಂದಲವಳೆನ್ನ ನುಡಿಸುತಿರೆ ಸುತ್ತಿನವರಿಗೆ ಸಗ್ಗ ಮೂರು ಗೇಣು! ಒಡೆಯರೊಡ್ಡೋಲಗವೊ, ತುಂಗೆಯಂಚಿನ ಮಠವೊ ನಾಡಿನೆಲ್ಲೆಡೆಯವಳ ಕೀರ್ತಿಯಿತ್ತು. ಪ್ರತಿನಿತ್ಯ ತನ್ನರಿವ ತಿದ್ದಿ ತೀಡುವಳವಳು, ಸುತೆ ವಾಣಿಗೆಂಬಂತೆ ತೋರುತಿತ್ತು. ನಾಟವೋ ರೇವತಿಯೊ, ಮಧುವಂತಿ ಪೀಲುಗಳೊ ಆಟವಾಕೆಗೆ ರಾಗದಾಲಾಪನೆ. ಇಂತು ವೈದುಷ್ಯದಿಂ ಜಗವ ನಲಿಸಿದಳಾಕೆ ಸಂತತದ ಶಾರದೆಯ ಆರಾಧನೆ. ಗಂಗೆ ಬಾಯಾರಿಕೆಗೆ, ಹೊಂಗೆ ಬಿಸಿಲಿನ ಝಳಕೆ, ಸಂಗೀತ ಮೋಕ್ಷಕೆಂದವಳ ನಿಲುವು. ತಳೆದಳೇಕಾಂತವನು, ಮರಮರಳಿ ನುಡಿಸಿದಳು, ಬೆಳೆದಿತ್ತು ಸಾರಮತಿ ರಾಗದೊಲವು. ಶಿಶ್ಯರೊಳಗುತ್ತಮಗೆ ನನ್ನನುಡುಗೊರೆಯಾಗಿ ನಿಶ್ಚಯಿಸಿ ಸರಸತಿಯಲವಳು ಲೀನ; ಮರಳಿ ಹಲವೆಡೆ ನನ್ನ ನಾದ ಸುಳಿದಾಡಿತ್ತು,  ಧರೆಯನವನಗಲಿರಲು ಮತ್ತೆ ಮೌನ. ಹೊಸಬನೊಡೆತನದಲ್ಲಿ ಮತ್ತೆನ್ನ ತಂತಿಗಳು ಹೆಸರಿಡದ ರಾಗಗಳ ನುಡಿದಿದ್ದವು. ಭಾವವಿಲ್ಲದ ರಾಗ, ಜೀವವಿಲ್ಲದ ತಾನ, ಹೂವಿರದ ಗಿಡದಂತೆ ಸೊರಗಿದ್ದಿತು. ಸಾಧನೆಗೆ ಮನಗೊಟ್ಟ ಗುರುಭಕ್ತಿಯಿಹ ಕಲಿಕೆ ಬಾಧೆಯೆಂದೆನಿಸುವಗೆ ವಿದ್ಯೆಯೆಲ್ಲಿ? ಕರತಾಡನದ ನಡುವೆ ಕೊರತೆಯಿಹುದೆಂಬರಿವು ಕೊರೆಯುತಿರೆ ಗಾನಮಾಧುರ್ಯವೆಲ್ಲಿ? ಕೊನೆಗೊಮ್ಮೆ ...

ದೇವದಾರು - Kannada Translation of Robert Frost's "In Hardwood Groves"

Image
  ದೇವದಾರು ನೆರಳಿತ್ತು ಸಾಕೆನಿಸಿ ಮರಗಳಿಂದಗಲುತ್ತ ತರಗುಗಳು ಮರಮರಳಿ ತಿರೆಗೆರಗಿವೆ. ಅರೆಗಂದು ಮಾಸಲಿನ ಹೊದಿಕೆಯನು ಕುಳಿರಿನಲಿ ಧರೆಗೆ ಕೈಗವಸಿನೊಲು ತೊಡಿಸುತ್ತಿವೆ. ತಳಿರಾಗಿ ಹೊರವಾಗಿ ಮತ್ತೆ ಮರವನು ತುಂಬಿ ನೆಳಲನೀಯುವ ಮುನ್ನ ತಾಳಬೇಕು. ಮೊಳೆವ ಹೊಸತನದೆದುರು ಬಾಗುತಿರಲೇಬೇಕು; ಕೊಳೆತು ನಾರುತಲಿಳೆಗೆ ಬೀಳಬೇಕು. ಪ್ರಸವಗಳು ಹೊರಹೊಮ್ಮಲೆಡೆಮಾಡಿಕೊಡಬೇಕು, ಕುಸುಮತಾಂಡವದಡಿಗೆ ಸಿಲುಕಿ ಪತ್ರೆ. ಹೊಸತೊಂದು ಹೆರತೊಂದು ಜಗದೊಳೆಂತೋ ತಿಳಿಯೆ, ಎಸಕವಿಲ್ಲಿಯದಿಂತು - ನಿತ್ಯಯಾತ್ರೆ. This is an attempt at translating Robert Frost's poem " In Hardwood Groves ". The original: The same leaves over and over again! 
 They fall from giving shade above  
To make one texture of faded brown 
 And fit the earth like a leather glove. 

 Before the leaves can mount again 
 To fill the trees with another shade, 
 They must go down past things coming up. 
 They must go down into the dark decayed. 

 They must be pierced by flowers and put 
 Beneath the feet of dancing flowers. 
 However it is in some other world 
 I know that this is way in ours.

ಏಕಾಂತಗೀತ

Image
  ಏಕಾಂತಗೀತ ಆನುವಂಶಿಕವಾಗಿ ಬಂದೆರಡು ಗುಂಟೆಗಳ ಮಾನದಿಂ ಪೋಷಿಸುವ ನರನೆ ಧನ್ಯ; ತನ್ನ ನೆಲದೆಲರನ್ನೆ ತೃಪ್ತಿಯಿಂದುಸಿರಿಡುವ ಸ್ವಾವಲಂಬಿಯ ಪಾಡು ಸರ್ವಮಾನ್ಯ. ತಾನಕ್ಕರೆಯ ತೋರಿದಾಕಳಿನ ಹಾಲಿರಲು ತನ್ನಂಗಳದ ಬೆಳೆಯ ಗಂಜಿಯಿರಲು, ತಾನೆ ಸಾಕಿದ ಮಂದೆ ತುಪ್ಪಳವನೀಯುತಿರೆ ತನ್ನೊಡಲಿಗದೆ ತೊಡುಗೆಯಾಗುತಿರಲು, ತನ್ನ ತೋಟದ ಹೊಂಗೆ ಬೇಸಿಗೆಗೆ ನೆರಳಾಗಿ ತಣ್ಣಗಿನ ಮಾಗಿಗದರುರುವಲಿರಲು... ಪಾವನನು ನರನವನು ನಿಶ್ಚಿಂತನಿರುವವನು ಜಾರುತಿರೆ ಜಾವಗಳು, ದಿವಸ-ವರುಷಗಳು; ಬೇವಸಗಳಿರದ ಮನ, ಹದುಳದಿಂದಿರುವ ತನು, ನೀರವತೆ ಹಗಲಿಡೀ ಮನೆಯ ಮಾಡಿರಲು. ಇರುಳುಗಳು ನೆಮ್ಮದಿಯ ನಿದಿರೆಯಿಂ ತುಂಬಿರಲು ಬರೆದೋದಿ ನಲಿಯಲೆಂದುಲ್ಲಾಸವಿರಲು; ಸರಳತೆಯ ಮುಗ್ಧತೆಯ ಬಾಳಿಗವನೊಲಿದಿರಲು ಪರಮಾತ್ಮನೆಡೆಗೆ ಮನ ತುಡಿಯುತಿರಲು. ಗೊತ್ತು ಕಾಣಿಸದಂತೆ ಬದುಕು ಮುನ್ನಡೆದಿರಲಿ, ಅತ್ತು ಕರೆವವರಿಲ್ಲದಿರಲಿ ಕಡೆಗೆ; ಪ್ರತ್ಯೇಕವಾಗಿರ್ದು ಲೋಕದಿಂ ದೂರಾಗೆ ಮೃತ್ಯುವೂ ಕುರುಹುಗಳನುಳಿಸದಿರಲಿ! The above is an attempt at translating the poem "Ode on Solitude" by Alexander Pope. The original: Happy the man, whose wish and care A few paternal acres bound, Content to breathe his native air, In his own ground. Whose herds with milk, whose fields with bread, Whose flocks supply him with attire, W...

ಕತ್ತಲೊಳು ಕಾಶಿ

Image
  ಕತ್ತಲೊಳು ಕಾಶಿ ಸಂಜೆಗತ್ತಲು ತೇಲುತೆಪ್ಪದಿನಾಚೆ ನೋಡೆಲೊ, ಕಾಶಿಯ! ಮಂಜಿನಾವರಣವನು ಮೀರುತ ಪೊಳಲು ಮೂಡುವ ರೀತಿಯ! ನಿಚ್ಚಜಂಗಮ ಬೀಡು ಬಿಟ್ಟಿಹನಿಲ್ಲಿ ಕಾಣೆಲೊ ಯಾತ್ರಿಕ, ಮುಚ್ಚಿ ಹಿಡಿದಿಹನೆಲ್ಲ ಜಗವನು; ತನ್ನ ಮುಷ್ಟಿ ಚಿದಾತ್ಮಕ! ಸಾಲುಸಾಲಿಗೆ ಬಂದು ಪೋಪರ ನೋಡುತಿಹನೆಡಬಿಡದೆಯೇ, ಕಾಲವದು ಕಂಕಣದವೊಲು ಮಣಿ ಕಟ್ಟಿ ನಿಂತಿಹುದಲ್ಲಿಯೇ! ಕಡೆಯ ತಾಣವಿದೆಂದು ಹಲವರು ಬಂದು ಸೇರಿಹರಿಲ್ಲಿಗೆ, ಬಿಡಲು ಸಜ್ಜಾಗಿರುವ ಪಟ್ಟಿಯ ನೋಡೆ ಮೂಡದೆ ಬೆಳ್ನಗೆ? ಬಾಳಿನಾಸೆಗೆ, ಖೇದ ಪಾತಕಗಳಿಗೆ ಕೊನೆಮೊದಲೆಲ್ಲಿದೆ? ತಾಳುಮೆಯ ತೋರುವರ ಪಾಲಿಗೆ ಗಟ್ಟಿ ನಂಬುಗೆಯೊಂದಿದೆ.  ಅಂಗದಾಚೆಯ ಚೇತನದ ನೆಲೆಯರಿತರದುವೇ ನೈಗಮ, ಗಂಗೆ ಲೆಕ್ಕವನಿಡುವಳೆಲ್ಲರ ನಿಯತಿಯೊಡನ ಸಮಾಗಮ! ಇಹದಿ ಬಾಳುತ ಪರವ ತಾಳುವ ಸಹನೆಯಿಲ್ಲಿಯ ಜೀವನ, ಸಹಜ ಸರ್ವವ್ಯಾಪಿ ಶೂನ್ಯತೆಗಳನು ತಿಳಿದಿರೆ ಪಾವನ! - ವೆಂಕಟೇಶಪ್ರಸನ್ನ This is an attempt at translating the poem "Kashi at Night" by Nivedita Tiwari. The original poem is below: Kashi at Night by Nivedita Tiwari From this side of the boat, a city rises against the mist, the eternal wanderer’s abode, who holds the universe in his fist, it has watched come and go, the time wrapped around his wrist. Many arrive here finally and laugh at the...