ದೇವದಾರು - Kannada Translation of Robert Frost's "In Hardwood Groves"

 ದೇವದಾರು


ನೆರಳಿತ್ತು ಸಾಕೆನಿಸಿ ಮರಗಳಿಂದಗಲುತ್ತ

ತರಗುಗಳು ಮರಮರಳಿ ತಿರೆಗೆರಗಿವೆ.
ಅರೆಗಂದು ಮಾಸಲಿನ ಹೊದಿಕೆಯನು ಕುಳಿರಿನಲಿ
ಧರೆಗೆ ಕೈಗವಸಿನೊಲು ತೊಡಿಸುತ್ತಿವೆ.

ತಳಿರಾಗಿ ಹೊರವಾಗಿ ಮತ್ತೆ ಮರವನು ತುಂಬಿ
ನೆಳಲನೀಯುವ ಮುನ್ನ ತಾಳಬೇಕು.
ಮೊಳೆವ ಹೊಸತನದೆದುರು ಬಾಗುತಿರಲೇಬೇಕು;
ಕೊಳೆತು ನಾರುತಲಿಳೆಗೆ ಬೀಳಬೇಕು.

ಪ್ರಸವಗಳು ಹೊರಹೊಮ್ಮಲೆಡೆಮಾಡಿಕೊಡಬೇಕು,
ಕುಸುಮತಾಂಡವದಡಿಗೆ ಸಿಲುಕಿ ಪತ್ರೆ.
ಹೊಸತೊಂದು ಹೆರತೊಂದು ಜಗದೊಳೆಂತೋ ತಿಳಿಯೆ,
ಎಸಕವಿಲ್ಲಿಯದಿಂತು - ನಿತ್ಯಯಾತ್ರೆ.





This is an attempt at translating Robert Frost's poem "In Hardwood Groves". The original:

The same leaves over and over again! 

They fall from giving shade above 

To make one texture of faded brown 

And fit the earth like a leather glove. 



Before the leaves can mount again 

To fill the trees with another shade, 

They must go down past things coming up. 

They must go down into the dark decayed. 



They must be pierced by flowers and put 

Beneath the feet of dancing flowers. 

However it is in some other world 

I know that this is way in ours.

Comments