ಪರಿವಾದಿನೀ ಸ್ವಗತ

 ಪರಿವಾದಿನೀ ಸ್ವಗತ


ನನ್ನೆದೆಯ ತಂತಿಗಳನವಳು ಮೀಟಿದ ನೆನಪು
ನೆನ್ನೆಯೋ ಎಂಬಂತೆ ಹಸಿರಾಗಿದೆ,
ಶತಮಾನವನೆ ದಾಟಿದೆನ್ನಿರವಿನವಧಿಯಲಿ
ಹಲವರೊಡೆತನವೆನಗೆ ಹಳತಾಗಿದೆ.

ಹತ್ತು ವರ್ಷದ ಬಾಲೆಗೊಲವಿನಿಂದವಳಜ್ಜ
ಹುಟ್ಟುಹಬ್ಬಕ್ಕಿತ್ತ ಕೊಡುಗೆ ನಾನು,
ಪುಟ್ಟ ಬೆರಳುಗಳಿಂದಲವಳೆನ್ನ ನುಡಿಸುತಿರೆ
ಸುತ್ತಿನವರಿಗೆ ಸಗ್ಗ ಮೂರು ಗೇಣು!

ಒಡೆಯರೊಡ್ಡೋಲಗವೊ, ತುಂಗೆಯಂಚಿನ ಮಠವೊ
ನಾಡಿನೆಲ್ಲೆಡೆಯವಳ ಕೀರ್ತಿಯಿತ್ತು.
ಪ್ರತಿನಿತ್ಯ ತನ್ನರಿವ ತಿದ್ದಿ ತೀಡುವಳವಳು,
ಸುತೆ ವಾಣಿಗೆಂಬಂತೆ ತೋರುತಿತ್ತು.

ನಾಟವೋ ರೇವತಿಯೊ, ಮಧುವಂತಿ ಪೀಲುಗಳೊ
ಆಟವಾಕೆಗೆ ರಾಗದಾಲಾಪನೆ.
ಇಂತು ವೈದುಷ್ಯದಿಂ ಜಗವ ನಲಿಸಿದಳಾಕೆ
ಸಂತತದ ಶಾರದೆಯ ಆರಾಧನೆ.

ಗಂಗೆ ಬಾಯಾರಿಕೆಗೆ, ಹೊಂಗೆ ಬಿಸಿಲಿನ ಝಳಕೆ,
ಸಂಗೀತ ಮೋಕ್ಷಕೆಂದವಳ ನಿಲುವು.
ತಳೆದಳೇಕಾಂತವನು, ಮರಮರಳಿ ನುಡಿಸಿದಳು,
ಬೆಳೆದಿತ್ತು ಸಾರಮತಿ ರಾಗದೊಲವು.

ಶಿಶ್ಯರೊಳಗುತ್ತಮಗೆ ನನ್ನನುಡುಗೊರೆಯಾಗಿ
ನಿಶ್ಚಯಿಸಿ ಸರಸತಿಯಲವಳು ಲೀನ;
ಮರಳಿ ಹಲವೆಡೆ ನನ್ನ ನಾದ ಸುಳಿದಾಡಿತ್ತು, 
ಧರೆಯನವನಗಲಿರಲು ಮತ್ತೆ ಮೌನ.

ಹೊಸಬನೊಡೆತನದಲ್ಲಿ ಮತ್ತೆನ್ನ ತಂತಿಗಳು
ಹೆಸರಿಡದ ರಾಗಗಳ ನುಡಿದಿದ್ದವು.
ಭಾವವಿಲ್ಲದ ರಾಗ, ಜೀವವಿಲ್ಲದ ತಾನ,
ಹೂವಿರದ ಗಿಡದಂತೆ ಸೊರಗಿದ್ದಿತು.

ಸಾಧನೆಗೆ ಮನಗೊಟ್ಟ ಗುರುಭಕ್ತಿಯಿಹ ಕಲಿಕೆ
ಬಾಧೆಯೆಂದೆನಿಸುವಗೆ ವಿದ್ಯೆಯೆಲ್ಲಿ?
ಕರತಾಡನದ ನಡುವೆ ಕೊರತೆಯಿಹುದೆಂಬರಿವು
ಕೊರೆಯುತಿರೆ ಗಾನಮಾಧುರ್ಯವೆಲ್ಲಿ?

ಕೊನೆಗೊಮ್ಮೆ ಕೈಚೆಲ್ಲಿ ಸಂಗೀತವನು ಬಿಟ್ಟು
ಜನರಂತೆ ಜೀವಿಸಲು ನಿರ್ಧರಿಸಿದ.
ಮನೆಗೆ ಬೀಗವ ಜಡಿದು ಮನದಿ ಭಾರವ ತಳೆದು
ನನಗೆ ಮುಕ್ತಿಯನಿತ್ತು ದೂರ ನಡೆದ.

ದ್ವಾರ ಹಿಡಿದಿಡಬಹುದೆ? ನಾದಮಯವೀ ಜಗವು -
ಸ್ವರ-ರಾಗ-ತಾನಗಳೆ ಸಹಜಭಾಷೆ.
ಯಾರಾದರೂ ಬಂದು ಶ್ರುತಿ ಕಟ್ಟಿ ಮೀಟಿದರೆ
ಭೈರವಿಯನಿನ್ನೊಮ್ಮೆ ನುಡಿಯುವಾಸೆ!





Comments