Search This Blog

Total Pageviews

Monday, 12 February 2018

ಗಡಿನಾಡ ಬೇಲೂರು ಖಿದ್ರಾಪುರ

ಕರ್ನಾಟಕದಲ್ಲಿ ಶಿಲ್ಪಕಲಾ ಸೌಂದರ್ಯವನ್ನು ಉತ್ತುಂಗಕ್ಕೇರಿಸಿರುವ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನೇ ಹೋಲುವ ದೇಗುಲವೊಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಇದೆಯೆಂದರೆ ಯಾರಿಗೇ ಆದರೂ ಅಚ್ಚರಿಯಾಗದಿರದು. ಹೌದು, ಕೊಲ್ಹಾಪುರ ಜಿಲ್ಲೆಗೆ ಸೇರಿದ ಶಿರೋಳ ತಾಲ್ಲೂಕಿನ ಖಿದ್ರಾಪುರ ಎಂಬ ಸಣ್ಣ ಹಳ್ಳಿಯ "ಕೋಪೇಶ್ವರ" ಶಿವ ದೇವಾಲಯವೇ ಆ ಸ್ಮಾರಕ. ಕೃಷ್ಣಾ ನದಿಯ ದಡದಲ್ಲಿರುವ ಖಿದ್ರಾಪುರ ಕರ್ನಾಟಕಕ್ಕೆ ಅಂಟಿಕೊಂಡಂತಿರುವ ಮಹಾರಾಷ್ಟ್ರದ ಒಂದು ಹಳ್ಳಿ. ವಾಸ್ತವವಾಗಿ ಈ ಊರಿನಲ್ಲಿ ಹರಿಯುವ ಕೃಷ್ಣಾ ನದಿಯ ಒಂದು ದಡ ಮಹಾರಾಷ್ಟ್ರಕ್ಕೆ ಸೇರಿದರೆ ಮತ್ತೊಂದು ದಡ ಕರ್ನಾಟಕಕ್ಕೆ ಸೇರುತ್ತದೆ. ಹತ್ತಿರದ ಊರುಗಳಿಂದ ಎರಡೂ ರಾಜ್ಯದ ಭಕ್ತರು ಈ ದೇಗುಲಕ್ಕೆ ಹೋಗುತ್ತಾರೆ. ಶಿವರಾತ್ರಿಯ ಸಮಯದಲ್ಲಿ ಈ ದೇಗುಲ ವಿಶೇಷ ಪೂಜೆಗಳಿಂದ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತದೆ.

  ಚಿತ್ರ ೧: ಕೋಪೇಶ್ವರ ಶಿವ ದೇವಾಲಯ: ಹಿಂಭಾಗದಿಂದ ಕಾಣಸಿಗುವ ಭವ್ಯ ನೋಟ

ಸುತ್ತಲಿನ ಕೆಲವು ಊರುಗಳನ್ನು ಬಿಟ್ಟರೆ ಹೆಚ್ಚು ಜನರಿಗೆ ಮನೋಹರ ಶಿಲ್ಪಕಲೆಯ ಬೀಡಾದ ಖಿದ್ರಾಪುರದ ಕೋಪೇಶ್ವರ ದೇವಾಲಯದ ಬಗ್ಗೆ ತಿಳಿದಿರುವುದು ಕಡಿಮೆ. ಈ ದೇವಾಲಯವನ್ನು ಯಾರು ಯಾವಾಗ ಕಟ್ಟಿಸಿದರೆಂಬ ಸಂಪೂರ್ಣ ಮಾಹಿತಿ ಇಲ್ಲವಾದರೂ, ದೊರೆತಿರುವ ಶಾಸನಗಳ ಪ್ರಕಾರ ೭ನೇ ಶತಮಾನದಲ್ಲಿಯೇ ಇಲ್ಲಿ ಬಾದಾಮಿಯ ಚಾಲುಕ್ಯರು ದೇವಾಲಯ ಕಟ್ಟಿಸುವ ಪ್ರಯತ್ನಗಳನ್ನು ಮಾಡಿರುವುದು ಗೋಚರಿಸುತ್ತದೆ. ನಂತರ ನೂರಾರು ವರ್ಷಗಳು ಇದರ ಬಗ್ಗೆ ಯಾವ ಉಲ್ಲೇಖಗಳೂ ಇಲ್ಲ. ಹನ್ನೊಂದು ಮತ್ತು ಹನ್ನೆರಡನೇ ಶತಮಾನಗಳಲ್ಲಿ ಇಲ್ಲಿ ಆಡಳಿತ ನಡೆಸುತ್ತಿದ್ದ ಶಿಲಾಹಾರ ವಂಶದ ರಾಜರು ಕೋಪೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಬಹುಪಾಲು ಕಾರಣೀಭೂತರಾಗಿರುವುದು ಪ್ರಶ್ನಾತೀತ. ನಂತರದ ದಿನಗಳಲ್ಲಿ ದೇವಗಿರಿಯ ಸೇವುಣ ಯಾದವರೂ ಸಹ ಈ ದೇಗುಲಕ್ಕೆ ದತ್ತಿ ನೀಡಿರುವ ದಾಖಲೆಗಳು ದೊರೆತಿವೆ.

  ಚಿತ್ರ ೨: ಹೊಯ್ಸಳ ವಾಸ್ತುಶಿಲ್ಪವನ್ನೇ ಹೋಲುವ ದೇಗುಲದ ಹೊರಭಿತ್ತಿಗಳು

ಖಿದ್ರಾಪುರದ ಕೋಪೇಶ್ವರ ದೇಗುಲಕ್ಕೂ ಕನ್ನಡ ನಾಡಿನ ಕಳಶಪ್ರಾಯವಾದ ಬೇಲೂರು, ಹಳೇಬೀಡು, ಸೋಮನಾಥಪುರಗಳ ಹೊಯ್ಸಳ ದೇವಾಲಯಗಳಿಗೂ ಮೊದಲ ನೋಟಕ್ಕೆ ಕಾಣಸಿಗುವ ಸಾಮ್ಯ ಅಪಾರ. ಆನೆಗಳ ಶಿಲ್ಪಗಳ ಬೆನ್ನೇರಿ ನಕ್ಷತ್ರಾಕಾರದ ಜಗತಿಯ ಮೇಲೆ ದೇವಸ್ಥಾನವನ್ನು ಕಟ್ಟಿರುವ ರೀತಿಯಲ್ಲಿರಬಹುದು, ಗರ್ಭಗುಡಿ, ಅಂತರಾಳ ಮತ್ತು ನವರಂಗಗಳನ್ನೊಳಗೊಂಡ ದೇಗುಲದ ಒಳ ವಿನ್ಯಾಸದಲ್ಲಿರಬಹುದು, ಹೊರಗಣ ಭಿತ್ತಿಯ ಅಷ್ಟಭುಜ ಮತ್ತು ನಕ್ಷತ್ರಾಕಾರಗಳು, ಅವುಗಳ ಜ್ಯಾಮಿತೀಯ ಅನುರೂಪತೆ ಮತ್ತು ಅವುಗಳ ಮೇಲಿನ ದೇವದೇವತೆಗಳ ಮತ್ತು ಸಾಲಭಂಜಿಕೆಯರ ಕೆತ್ತನೆಗಳಲ್ಲಿರಬಹುದು, ಹೊಯ್ಸಳ ವಾಸ್ತುಶಿಲ್ಪದ ಮೊಹರು ಎದ್ದು ಕಾಣುತ್ತದೆ. ಆದರೆ ಅಲ್ಲಿಗೇ ನಿಲ್ಲದೆ, ಈ ದೇವಸ್ಥಾನ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುವುದರಲ್ಲಿಯೂ ಹಿಂದೆ ಬೀಳುವುದಿಲ್ಲ.

  ಚಿತ್ರ ೩: ಖಿದ್ರಾಪುರ ದೇಗುಲದ ಅನುರೂಪತೆ

  ಚಿತ್ರ ೪: ಕೋಪೇಶ್ವರ ದೇವಸ್ಥಾನದ ನಕ್ಷತ್ರಾಕಾರದ ವಿನ್ಯಾಸ   ಚಿತ್ರ ೫: ದೇಗುಲದ ಹೊರಭಿತ್ತಿಯ ಸುತ್ತ ಸುಂದರ ಮದನಿಕೆಯರು

ಪೇಶ್ವೆಯವರ ಕಾಲದ ಹೊರಗೋಡೆಯನ್ನು ಹಾದು ಒಳಹೋದ ತಕ್ಷಣ ಕಾಣಸಿಗುವುದು ಭವ್ಯವಾದ ಈ ದೇಗುಲದ "ಸ್ವರ್ಗ ಮಂಟಪ". ದೇವಾಲಯಗಳ ಮಟ್ಟಿಗೆ ಇದೊಂದು ಅಪರೂಪದ ಪ್ರಯತ್ನ. ಸ್ವರ್ಗದ ಹೆಸರಷ್ಟೇ ಅಲ್ಲ, ಈ ಮಂಟಪದ ರಚನೆಯೂ ಯಾರನ್ನೇ ಆದರೂ ಆಶ್ಚರ್ಯಚಕಿತರನ್ನಾಗಿಸುವುದರಲ್ಲಿ ಸಂದೇಹವಿಲ್ಲ. ವರ್ತುಲಾಕಾರದ ಈ ಬೃಹತ್ ಮಂಟಪಕ್ಕೆ ಆಧಾರವಾಗಿ ನಿಂತಿರುವುದು ಸಮಾನಕೇಂದ್ರದ ಮೂರು ಸುತ್ತುಗಳ ೪೮ ಕಂಬಗಳು. ಸೂಕ್ಷ್ಮ ಕೆತ್ತನೆಗಳನ್ನೊಳಗೊಂಡ ಈ ಕಂಬಗಳ ವಿನ್ಯಾಸ ಸೌಂದರ್ಯದಲ್ಲಿ ಒಂದರ ಮೇಲೊಂದು ಪೈಪೋಟಿ ನಡೆಸುತ್ತಿರುವಂತೆ ತೋರುತ್ತದೆ. ಸ್ವರ್ಗ ಮಂಟಪದ ಮಧ್ಯದಲ್ಲಿ ನಿಂತು ತಲೆ ಎತ್ತಿ ಮೇಲೆ ನೋಡಿದರೆ ಅದೋ ಹೊರ ಪ್ರಪಂಚಕ್ಕೊಂದು ಗವಾಕ್ಷ! ಸಾಮಾನ್ಯವಾಗಿ ಸುಂದರ ಕೆತ್ತನೆಯಿಂದ ಪೂರಿತವಾದ ಭುವನೇಶ್ವರಿಯಿಂದ ಮುಚ್ಚಲ್ಪಡುವ ಮೇಲ್ಛಾವಣಿ ಇಲ್ಲಿ ಇಲ್ಲವೇ ಇಲ್ಲ! ಸುಂದರವಾದ ಪೃತ್ತಾಕಾರದ ಈ ರಂಧ್ರ ಸೂರ್ಯನ ಬೆಳಕು ನೇರವಾಗಿ ಒಳ ಬರುವಂತಾಗಿಸಿ ಯಾತ್ರಿಕರಿಗೆ ಒಂದು ಅಲೌಕಿಕ ಅನುಭವವನ್ನೇ ಕೊಡುತ್ತದೆ. ಆ ರಂಧ್ರವನ್ನು ಎತ್ತಿ ಹಿಡಿಯಲೋ ಎಂಬಂತೆ ಸುತ್ತ ಅಷ್ಟದಿಕ್ಪಾಲಕರು ತಮ್ಮ ತಮ್ಮ ವಾಹನಗಳ ಮೇಲೆ ಆಸೀನರಾಗಿರುವ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ. ಹಿಂದಿನ ಕಾಲದಲ್ಲಿ ಹೋಮ ಹವನಗಳನ್ನು ನಡೆಸಲು ಸ್ವರ್ಗ ಮಂಟಪವನ್ನು ಬಳಸಲಾಗುತ್ತಿತ್ತೆಂದೂ, ಆದ್ದರಿಂದ ಅಲ್ಲಿ ಮೇಲ್ಛಾವಣಿಯನ್ನು ಖಾಲಿ ಬಿಡಲಾಗಿದೆ ಎನ್ನುವುದು ಒಂದು ವಾದ.

  ಚಿತ್ರ ೬: ಸ್ವರ್ಗ ಮಂಟಪದಿಂದ ಹೊರಜಗತ್ತಿಗೊಂದು ರಂಧ್ರ

  ಚಿತ್ರ ೭: ಸ್ವರ್ಗ ಮಂಟಪವನ್ನು ಎತ್ತಿ ಹಿಡಿದಿರುವ ಅಷ್ಟದಿಕ್ಪಾಲಕರಲ್ಲಿ ಐರಾವತವನ್ನೇರಿದ ಇಂದ್ರನ ಸುಂದರ ಮೂರ್ತಿ

ಸ್ವರ್ಗ ಮಂಟಪದಿಂದ ಒಳಗೆ ನಡೆದರೆ ಹಲವು ದೊಡ್ಡ ಕಂಬಗಳನ್ನೊಳಗೊಂಡ ಬೃಹತ್ ನವರಂಗ. ನವರಂಗಕ್ಕೆ ಸ್ವರ್ಗ ಮಂಟಪದಿಂದಷ್ಟೇ ಅಲ್ಲದೆ ದೇಗುಲದ ಎಡ ಮತ್ತು ಬಲ ಭಾಗಗಳಿಂದಲೂ ನೇರ ಪ್ರವೇಶವಿದೆ. ಬೇಲೂರಿನ ಚನ್ನಕೇಶವ ದೇವಾಲಯದ ಒಳಾಂಗಣವೇ ನೆನಪಿಗೆ ಬಂದರೆ ಆಶ್ಚರ್ಯವಿಲ್ಲ. ಅದೇ ರೀತಿಯ ಸೂಕ್ಷ್ಮ ಕೆತ್ತನೆಯ ಕಂಬಗಳು, ದ್ವಾರಪಾಲಕ ಮೂರ್ತಿಗಳು, ಮತ್ತಿತರ ಶಿಲ್ಪಗಳು. ನವರಂಗದಿಂದ ಅಂತರಾಳ, ಅಲ್ಲಿಂದ ಗರ್ಭಗುಡಿ. ಗರ್ಭಗುಡಿಯೊಳಗೆ ಎರಡು ಲಿಂಗಗಳು! ಒಂದು "ಧೋಪೇಶ್ವರ" ಎಂದು ಕರೆಸಿಕೊಳ್ಳುವ ಲಿಂಗದ ರೂಪದಲ್ಲಿರುವ ವಿಷ್ಣು, ಮತ್ತೊಂದು ಕೋಪೇಶ್ವರ ಶಿವ ಲಿಂಗ. ಹೊರಗಿನ ಸ್ವರ್ಗ ಮಂಟಪದ ಒಂದು ಭಾಗದಲ್ಲಿ ಬ್ರಹ್ಮನ ಸುಂದರ ಶಿಲ್ಪವಿದ್ದು, ನವರಂಗದೊಳಗೆ ನಾರಾಯಣನ ಶಿಲ್ಪವಿದೆ. ಹೀಗೆ ಸ್ವರ್ಗಮಂಟಪದಲ್ಲಿ ನಿಂತು ನೋಡಿದರೆ ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರನ್ನು ಒಟ್ಟಿಗೆ ನೋಡುವ ಭಾಗ್ಯ ಯಾತ್ರಿಕನಿಗೆ.

  ಚಿತ್ರ ೮: ನವರಂಗದೊಳಗಿನ ಸೂಕ್ಷ್ಮ ಕೆತ್ತನೆಯ ಕಂಬಗಳು

ಇನ್ನು ದೇಗುಲದ ಹೊರಭಾಗದ ಪರಿಸ್ಥಿತಿಯನ್ನು ನೋಡಿದರೆ ಆ ಕಾಲದ ಹಲವು ದೇಗುಲಗಳಂತೆ ಇದೂ ಸಹ ಆಗಿನ ಇಸ್ಲಾಮೀಯ ರಾಜರ ಅತಿಕ್ರಮಣದಿಂದಾಗಿ ಬಹಳ ನಷ್ಟಗಳನ್ನು ಅನುಭವಿಸಿರುವುದು ಗೋಚರಿಸುತ್ತದೆ. ಮೂಲ ದೇವಸ್ಥಾನವೇ ಸಂಪೂರ್ಣವಾಗಿ ಇದ್ದಿದ್ದರೆ ಇನ್ನೂ ಅದರ ಸೌಂದರ್ಯ ಹೇಗಿದ್ದಿರಬಹುದೆಂದು ಮನಸ್ಸು ಯೋಚಿಸಿದರೆ ಅಚ್ಚರಿಯಿಲ್ಲ. ಸೊಂಡಿಲುಗಳನ್ನು ಕಳೆದುಕೊಂಡಿದ್ದರೂ ಸುಮಾರು ೯೫ ಆನೆಗಳು ತಮ್ಮ ಬೆನ್ನ ಮೇಲೆ ಇಡೀ ದೇವಸ್ಥಾನವನ್ನು ಹೊತ್ತುಕೊಂಡಂತೆ ಚಿತ್ರಿಸಿರುವ ಶಿಲ್ಪಿಗಳ ಕೌಶಲ್ಯಕ್ಕೆ ತಲೆದೂಗದವರಿಲ್ಲ. ಹೊರಭಿತ್ತಿಯ ಮೇಲೆ ಕಾಣುವ ಬ್ರಹ್ಮ, ಗಣಪತಿ, ಸರಸ್ವತಿ, ಅಷ್ಟದಿಕ್ಪಾಲಕರು, ಮತ್ತಿತರರ ಶಿಲ್ಪಗಳಂತೂ ಮತ್ತೆ ಹೊಯ್ಸಳರ ನೆನಪು ತರುವುದು ಶತಸಿದ್ಧ.

ಕೋಪೇಶ್ವರ ಎಂಬ ಹೆಸರೇಕೆ?

ಇಷ್ಟೆಲ್ಲಾ ನೋಡಿದ ಮೇಲೆ ಯಾತ್ರಿಕನಿಗೆ ಕುತೂಹಲಗಳ ಗೊಂಚಲೇ ಎದುರಾದರೆ ಆಶ್ಚರ್ಯವಿಲ್ಲ. ಒಂದೇ ಗರ್ಭಗುಡಿಯಲ್ಲಿ ಶಿವ ಮತ್ತು ವಿಷ್ಣು ಇಬ್ಬರೂ ಏಕೆ? ಈ ಕೋಪೇಶ್ವರನೆಂಬ ಹೆಸರೇಕೆ? ಎಲ್ಲ ಶಿವ ದೇವಾಲಯಗಳಲ್ಲೂ ಕಾಣಸಿಗುವ ನಂದಿಯ ವಿಗ್ರಹ ಇಲ್ಲೇಕಿಲ್ಲ? ಇತ್ಯಾದಿ. ಇದಕ್ಕೆ ಈ ದೇವಾಲಯದ ಬಗೆಗಿನ ಪ್ರತೀತಿಯನ್ನು ಕೇಳಿದರೆ ಉತ್ತರಗಳು ದೊರೆಯುತ್ತವೆ.

ದಕ್ಷಪ್ರಜಾಪತಿಯ ಮಗಳಾದ ದಾಕ್ಷಾಯಣಿ ತನ್ನ ತಂದೆಯ ಮಾತನ್ನು ಮೀರಿ ಶಿವನನ್ನು ಮದುವೆಯಾಗಿರುತ್ತಾಳೆ. ಆದರೆ ದಕ್ಷನಿಗೆ ಶಿವನ ಮೇಲೆ ಎಲ್ಲಿಲ್ಲದ ದ್ವೇಷ, ತಾತ್ಸಾರ. ದಕ್ಷನು ಮಹಾಯಜ್ಞವೊಂದನ್ನೇರ್ಪಡಿಸಿ ದೇವಾನುದೇವತೆಗಳನ್ನೆಲ್ಲ ಅದಕ್ಕೆ ಕರೆದರೂ ಶಿವ-ದಾಕ್ಷಾಯಣಿಯರನ್ನು ಕರೆಯುವುದಿಲ್ಲ. ಶಿವ ಬೇಡವೆಂದು ಎಷ್ಟು ಹೇಳಿದರೂ ತಂದೆಯ ಮೇಲಿನ ನಂಬಿಕೆ ಮತ್ತು ಪ್ರೀತಿಗಳಿಂದ ದಾಕ್ಷಾಯಣಿ ನಂದಿಯ ಮೇಲೇರಿ ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ಬಂದಾಗ ದಕ್ಷ ಅವಳನ್ನೂ ಶಿವನನ್ನೂ ಅವಮಾನ ಮಾಡುತ್ತಾನೆ. ಆ ಅವಮಾನವನ್ನು ಸಹಿಸಲಾರದೆ ದಾಕ್ಷಾಯಣಿ ಯಜ್ಞಕುಂಡಕ್ಕೇ ಹಾರಿ ತನ್ನ ಪ್ರಾಣ ತ್ಯಜಿಸುತ್ತಾಳೆ. ವಿಷಯ ತಿಳಿದ ಶಿವ ಕೆಂಡಾಮಂಡಲನಾಗಿ ಯಜ್ಞ ನಡೆಯುತ್ತಿದ್ದ ಸ್ಥಳಕ್ಕೆ ಬಂದು ದಕ್ಷನ ತಲೆಯನ್ನೇ ಕಡಿದು ಹಾಕುತ್ತಾನೆ. ದೇವಾನುದೇವತೆಗಳ ನಿರಂತರ ಓಲೈಕೆಯ ಫಲವಾಗಿ ದಕ್ಷನಿಗೆ ಮೇಕೆಯ ತಲೆಯನ್ನಿಟ್ಟು ಮತ್ತೆ ಬದುಕಿಸಲಾಗುತ್ತದೆ, ಯಜ್ಞವನ್ನು ಪೂರ್ಣಗೊಳಿಸಲಾಗುತ್ತದೆ. ಆದರೆ ಕೋಪೋದ್ರಿಕ್ತನಾದ ಮತ್ತು ಶೋಕತಪ್ತನಾದ ಶಿವನನ್ನು ತಣಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಬಂದ ವಿಷ್ಣು ಶಿವನನ್ನು ತಬ್ಬಿಕೊಂಡು ಸಾಂತ್ವನಗೊಳಿಸಲು ಪ್ರಯತ್ನಿಸುತ್ತಾ ಖಿದ್ರಾಪುರದಲ್ಲಿ ಈ ದೇಗುಲವಿರುವ ಸ್ಥಳಕ್ಕೆ ಕರೆತಂದನೆಂಬ ಪ್ರತೀತಿ. ಹಾಗೆ ವಿಷ್ಣು ಶಿವನಿಗೆ ನೆರವಾಗಲು ಅವನೊಡನೆಯೇ ಇದ್ದು ಅವನ ಕೋಪಶಮನ ಮಾಡಿದ್ದರಿಂದ ಇಲ್ಲಿನ ಗರ್ಭಗುಡಿಯಲ್ಲಿ ಇಬ್ಬರನ್ನೂ ಕಾಣಬಹುದು. ಅಷ್ಟೇ ಅಲ್ಲದೆ ಅಲ್ಲಿಗೆ ಬಂದಾಗ ಶಿವನು ಕೋಪಾವೇಶದಿಂದ ಇದ್ದುದರಿಂದ ಅವನಿಗೆ ಈ ಕ್ಷೇತ್ರದಲ್ಲಿ ಕೋಪೇಶ್ವರನೆಂದೇ ಹೆಸರಾಯಿತು. ನಂದಿಯು ದಾಕ್ಷಾಯಣಿಯೊಡನೆ ಹೋಗಿದ್ದರಿಂದ ಇಲ್ಲಿ ಶಿವನೊಡನೆ ಕಾಣಸಿಗುವುದಿಲ್ಲ. ಶಿವನ ಆ ಕೋಪದ ಕಾರಣದಿಂದಲೇ ಇರಬಹುದು, ಇಲ್ಲಿ ಅವನಿಗೆ ಮೊಸರನ್ನದ ಅಲಂಕಾರ ವಿಶೇಷ. ಅವನ ಕೋಪ ಶಮನವಾಗಲೋ ಎಂಬಂತೆ ತಣ್ಣಗಿನ ಮೊಸರನ್ನವನ್ನು ಬೆಣ್ಣೆಯಲಂಕಾರದಂತೆ ಇಲ್ಲಿ ಕೋಪೇಶ್ವರ ಲಿಂಗಕ್ಕೆ ಲೇಪಿಸುತ್ತಾರೆ. ಅದರ ಸೊಗಸನ್ನು ನೋಡಿಯೇ ಸವಿಯಬೇಕು.

ಹೇಗೆ ತಲುಪುವುದು?

ಮೊದಲಿಗೆ "ಕೊಪ್ಪದ" ಮತ್ತು "ಕೋಪೇಶ್ವರವಾಡಿ" ಎಂಬ ಹೆಸರುಗಳಿಂದ ಕರೆಸಿಕೊಂಡಿದ್ದ ಈ ಚಿಕ್ಕ ಹಳ್ಳಿ ನಂತರ ಖೈದರ್ ಖಾನನ ಆಳ್ವಿಕೆಯಲ್ಲಿ ಖಿದ್ರಾಪುರವಾಯಿತು. ಮಹಾರಾಷ್ಟ್ರದ ಕಡೆಯಿಂದ ಇಲ್ಲಿಗೆ ತಲುಪಲು ಇಚ್ಛಿಸುವವರು ಕೊಲ್ಹಾಪುರದಿಂದ ಹೊರಟು ಇಚಲಕರಂಜಿಗೆ ಬಂದರೆ ಅಲ್ಲಿಂದ ಲಾಟ್, ಸೈನಿಕ ಟಾಕ್ಲಿ ಮಾರ್ಗವಾಗಿ ಖಿದ್ರಾಪುರಕ್ಕೆ ಹೋಗಲು ಎರಡು ಗಂಟೆಗಳಿಗೊಮ್ಮೆ ಮಹಾರಾಷ್ಟ್ರ ಸರಕಾರಿ ಸಾರಿಗೆ ಬಸ್ಸುಗಳು ದೊರೆಯುತ್ತವೆ. ಕೊಲ್ಹಾಪುರದಿಂದ ಶಿರೋಳ, ನರಸೋಬಾವಾಡಿ, ಕುರುಂದವಾಡ, ಸೈನಿಕ ಟಾಕ್ಲಿಯ ಮೂಲಕ ಸಹ ಸ್ವಂತ ವಾಹನದಲ್ಲಿ ಖಿದ್ರಾಪುರವನ್ನು ತಲುಪಬಹುದು. ಈ ಎರಡೂ ಮಾರ್ಗಗಳು ಕೊಲ್ಹಾಪುರದಿಂದ ೬೦ರಿಂದ ೭೦ ಕಿಲೋಮೀಟರ್ ದೂರದವು. ಕರ್ನಾಟಕದ ಕಡೆಯಿಂದಾದರೆ ಚಿಕ್ಕೋಡಿಯಿಂದ ೩೦ ಕಿಲೋಮೀಟರ್ ದೂರದಲ್ಲಿದೆ ಖಿದ್ರಾಪುರ. ಈ ಹಾದಿಯೂ ಸೈನಿಕ ಟಾಕ್ಲಿ ಊರಿನ ಮೂಲಕವೇ ಹಾದು ಹೋಗುತ್ತದೆ.
----

ತರಂಗದಲ್ಲಿ ಪ್ರಕಟವಾದ ಈ ಲೇಖನದ ಚಿತ್ರಗಳು: