ಹೀಗೊಂದು ಹಂಬಲ, ನೆನಪು, ಯೋಚನೆ...
ಅದೂ ಒಂದು ಕಾಲವಿತ್ತು. ಇಡೀ ಊರಿಗೆ ಊರೇ ಪರಿಚಿತವಿರುವಷ್ಟು ಊರೂ ಚಿಕ್ಕದಿರುತ್ತಿತ್ತು, ಬಹುಪಾಲು ಜನರೂ ಗುರುತಿರುತ್ತಿದ್ದರು. ಹೆಚ್ಚೇನೂ ಹಿಂದಕ್ಕೆ ಹೋಗಬೇಕಿಲ್ಲ. ಒಂದು ಇಪ್ಪತ್ತು-ಇಪ್ಪತ್ತೈದು ವರ್ಷಗಳು ಹಿಂದೆ ಹೋದರೂ ಸಾಕು. ಬೆಂಗಳೂರಿನಂತಹ ನಗರಿಯನ್ನು ಬಿಟ್ಟರೆ ಉಳಿದ ಹಲವು ಜಿಲ್ಲಾ ಕೇಂದ್ರಗಳಂತಹ ಎರಡನೇ ಶ್ರೇಣಿಯ ನಗರಗಳಿಗೂ ಇದು ಅನ್ವಯಿಸುತ್ತಿತ್ತು. ನಾನು ಕಂಡಂತೆ ಒಂದು ಹಂತಕ್ಕೆ ಹಾಸನ, ಮೈಸೂರುಗಳೂ ಇದಕ್ಕೆ ಸಾಕ್ಷಿ. ಮೊಬೈಲ್ ಫೋನುಗಳ, ಅಂತರ್ಜಾಲದ ಮತ್ತು ಸಾಮಾಜಿಕ ಜಾಲತಾಣಗಳ ಹಾವಳಿಯಿಲ್ಲದಾಗ್ಯೂ ಎಲ್ಲರೂ ಒಬ್ಬರಿಗೊಬ್ಬರು "connected" ಆಗಿ ಇದ್ದ ಕಾಲ. ಈ ರೀತಿಯ ಬಿರುಸಾದ ಸಂಪರ್ಕ ಇಡೀ ಊರಿನ ಜನಸಾಮಾನ್ಯರಲ್ಲಿ ಹಾಸುಹೊಕ್ಕಾಗಿತ್ತು. ಒಬ್ಬರಿಗೊಬ್ಬರು ಕಷ್ಟಸುಖಗಳಲ್ಲಿ ಆಗುವುದು ಅನ್ನುವುದನ್ನು ಪಕ್ಕಕ್ಕಿಟ್ಟರೂ ಸಹ ಇಡೀ ಊರಿನ ನಾಡಿಮಿಡಿತ ಎಲ್ಲರಿಗೂ ಹೇಗೋ ಪರಿಚಿತವಿರುತ್ತಿತ್ತು. ಈ ರೀತಿಯ ಸಂಪರ್ಕಗಳನ್ನು ಕಲ್ಪಿಸುವಲ್ಲಿ ಮತ್ತು ಊರಿನ ನಾಡಿಮಿಡಿತವನ್ನು ಪಸರಿಸುವಲ್ಲಿ ಕೇಂದ್ರಗಳಾಗಿ ನೆರವಾಗುತ್ತಿದ್ದ ಊರಿನ ಕೆಲವು ಚಿರಪರಿಚಿತ ಜಾಗಗಳೂ ಇರುತ್ತಿದ್ದವು, ಅಂತಹ ವ್ಯಕ್ತಿಗಳೂ ಇರುತ್ತಿದ್ದರು. ಹಾಗೆಂದು ನಾನಿಲ್ಲಿ ಹೇಳುತ್ತಿರುವುದು ಕಾಲಹರಣ ಮಾಡುತ್ತಾ ಗೊಡ್ಡು ಹರಟೆಗಳನ್ನು ಹರಟುವ ಸೋಮಾರಿ ಕಟ್ಟೆಗಳು ಮತ್ತು ಅದರಲ್ಲಿ ಪಾಲ್ಗೊಳ್ಳುತ್ತಿದ್ದ ಜನರ ಬಗ್ಗೆಯಲ್ಲ. ತಮ್ಮ ಸುತ್ತಲಿನ ಜನಜೀವನವನ್ನು ಅರಿತುಕೊಳ...