Search This Blog

Total Pageviews

Saturday, 29 August 2015

ಭಾರತದ ಕೈತಪ್ಪಿದ ಮಹಾನ್ ಗಣಿತಜ್ಞ, ಭಾಷಾ ಕೋವಿದ, ತರ್ಕಶಾಸ್ತ್ರಜ್ಞ ಬಾಲಗಂಗಾಧರ ತಿಲಕ್

ಇಸವಿ ೧೯೬೬-೬೭. ಮಹಾರಾಷ್ಟ್ರದಲ್ಲೊಂದು ಶಾಲೆ. ಕೆಳಗಿನ ಮೂರು ಸನ್ನಿವೇಶಗಳು.

***
ಗುರುಗಳು ಪ್ರಶ್ನೆ ಕೇಳಿದರು - "ಐದು ಕುರಿಗಳು ಒಂದು ಹುಲ್ಲುಗಾವಲಿನ ಎಲ್ಲ ಹುಲ್ಲನ್ನೂ ಇಪ್ಪತ್ತೆಂಟು ದಿನಗಳಲ್ಲಿ ತಿಂದು ಮುಗಿಸುವುದಾದರೆ ಅದನ್ನು ಇಪ್ಪತ್ತೇ ದಿನಗಳಲ್ಲಿ ಮುಗಿಸಲು ಎಷ್ಟು ಕುರಿಗಳು ಇರಬೇಕಾಗುತ್ತದೆ?" "ಏಳು ಕುರಿಗಳು, ಸರ್!" ಥಟ್ ಎಂದು ಉತ್ತರ ಬಂದಿತು ಕ್ಲಾಸಿನ ಹಿಂದಿನಿಂದ, ಪ್ರಶ್ನೆ ಕೇಳಿ ಮುಗಿಸಿದ ತಕ್ಷಣವೇ. "ಯಾರದು ಲೆಕ್ಕವನ್ನು ಮಾಡದೇ ಹಾಗೇ ಉತ್ತರಿಸಿದ್ದು?" ಗುಡುಗುತ್ತಾ ಗುರುಗಳು ಉತ್ತರ ಬಂದೆಡೆಗೆ ಹೋದರು. ಕೆಲವು ಹುಡುಗರು ಒಬ್ಬನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರು. ಗುರುಗಳು ಅವನನ್ನು ಕೇಳಿದರು "ತೋರಿಸು, ನೀನು ಲೆಕ್ಕ ಎಲ್ಲಿ ಮಾಡಿದ್ದೀಯಾ ಅಂತ"? ಹುಡುಗ ನಸುನಗುತ್ತಾ ಪುಸ್ತಕದ ಬದಲು ತನ್ನ ತಲೆಯ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದ. "ಯಾವಾಗಲೂ ಲೆಕ್ಕಗಳನ್ನು ಪುಸ್ತಕದಲ್ಲಿ ಕ್ರಮವಾಗಿ ಮಾಡಿ ತೋರಿಸಬೇಕು" ಎಂದರು ಗುರುಗಳು. "ಏಕೆ ಸರ್? ಮೌಖಿಕವಾಗಿಯೇ ಮಾಡುವಷ್ಟು ಸುಲಭವಾಗಿದೆಯಲ್ಲ?" ಎಂಬ ಹುಡುಗನ ಮಾರುತ್ತರಕ್ಕೆ ಗುರುಗಳಲ್ಲಿ ಜವಾಬಿರಲಿಲ್ಲ. ಅವನ ವಯಸ್ಸಿನ ಎಲ್ಲರಿಗೂ ಹಲವು ಬಾರಿ ಹೇಳಿಕೊಟ್ಟರೂ ಹತ್ತದ ಗಣಿತದ ವಿದ್ಯೆ ಅವನಿಗೆ ಮಾತ್ರ ಸುಲಲಿತವಾಗಿತ್ತು.
***
ಭಾಷಾ ತರಗತಿಯ ಪ್ರಾಧ್ಯಾಪಕರು ಶ್ರೀಹರ್ಷನ ನೈಷಧಚರಿತೆಯನ್ನು ಪಾಠ ಮಾಡುತ್ತಾ ಕೆಲವು ಕಷ್ಟವಾದ ಪಂಕ್ತಿಗಳಿಗೆ ಮರಾಠಿ ಅನುವಾದವನ್ನು ವಿದ್ಯಾರ್ಥಿಗಳಿಗೆ ಬರೆಸುತ್ತಿದ್ದರು. ಆ ಹುಡುಗನ ಬಳಿ ಹೋಗಿ ನೋಡುತ್ತಾರೆ, ಅವನ ಪುಸ್ತಕ ಖಾಲಿ. ಒಂದು ಅಕ್ಷರವನ್ನೂ ಬರೆದುಕೊಂಡಿರಲಿಲ್ಲ! ಏಕೆ ಹೀಗೆಂದು ಪ್ರಾಧ್ಯಾಪಕರು ಸಿಟ್ಟಿನಿಂದ ಕೇಳಿದಾಗ ಹುಡುಗ ಕೊಟ್ಟ ಉತ್ತರ ಇದು - "ಇನ್ನೊಬ್ಬರು ಹೇಳಿಕೊಟ್ಟ ಅನುವಾದವನ್ನು ಬರೆದುಕೊಂಡು ಅದನ್ನು ಓದಿದರೆ ಎಷ್ಟು ಅರ್ಥವಾಗುತ್ತದೋ, ಅದಕ್ಕಿಂತ ಹೆಚ್ಚು ಪರಿಣಮಕಾರಿಯಾಗಿ ಅರ್ಥವಾಗಬೇಕಿದ್ದರೆ ವಿದ್ಯಾರ್ಥಿಗಳು ತಾವೇ ಪ್ರಯತ್ನಿಸಿ ಅನುವಾದ ಮಾಡಿಕೊಳ್ಳಬೇಕು. ಆಗ ಅದು ತುಂಬಾ ದಿನಗಳವರೆಗೂ ನೆನಪಿನಲ್ಲುಳಿಯುತ್ತದೆ. ನಾನು ಹಾಗೇ ಮಾಡುತ್ತೇನೆ". ಇನ್ನೊಮ್ಮೆ ಉಕ್ತಲೇಖನದಲ್ಲಿ ಕೊಟ್ಟ "ಸಂತ" ಎಂಬ ಪದವನ್ನು ಮೂರು ಬೇರೆ ಬೇರೆ ರೀತಿಗಳಲ್ಲಿ ಬರೆದು ತೋರಿಸಿದ್ದ ಈ ಬಾಲಕ. ಪ್ರಾಧ್ಯಾಪಕರು ಅದನ್ನು ಒಪ್ಪಿಕೊಳ್ಳದಿದಾಗ ನೇರವಾಗಿ ಮುಖ್ಯೋಪಾಧ್ಯಾಯರ ಬಳಿ ಹೋಗಿ ತನ್ನ ಉತ್ತರವನ್ನು ತೋರಿಸಿ ಅವರಿಂದ ಅದು ಸರಿಯಾಗಿದೆಯೆಂಬ ಒಪ್ಪಿಗೆಯೊಡನೆ ಪೂರ್ತಿ ಅಂಕಗಳನ್ನೂ ಗಳಿಸಿಕೊಂಡಿದ್ದ!
***
ಎಂದಿನಂತೆ ಗುರುಗಳು ಪಾಠ ಮಾಡಲು ತರಗತಿಗೆ ಬಂದಾಗ ಎಲ್ಲೆಲ್ಲೂ ಕಡಲೆಕಾಯಿ ಬೀಜದ ಸಿಪ್ಪೆಗಳನ್ನು ನೋಡಿ ಕೋಪೋದ್ರಿಕ್ತರಾಗಿ "ಯಾರು ಇಲ್ಲಿ ಶೇಂಗಾ ತಿಂದು ಕಸ ಹಾಕಿರುವವರು?" ಎಂದು ಕೇಳಿದರು. ಯಾರೊಬ್ಬರೂ ಬಾಯಿ ಬಿಡಲಿಲ್ಲ. "ಹಾಗಾದರೆ ನಾನು ಎಲ್ಲರನ್ನೂ ಶಿಕ್ಷಿಸುತ್ತೇನೆ" ಎಂದು ಗುರುಗಳು ಬೆತ್ತದಿಂದ ಎಲ್ಲ ವಿದ್ಯಾರ್ಥಿಗಳಿಗೂ ಎರಡೆರಡು ಹೊಡೆತ ನೀಡುತ್ತಾ ಬಂದರು. ಗಣಿತ ಸಂಸ್ಕೃತಗಳಲ್ಲಿ ಚುರುಕಾದ ಈ ವಿದ್ಯಾರ್ಥಿಯ ಬಳಿ ಬಂದಾಗ ಅವನು ಮಾತ್ರ ಹೊಡೆತಕ್ಕಾಗಿ ಕೈ ಹೊರಚಾಚಲೇ ಇಲ್ಲ. "ನಾನು ಶೇಂಗಾ ತಿಂದಿಲ್ಲ, ಹಾಗಾಗಿ ನನ್ನನ್ನು ಶಿಕ್ಷಿಸುವುದು ತಪ್ಪಾಗುತ್ತದೆ" ಎಂದ. "ಹಾಗಾದರೆ ಯಾರು ತಿಂದು ಹೀಗೆ ಕಸ ಹಾಕಿದರೆಂದು ನೀನೇ ಹೇಳು" ಎಂದರು ಗುರುಗಳು. ಹುಡುಗ ಅದೇ ಸ್ವಾಭಿಮಾನದಿಂದಲೇ ಉತ್ತರ ಕೊಟ್ಟ - "ಚಾಡಿ ಹೇಳುವುದು ಒಳ್ಳೆಯದಲ್ಲವೆಂದು ತಂದೆಯವರು ಹೇಳಿಕೊಟ್ಟಿದ್ದಾರೆ. ನಾನು ಹೇಳುವುದಿಲ್ಲ"! ಬಾಲಕನ ನೇರನಡೆ ಮತ್ತು ಮಾತುಗಳು ಗುರುಗಳನ್ನೇ ತಬ್ಬಿಬ್ಬಾಗಿಸಿತು. ಸಿಟ್ಟಿನಿಂದ ಅವನನ್ನು ಹೊರಗಟ್ಟಿ ಅವನ ತಂದೆಗೆ ಹೇಳಿ ಕಳುಹಿಸಿದರು. ಸಂಪ್ರದಾಯಬದ್ಧನಾದ ತಾನು ಮನೆಯ ಹೊರಗೆ ಏನೂ ತಿನ್ನುವುದೇ ಇಲ್ಲವೆಂದೂ, ಹೊರಗೆ ತಿನ್ನಲು ತನಗೆ ಮನೆಯಲ್ಲಿ ಹಣವನ್ನೂ ನೀಡಲಾಗುವುದಿಲ್ಲವೆಂದೂ, ಒಬ್ಬಿಬ್ಬರ ತಪ್ಪಿಗೆ ತರಗತಿಯ ಎಲ್ಲರನ್ನೂ ಶಿಕ್ಷಿಸುವುದು ತಪ್ಪೆಂದೂ ಶಾಂತರೀತಿಯಲ್ಲಿ ತರ್ಕಬದ್ಧವಾಗಿ ವಾದಿಸಿ ಶಾಲೆಗೆ ಮರುಪ್ರವೇಶ ಪಡೆದ ಆ ಬಾಲಕ.
***
ಈ ಎಲ್ಲ ಘಟನೆಗಳು ನಡೆದಾಗ ಹನ್ನೊಂದು ಹನ್ನೆರಡು ವರ್ಷ ವಯಸ್ಸಿನ ಎಳೆತನದ ಆ ಬಾಲಕ ತನ್ನ ಪ್ರತಿಭೆ, ನ್ಯಾಯವಾದಿತನಗಳಿಂದ ಎಲ್ಲರ ಮನಗೆದ್ದಿದ್ದ. ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತಿದ್ದ ಈ ಹುಡುಗನೇ ಮುಂದೆ ಲೋಕಮಾನ್ಯನೆನಿಸಿಕೊಂಡ ಬಾಲಗಂಗಾಧರ ತಿಲಕ್. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಿಲಕರ ಪಾತ್ರ ಏನೆಂಬುದು ಹಲವರಿಗೆ ವೇದ್ಯವಾದ ವಿಚಾರವೇ. ಆಂಗ್ಲ ಶಾಸನದೆದುರಿಗೆ ಇಡೀ ಮಹಾರಾಷ್ಟ್ರವನ್ನು, ನಂತರ ದೇಶವನ್ನು ಬಡಿದೆಬ್ಬಿಸಿದ ಜನಾನುರಾಗಿ "ಬಳವಂತರಾವ್" ತಿಲಕ್. ಮೊದಲ ಬಾರಿಗೆ ರಾಜಸಂಸ್ಥಾನಗಳ ಪ್ರಾಮುಖ್ಯತೆಯನ್ನು ಬದಿಗೊತ್ತಿ ದೇಶದ ಉದ್ದಗಲಕ್ಕೂ ಜನರಿಗೆ "ಅಖಂಡ ಹಿಂದೂಸ್ತಾನ"ದ ಕಲ್ಪನೆ ಕಟ್ಟಿಕೊಟ್ಟವರು ತಿಲಕ್. ಸ್ವದೇಶೀ ವಸ್ತುಗಳ ಉಪಯೋಗ ಮತ್ತು ವಿದೇಶೀ ವಸ್ತುಗಳ ಬಹಿಷ್ಕಾರಕ್ಕಾಗಿ ಮೊದಲು ಕರೆ ಕೊಟ್ಟವರು ತಿಲಕ್. ಸ್ವರಾಜ್ಯಕ್ಕಾಗಿ ತನ್ನ ತನು ಮನಗಳನ್ನು ಒತ್ತೆಯಿಟ್ಟು ಕೊನೆಯುಸಿರಿರುವವರೆಗೂ ತೇಯ್ದುಕೊಂಡವರು ತಿಲಕ್. ಬ್ರಿಟಿಷರು ತಿಲಕರನ್ನು "ಭಾರತೀಯ ಅಶಾಂತಿಯ ಜನಕ" (father of Indian unrest) ಎಂದು ಕರೆದದ್ದರಲ್ಲಿ ಆಶ್ಚರ್ಯವೇನಿಲ್ಲ.

ದೇಶದ ಸ್ವಾತಂತ್ರ್ಯ ಚಳುವಳಿಯ ಮೊದಲ ನೇತಾರರು ಲೋಕಮಾನ್ಯ ತಿಲಕರು ಎಂಬುದು ಎಷ್ಟು ಸತ್ಯವೋ, ಅಷ್ಟೇ ಸತ್ಯವಾದ ವಿಚಾರ ಅವರು ತಮ್ಮ ಶತಮಾನದ ಅತಿ ದೊಡ್ಡ ಬಹುವಿದ್ಯಾಪಾರಂಗತರೂ ಹೌದೆಂಬುದು. ಆ ಸಂದರ್ಭದಲ್ಲಿ ದೇಶದಲ್ಲಿದ್ದ ಸಾಮಾಜಿಕ ಮತ್ತು ರಾಜಕೀಯ ತುಮುಲಗಳು ತಿಲಕರನ್ನು ಸಮಾಜ ಸುಧಾರಕರನ್ನಾಗಿಯೂ, ಪತ್ರಕರ್ತರನ್ನಾಗಿಯೂ, ಸ್ವಾತಂತ್ರ್ಯ ಹೋರಾಟಗಾರರನ್ನಾಗಿಯೂ ಮಾರ್ಪಡುವಂತೆ ಪ್ರೇರೇಪಿಸಿ ಒಬ್ಬ ನಿಪುಣ ಗಣಿತಜ್ಞ, ಭಾಷಾಜ್ಞಾನಿ, ತರ್ಕಶಾಸ್ತ್ರಜ್ಞ, ವಕೀಲ, ಸಂಶೋಧಕನನ್ನು ಭಾರತಾಂಬೆಯಿಂದ ಕಸಿದುಕೊಂಡಿದ್ದರಲ್ಲಿ ಎರಡು ಮಾತಿಲ್ಲ. ಮಹಾಪ್ರಾಜ್ಞ ತಿಲಕರ ಆ ಇನ್ನೊಂದು ಮುಖವನ್ನು ಕೆಲವು ಪ್ರಸಂಗಗಳೊಂದಿಗೆ ಪರಿಚಯಿಸುವ ಪ್ರಯತ್ನ ಇಲ್ಲಿದೆ.

ಚಿತ್ರ ೧: ತಿಲಕರ ಜೀವನ ಬಿಂಬಿಸುವ ತೈಲವರ್ಣ ಚಿತ್ರಗಳು ಮತ್ತು ಕಂಚಿನ ಮೂರ್ತಿ - ಕೇಸರಿ ವಾಡಾದಲ್ಲಿ

ಗಣಿತಜ್ಞರಾಗಿ ತಿಲಕ್
ಐದನೇ ವಯಸ್ಸಿನಲ್ಲಿ ಶಾಲೆಗೆ ಸೇರಿಸುವ ಮುನ್ನವೇ ತಿಲಕರಿಗೆ ಮನೆಯಲ್ಲೇ ಅವರ ತಂದೆ ಗಂಗಾಧರ ರಾಮಚಂದ್ರ ತಿಲಕರಿಂದ ಗಣಿತ ಮತ್ತು ಸಂಸ್ಕೃತಗಳ ಪಾಠಗಳಾಗಿದ್ದವು. ಹಲವು ಕಷ್ಟದ ಲೆಕ್ಕಗಳನ್ನೂ ಬಾಲಕ ತಿಲಕ್ ಬಿಡಿಸಬಲ್ಲವನಾಗಿದ್ದ. ಶಾಲೆ ಸೇರಿದ ಮೇಲೆ ಮತ್ತು ಪ್ರೌಢ ಶಾಲೆಗಳಲ್ಲಿ ತಿಲಕರಿಗೆ ಯಾವ ಗುರುಗಳ ಗಣಿತ ಪಾಠವೂ ಹೆಚ್ಚಾಗಿ ಹಿಡಿಸುತ್ತಿರಲೇ ಇಲ್ಲ. ಅವರ ಬುದ್ಧಿಮತ್ತೆಗೆ ಸವಾಲೊಡ್ಡುವ, ಅವರ ಶರವೇಗದ ಅರ್ಥೈಸಿಕೊಳ್ಳುವಿಕೆಗೆ ಸ್ಪಂದಿಸುವ ಶಕ್ತಿ ಹೆಚ್ಚಿನವರಲ್ಲಿರಲಿಲ್ಲ. ಆದರೆ ಇದಕ್ಕೆ ಅಪವಾದವೆಂಬಂತೆ ಗುರುಶಿಷ್ಯರು ಒಬ್ಬರನ್ನೊಬ್ಬರು ಬಹಳ ಹತ್ತಿರವಾಗಿ ಅರಿತುಕೊಂಡು ಗೌರವಿಸುತ್ತಿದ್ದ ಸಂದರ್ಭ ತಿಲಕರು ಪ್ರೊಫೆಸರ್ ಕೇರೋ ವಾಮನ ಛತ್ರೆ ಅವರಿಂದ ಗಣಿತ ಕಲಿಯುತ್ತಿದ್ದಾಗ ಮಾತ್ರ. ಒಮ್ಮೆ ಕಾಲೇಜಿನ ಹಾಸ್ಟೆಲಿನಲ್ಲಿ ತಿಲಕರು ಚಿಂತಾಕ್ರಾಂತರಾಗಿ ತಿರುಗಾಡುತ್ತಿದ್ದಾಗ ಅವರ ಸ್ನೇಹಿತರು ಕಳವಳಕ್ಕೆ ಕಾರಣವನ್ನು ವಿಚಾರಿಸಿದರು. ಅದಕ್ಕೆ ತಿಲಕರು ಛತ್ರೆಯವರು ಕೊಟ್ಟ ಬೀಜಗಣಿತದ ಲೆಕ್ಕಕ್ಕೆ ಉತ್ತರ ಕಂಡುಕೊಳ್ಳಲು ತವಕಿಸುತ್ತಿದ್ದೇನೆ ಎಂದರು. ಆಶ್ಚರ್ಯದಿಂದ ಸ್ನೇಹಿತರು "ಆ ಲೆಕ್ಕವನ್ನು ಛತ್ರೆಯವರೇ ಬಿಡಿಸಿ ತೋರಿಸಿದರಲ್ಲ ಕ್ಲಾಸಿನಲ್ಲಿ?" ಎಂದಾಗ ತಿಲಕರು "ಅದು ನನಗೂ ಗೊತ್ತು. ಆದರೆ ಆ ಲೆಕ್ಕವನ್ನು ಇನ್ನೂ ಒಂದು ಕ್ರಮದಿಂದ ಮಾಡಬಹುದು ಎಂದು ನನಗನ್ನಿಸುತ್ತದೆ. ಹಾಗೆ ಮಾಡಿ ನಾನು ಅವರಿಗೆ ತೋರಿಸುವವರೆಗೂ ನೆಮ್ಮದಿಯಿಲ್ಲ" ಎಂದು ಹೇಳಿ ಮತ್ತೆ ಯೋಚನಾಮಗ್ನರಾದರು.

ಛತ್ರೆಯವರೇ ತಿಲಕರಿಗೆ ಬರೇ ಕುತೂಹಲದಂತಿದ್ದ ಗಣಿತದ ಬಗ್ಗೆ ಭಾವೋದ್ವೇಗವನ್ನು ಬೆಳೆಸಿದವರು ಎಂದರೆ ತಪ್ಪಾಗಲಾರದು. "ಟಿಳಕ್ಯಾ" ಎಂದು ಪ್ರೀತಿಯಿಂದ ಅವರನ್ನು ಸಂಬೋಧಿಸುತ್ತಿದ್ದ ಛತ್ರೆಯವರಿಗೆ ತಮ್ಮ ಕೊನೆಗಾಲದಲ್ಲೂ ಬಾಲಗಂಗಾಧರರು ಗಣಿತದ ತಮ್ಮ ಪರಂಪರೆಯನ್ನು ಮಂದುವರೆಸಬೇಕೆಂಬ ಹಂಬಲ ತುಡಿಯುತ್ತಿತ್ತು. ತಿಲಕರೂ ತಮ್ಮ ಜೀವನದಲ್ಲಿ ಮುಂದೆ ಹಲವು ಬಾರಿ ಭಾರತ ಸ್ವತಂತ್ರ ದೇಶವಾಗಿದ್ದಿದ್ದರೆ ತಾವು ಗಣಿತದ ಪ್ರಾಧ್ಯಾಪಕರಾಗಿರುವುದರಲ್ಲಿ ತೃಪ್ತಿ ಪಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಓದು ಮುಗಿದ ತಕ್ಷಣವೇ ಸಮಾನ ಮನಸ್ಕರಾದ ಗೋಪಾಲ ಗಣೇಶ ಅಗರ್ಕರ್, ವಿಷ್ಣುಶಾಸ್ತ್ರಿ ಚಿಪ್ಲುಂಕರ್, ಮಹಾದೇವ ಬಲ್ಲಾಳ ನಾಮಜೋಶಿ ಮತ್ತು ವಾಮನ ಶಿವರಾಮ ಆಪ್ಟೆಯವರೊಡಗೂಡಿ "ನ್ಯೂ ಇಂಗ್ಲಿಷ್ ಸ್ಕೂಲ್" ಆರಂಭಿಸಿದ ತಿಲಕರು ಅಲ್ಲಿ ಮಕ್ಕಳಿಗೆ ಗಣಿತ ಮತ್ತು ಸಂಸ್ಕೃತಗಳನ್ನು ಪಾಠ ಮಾಡತೊಡಗಿದರು. ನಂತರದ ದಿನಗಳಲ್ಲಿ ಡೆಕ್ಕನ್ ಎಜುಕೇಷನ್ ಸೊಸೈಟಿ ಸ್ಥಾಪಿಸಿ ಫರ್ಗುಸನ್ ಕಾಲೇಜನ್ನೂ ಆರಂಭಿಸಿದರು. ಆಗ ಎಲ್ಲರಿಗೂ ಅವರು ಪ್ರೊಫೆಸರ್ ತಿಲಕ್ ಎಂದೇ ಪರಿಚಿತರು. ಬೀಜಗಣಿತ ಮತ್ತು  ಟ್ರಿಗ್ನಾಮೆಟ್ರಿಗಳನ್ನು ಕಲಿಸುವಾಗ ತಿಲಕರು ಎಲ್ಲ ಹಂತಗಳನ್ನೂ ಬಾಯಲ್ಲಿ ಹೇಳಿಯೇ ಬಗೆಹರಿಸಿಬಿಡುತ್ತಿದ್ದರು. ಅಂತಹ ಅಸಾಧಾರಣ ಸಮಸ್ಯಾಪೂರಣ ಶಕ್ತಿಯಿತ್ತು ಅವರಿಗೆ. ಕೆಲವೊಮ್ಮೆ ಬೈನಾಮಿಯಲ್ ಥೀರಮ್‍ನಂತಹ ಸಮಸ್ಯೆಗಳನ್ನೂ ಕೆಲವು ವಿದ್ಯಾರ್ಥಿಗಳಿಗೆ ಹಲಗೆಯ ಮೇಲೆ ಬರೆಯಲು ಹೇಳಿ ತಾವು ಬಾಯಿಪಾಠದಲ್ಲೇ ಮುಗಿಸಿಬಿಡುತ್ತಿದ್ದರು. ಕೆಲವು ವಿದ್ಯಾರ್ಥಿಗಳಿಗೆ ಇದು ಕಷ್ಟವಾಗಿ ಪರಿಣಮಿಸಿದರೂ ಅವರು ತಿಲಕರನ್ನು ಯಾವ ಸಂದರ್ಭದಲ್ಲಾದರೂ ಭೇಟಿ ಮಾಡಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳುವ ಅವಕಾಶವಿತ್ತು.

ಚಿತ್ರ ೨: ತಿಲಕ್ ಮತ್ತವರ ಜತೆಗಾರರು ಕೇಸರಿ, ಮರಾಠಾ ಪತ್ರಿಕೆಗಳನ್ನೂ, ನ್ಯೂ ಇಂಗ್ಲಿಷ್ ಶಾಲೆಯನ್ನೂ ಆರಂಭಿಸಿದ ಕಾಲದ ಗಾಯಕ್ವಾಡ್ ವಾಡಾ, ಪುಣೆ

ತಿಲಕರಿಂದ ಗಣಿತದ ಪಾಠ ಹೇಳಿಸಿಕೊಂಡ ಹಲವರು ಅವರು ಕೊಡುತ್ತಿದ್ದ ನಿಜಜೀವನದ ಉದಾಹರಣೆಗಳು ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದವು ಎಂದಿದ್ದಾರೆ. ಪರ್ಮ್ಯುಟೇಶನ್ ಮತ್ತು ಕಾಂಬಿನೇಶನ್‍ಗಳನ್ನು ಹೇಳಿಕೊಡುವಾಗ ತಿಲಕರು ತಮ್ಮ ಸುತ್ತಲಿನ ವಸ್ತುಗಳನ್ನೇ ಬಳಸಿ ಮನಮುಟ್ಟುವಂತೆ ಪಾಠ ಮಾಡುತ್ತಿದ್ದುದನ್ನು ಸ್ಮರಿಸಿಕೊಂಡವರಿದ್ದಾರೆ. ಗಣಿತದ ಬಗ್ಗೆ ತಮ್ಮ ಆಲೋಚನೆಯನ್ನು ಮುಂದಿಡುತ್ತಾ ತಿಲಕರು ಒಂದು ಕಡೆ ಹೀಗೆ ಹೇಳಿದ್ದಾರೆ - "ಗಣಿತದಲ್ಲಿ ಆಸಕ್ತಿ ಬೆಳೆಸಿಕೊಳ್ಳಲಾರದವನು ತನ್ನ ಚಿಂತನಾಲಹರಿಯಲ್ಲಿ ಒಂದು ರೀತಿಯ ಕುಂದನ್ನು ಉಳಿಸಿಕೊಳ್ಳುತ್ತಾನೆ. ಗಣಿತದಿಂದಾಗಿ ಒಬ್ಬ ವ್ಯಕ್ತಿ ಒಂದು ವಿಷಯದ ಬಗ್ಗೆ ಕ್ರಮವಾಗಿ ನಿರರ್ಗಳವಾಗಿ ಯೋಚಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದಾಗಿದೆ. ಗಣಿತ ಒಂದುರೀತಿಯಲ್ಲಿ ಕಾವ್ಯಮಯವಾಗಿದೆ. ಕಾವ್ಯ ಕೆಲವರನ್ನು ಹೇಗೆ ಮಂತ್ರಮುಗ್ಧರನ್ನಾಗಿಸುತ್ತದೋ ಹಾಗೆ ಗಣಿತ ನನ್ನ ಮೇಲೆ ಪ್ರಭಾವ ಬೀರಿದೆ. ಎಲ್ಲ ವಿಜ್ಞಾನಗಳೂ ಮೂಲಭೂತವಾಗಿ ಒಂದೇ. ನಾವು ಅವುಗಳನ್ನು ಕಲಿಯುವ ಸೌಕರ್ಯಕ್ಕಾಗಿ ಬೇರೆ ಬೇರೆಯಾಗಿ ವಿಂಗಡಿಸುತ್ತೇವೆ. ಗಣಿತದಲ್ಲಿ ಕಾವ್ಯವಿದೆ, ಕಾವ್ಯದಲ್ಲಿ ಗಣಿತವಿದೆ".

ಯಾವ ಕಾರಣಕ್ಕೂ ಅತ್ಯಲ್ಪ ವೇತನ ಪಡೆಯುವ ಮತ್ತು ಇಡೀ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪಿಡುವ ವಚನಗಳಿಂದ ದೂರ ಸರಿಯಬಾರದೆಂದು ನಂಬಿದ್ದ ತಿಲಕರಿಗೆ ಡೆಕ್ಕನ್ ಎಜುಕೇಷನ್ ಸೊಸೈಟಿಯ ಉಳಿದವರು ಸಂಬಳ ಹೆಚ್ಚಿಸಿಕೊಳ್ಳುವ ಮತ್ತು ಇತರ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವ ವಿಚಾರಗಳನ್ನು ಪ್ರತಿಪಾದಿಸತೊಡಗಿದಾಗ ಮನನೊಂದು ತಮ್ಮದೇ ಕಲ್ಪನೆಯ ಕೂಸಾದ ಈ ವೇದಿಕೆಯಿಂದ ಹೊರಬಂದರು. ಅಲ್ಲಿಗೆ ತಿಲಕರ ಗಣಿತದ ಜೊತೆಗಿನ ಒಡನಾಟಕ್ಕೆ ತೆರೆ ಬಿತ್ತು.

ಭಾಷಾ ಕೋವಿದರಾಗಿ ತಿಲಕ್
ಚಿತ್ಪಾವನ ಬ್ರಾಹ್ಮಣ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ತಿಲಕರಿಗೆ ಚಿಕ್ಕ ವಯಸ್ಸಿನಿಂದಲೇ ಸಂಸ್ಕೃತಾಧ್ಯಯನ ಶುರುವಾಗಿತ್ತು. ದಿನಕ್ಕೊಂದು ಶ್ಲೋಕವನ್ನು ಕಲಿಯುತ್ತಿದ್ದ ಅವರಿಗೆ ಗಂಜೀಫಾ ಎಲೆಗಳ ಸಹಾಯದಿಂದ ಅಕ್ಷರಗಳನ್ನೂ ಪರಿಚಯ ಮಾಡಿಸುತ್ತಿದ್ದರು ಸಂಸ್ಕೃತ ಪಂಡಿತರಾದ ಅವರ ತಂದೆ ಗಂಗಾಧರ ತಿಲಕರು. ಐದನೇ ವಯಸ್ಸಿನಲ್ಲೇ ಹಲವು ವ್ಯಾಕರಣ ಸೂತ್ರಗಳನ್ನೂ ಬಲ್ಲವನಾಗಿದ್ದ ಬಾಲನಿಗೆ ಅಮರಕೋಶವೂ ಹೆಚ್ಚು ಕಡಿಮೆ ಕಂಠಸ್ಥವಾಗಿತ್ತು. ಹತ್ತನೇ ವಯಸ್ಸಿನಲ್ಲಿ ಶಾಲೆಗೆ ಹೋಗುವಾಗಲೇ ಛಂದೋಬದ್ಧ ಸಂಸ್ಕೃತ ಪದ್ಯಗಳ ರಚನೆಗೆ ತೊಡಗಿದ್ದರು ತಿಲಕರು. ಹಲವು ಪಠ್ಯಗಳನ್ನು ತಾವೇ ಮರಾಠಿಗೆ ಅನುವಾದಿಸಿ ಅರ್ಥೈಸಿಕೊಳ್ಳುತ್ತಿದ್ದರು. ಮುಂದೆ ವೇದ, ಉಪನಿಷತ್ತುಗಳು, ಮನುಸ್ಮೃತಿ ಮುಂತಾದವನ್ನು ತಮ್ಮ ಬಲದಲ್ಲೇ ಓದಿ ಅರ್ಥೈಸಿಕೊಂಡು ಯಾವುದೇ ವಿಷಯದ ಬಗ್ಗೆ ಸನಾತನ ಧರ್ಮದ ನಿಲುವನ್ನು ತರ್ಕಬದ್ಧವಾಗಿ ಪ್ರಕಟಿಸುವಷ್ಟು ಮತ್ತು ಸಮಾಜ ಸುಧಾರಣೆಯಲ್ಲಿ ಹಿಂದೂ ಧರ್ಮದ ಮೂಲ ನಂಬಿಕೆಗಳಿಗೆ ಧಕ್ಕೆ ಬಾರದಂತೆ ತಮ್ಮದೇ ಆದ ರೀತಿಯಲ್ಲಿ ಪ್ರಗತಿಪರತೆಯನ್ನು ಸೂಚಿಸುವಷ್ಟು ಮಹತ್ತರವಾಗಿ ಬೆಳೆದರು.

ಬ್ರಿಟಿಷರ ದುರಾಡಳಿತದ ಬಗ್ಗೆ ಮತ್ತು ಸ್ವರಾಜ್ಯದ ಅಗತ್ಯದ ಬಗ್ಗೆ ಸಾಮಾನ್ಯ ಮನುಷ್ಯನಿಗೆ ತಲುಪುವಂತೆ ವಿಚಾರಗಳನ್ನು ಮಂಡಿಸುವುದು, ಮತ್ತು ದೇಶದ ಜನತೆಯನ್ನು ಎಚ್ಚರಿಸುವುದು ಬಹಳ ಮುಖ್ಯವಾದ ಕೆಲಸವಾಗಿತ್ತು ಆಗಿನ ಸಂದರ್ಭದಲ್ಲಿ. ಇದಕ್ಕಾಗಿಯೇ ಮರಾಠಿ ಭಾಷೆಯಲ್ಲಿ "ಕೇಸರಿ" ಮತ್ತು ಇಂಗ್ಲಿಷ್‍ನಲ್ಲಿ "ಮರಾಠಾ" ಎಂಬ ನಿಯತಕಾಲಿಕೆಗಳನ್ನು ಆರಂಭಿಸಿದ ತಿಲಕರು ಹಲವು ವರ್ಷಗಳು ಅದರ ಸಂಪಾದಕರಾಗಿ ಶ್ರಮಿಸಿದರು. ಪ್ರತಿ ವಾರವೂ ಅವರ ಲೇಖನಗಳು ಎರಡೂ ಭಾಷೆಯ ಪತ್ರಿಕೆಗಳಲ್ಲಿ ಸಾಮಾನ್ಯವಾಗಿತ್ತು. ಅವರ ಪ್ರತಿ ಲೇಖನದಲ್ಲೂ ಎರಡೂ ಭಾಷೆಗಳ ಮೇಲೆ ಅವರಿಗಿದ್ದ ಹಿಡಿತ ಕಂಡುಬರುತ್ತಿತ್ತು. ಪ್ರಾರಂಭವಾದ ವರ್ಷದೊಳಗೇ ಇಡಿ ದೇಶದಲ್ಲೇ ಭಾರತದ ಯಾವುದೇ ಭಾಷೆಯ ಅತಿ ಹೆಚ್ಚು ಮಾರಾಟವಾಗುವ ಪತ್ರಿಕೆಯಾಗಿ ಗುರುತಿಸಿಕೊಂಡಿತ್ತು ಕೇಸರಿ. ಇದರ ಶ್ರೇಯ ತಿಲಕರ ವಿಶ್ಲೇಷಣೆಗಳು ಮತ್ತು ಅವರ ಮರಾಠಿ ಭಾಷಾ ಪಾಂಡಿತ್ಯಕ್ಕೆ ಸಲ್ಲಬೇಕು.

ಚಿತ್ರ ೩: ತಿಲಕರು ಸ್ವರಾಜ್ಯದ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಸಂದರ್ಭದ ಉಬ್ಬುಶಿಲ್ಪ - ಕೇಸರಿ ವಾಡಾದಲ್ಲಿ

ಮುಂದೆ ಹಲವು ವರ್ಷಗಳು ಅವರು ತಮ್ಮ ಆಲೋಚನೆಗಳನ್ನು ಬರಹಗಳ ಮೂಲಕ ಮುಂದಿಡುತ್ತಾ ಭಾರತೀಯರನ್ನು ತರ್ಕಕ್ಕೆ ಹಚ್ಚುವಲ್ಲಿ ಮತ್ತು ಬ್ರಿಟಿಷ್ ಆಡಳಿತವನ್ನು ಪೇಚಿಗೆ ಸಿಲುಕಿಸುವಲ್ಲಿ ಯಶಸ್ವಿಯಾದರು. ಕನ್ಯೆಯರ ಮದುವೆಯ ವಯಸ್ಸು ಹೆಚ್ಚಿಸುವ ವಿಚಾರದಲ್ಲಿ, ವಿಧವಾ ವಿವಾಹದ ವಿಚಾರದಲ್ಲಿ ಸಂಪ್ರದಾಯಸ್ಥರನ್ನೂ ಸಮಾಜೋದ್ಧಾರಕರನ್ನೂ ಒಟ್ಟಿಗೇ ನಿಭಾಯಿಸುತ್ತ ಪ್ರಗತಿಪರತೆಗೆ ಶ್ರಮಿಸುವಲ್ಲಿ ತಿಲಕರ ಮನವೊಪ್ಪುವಂತಹ ಬರಹಗಳು ಪ್ರಮುಖ ಪಾತ್ರ ವಹಿಸಿದವು. ಕಾಂಗ್ರೆಸ್‍ನಿಂದ ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆಗಳು, ಸ್ವರಾಜ್ಯದ ಮತ್ತು ಆಡಳಿತ ಸುಧಾರಣೆಗಳ ಸಲಹೆಗಳು, ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ಮತ್ತಿತರ ಪ್ರಬಂಧಗಳು ತಿಲಕರ ಲೇಖನಿಯಿಂದ ಮೂಡಿ ಬಂದು ಸರ್ಕಾರಕ್ಕೆ ನುಂಗಲಾರದ ತುತ್ತಾದವು. ತಿಲಕರ ಎಲ್ಲ ಬರಹಗಳಲ್ಲಿ, ಭಾಷಣಗಳಲ್ಲಿ ಅವರಿಗಿದ್ದ ವಿಷಯಸ್ಪಷ್ಟತೆ ಎದ್ದು ಕಾಣುತ್ತಿತ್ತು.

ಸಂಶೋಧಕರಾಗಿ ತಿಲಕ್
ಶಾಲೆಯಲ್ಲಿ ಯಾವುದೇ ವಿಷಯವನ್ನು ಕಲಿಯುವಾಗ ತಿಲಕರ ಗಮನ ಅರಿವನ್ನು ಹೆಚ್ಚಿಸಿಕೊಳ್ಳುವುದರ ಕಡೆಗಿತ್ತೇ ವಿನಃ ಅಂಕಗಳನ್ನು ಪಡೆಯುವ ಕಡೆಗಲ್ಲ. ಡೆಕ್ಕನ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯನ್ನು ಮತ್ತು ಬ್ರಿಟಿಷ್ ಇತಿಹಾಸವನ್ನು ಓದುವಾಗ ರಾಣಿ ಮೇರಿ ಮತ್ತು ರಾಣಿ ಎಲಿಝಬೆತ್‍ರ ಬಗೆಗಿನ ಪಾಠಗಳನ್ನು ಪಠ್ಯಪುಸ್ತಕದಿಂದ ಓದದೇ ತಿಲಕರು ಹಲವು ಆಕರಗಳನ್ನು ಪರಾಮರ್ಶಿಸಿ ಆ ವಿಷಯಗಳ ಬಗ್ಗೆ ತಮ್ಮದೇ ಆದ ಒಂದು ಹೊಸ ಅಧ್ಯಾಯವನ್ನು ರಚಿಸಿಟ್ಟುಕೊಂಡರು. ಇದೇ ಅಲ್ಲದೆ ಇನ್ನೂ ಹಲವು ಸಂದರ್ಭಗಳಲ್ಲಿ ತಿಲಕರ ಈ ರೀತಿಯ ಸಂಶೋಧನಾತ್ಮಕ ಕೆಲಸಗಳು ಉಳಿದ ವಿದ್ಯಾರ್ಥಿಗಳಿಗೆ ಉಲ್ಲೇಖವಾಗಿ ಪರಿಣಮಿಸಿದವು.

ಸಮಾಜ ಸುಧಾರಣೆಯ, ಶೈಕ್ಷಣಿಕ ಅಭಿವೃದ್ಧಿಯ ಮತ್ತು ರಾಜಕೀಯ ಮುನ್ನಡೆಯಂತಹ ಸಂಕೀರ್ಣ ವಿಷಯಗಳ ಬಗ್ಗೆ ಸಾರ್ವಜನಿಕ ವಿಚಾರ ವೇದಿಕೆಗಳ ಭಾಷಣಗಳಲ್ಲಿ, ಕೇಸರಿ ಮತ್ತು ಮರಾಠಾ ಪರ್ತಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಲೇಖನಗಳಲ್ಲಿ ತಿಲಕರು ತಮ್ಮ ಆಳವಾದ ತಿಳಿವಳಿಕೆಯನ್ನು ಬಿಚ್ಚಿಡುತ್ತಿದ್ದರು. ಸ್ನೇಹಿತರೇ ಆದರೂ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಿದ್ದ ಗೋಪಾಲ ಗಣೇಶ ಅಗರ್ಕರ್, ಮಹಾದೇವ ಗೋವಿಂದ ರಾನಡೆ, ಗೋಪಾಲಕೃಷ್ಣ ಗೋಖಲೆಯವರಂತಹ ಮಹಾಮೇಧಾವಿಗಳ ಜತೆ ಚರ್ಚಿಸುವಾಗ ವಿಷಯದ ಆಳಕ್ಕೆ ಹೊಕ್ಕು ತಮ್ಮ ಸಂಶೋಧನೆ ಮತ್ತು ವಿಶ್ಲೇಷಣೆಗಳ ಬಲದ ಮೇಲೆ ಮುನ್ನಡೆ ಸಾಧಿಸುತ್ತಿದ್ದರು, ತಮ್ಮ ದೃಷ್ಟಿಕೋನವನ್ನು ಮಂಡಿಸುತ್ತಿದ್ದರು.

ಆಡಳಿತವನ್ನು ಎದುರು ಹಾಕಿಕೊಳ್ಳುವುದು, ಖಾರವಾದ ಲೇಖನಗಳನ್ನು ಬರೆಯುವುದು ತಿಲಕರಿಗೆ ಸಾಮಾನ್ಯವಾದಂತೆಲ್ಲ ಅವರು ಸೆರೆವಾಸ ಅನುಭವಿಸುವುದೂ ಸಾಮಾನ್ಯವಾಯಿತು. ಈ ಸೆರೆವಾಸಗಳನ್ನೂ ತಮ್ಮ ಸಂಶೋಧನಾತ್ಮಕ ಕಾರ್ಯಗಳಿಗೆ ಬಳಸಿಕೊಂಡ ತಿಲಕರು ಕೆಲವು ಅಮೂಲ್ಯ ಗ್ರಂಥಗಳನ್ನು ಹೊರತಂದರು. ಛತ್ರೆ ಮಾಸ್ತರರಿಂದ ಗಣಿತ ಮತ್ತು ಖಗೋಳವಿಜ್ಞಾನಗಳೆಡೆಗೆ ಆಕರ್ಷಿತರಾಗಿದ್ದ ತಿಲಕರು ಅವುಗಳನ್ನು ಇನ್ನೂ ಚೆನ್ನಾಗಿ ಅಭ್ಯಸಿಸಿ ತಮಗಿದ್ದ ವೇದಗಳ ಬಗೆಗಿನ ಅರಿವನ್ನೂ ಜತೆಗೆ ಸೇರಿಸಿ ವೇದಗಳು ಮತ್ತು ಉಪನಿಷತ್ತುಗಳ ಕಾಲನಿರ್ಣಯವನ್ನು ಪ್ರತಿಪಾದಿಸುವ "ದಿ ಒರಾಯನ್" ಅಥವಾ "ರಿಸರ್ಚಸ್ ಇಂಟು ದಿ ಆಂಟಿಕ್ವಿಟಿ ಆಫ್ ದಿ ವೇದಾಸ್" ಎಂಬ ಬೃಹತ್ ಲೇಖನವನ್ನು ಬರೆದರು. ಇದರಂತೆ ವೇದ ಶ್ಲೋಕಗಳಲ್ಲಿ, ತೈತ್ತೀರಿಯ ಮತ್ತು ಶತಪಥ ಬ್ರಾಹ್ಮಣಗಳಲ್ಲಿ, ಹಲವು ಉಪನಿಷತ್ತುಗಳಲ್ಲಿ ಬರುವ ಋತುಗಳ ಮತ್ತು ನಕ್ಷತ್ರ ಪುಂಜಗಳ ರಚನೆಗಳನ್ನು ಉಲ್ಲೇಖಿಸಿ ವೇದಗಳು ೪೫೦೦ ವರ್ಷಗಳಿಗೂ ಹಳೆಯದೆಂದು ಕರಾರುವಾಕ್ಕಾಗಿ ಪ್ರತಿಪಾದಿಸಿದರು. ಇದೇ ವಿಚಾರಗಳನ್ನು ಆಧರಿಸಿ ತಮ್ಮ ಮುಂದಿನ ಸೆರೆವಾಸದಲ್ಲಿ ವೈದಿಕ ಧರ್ಮ ಉತ್ತರ ಧೃವದಲ್ಲಿ ಪ್ರಾರಂಭವಾಗಿ ಭಾರತದತ್ತ ವ್ಯಾಪಿಸಿತು ಎಂದು ಅರ್ಥೈಸಿಕೊಳ್ಳುವ "ದಿ ಆರ್ಕ್‍ಟಿಕ್ ಹೋಮ್ ಇನ್ ದಿ ವೇದಾಸ್" ಎಂಬ ಗ್ರಂಥದ ರಚನೆ ಮಾಡಿದರು. ಈ ಎರಡೂ ಗ್ರಂಥಗಳಲ್ಲಿ ತಿಲಕರ ಆಳವಾದ ಜ್ಞಾನ, ಸಂಶೋಧನಾತ್ಮಕ ಚಿಂತನೆ, ಗಣಿತ, ಸಂಸ್ಕೃತ, ಖಗೋಳಶಾಸ್ತ್ರಗಳ ಮೇಲೆ ಅವರಿಗಿದ್ದ ಹಿಡಿತಗಳು ಎದ್ದು ಕಾಣುತ್ತವೆ.

ಚಿತ್ರ ೪: ತಿಲಕರು "ದಿ ಆರ್ಕ್ಟಿಕ್ ಹೋಮ್ ಇನ್ ದಿ ವೇದಾಸ್" ಕೃತಿ ಬರೆದು ಮುಗಿಸಿದ ಅವರ ಸಿಂಹಗಢ ಕೋಟೆಯ ಮೇಲಣ ಬಂಗಲೆ

ಬರ್ಮಾದ ಮಂಡಾಲೆ ಜೈಲಿನಲ್ಲಿದ್ದಾಗ ತಿಲಕರಿಗೆ ಓದಲು, ಬರೆಯಲು, ಆತ್ಮಾವಲೋಕನ ಮಾಡಿಕೊಳ್ಳಲು ಇನ್ನೂ ಹೆಚ್ಚು ಸಮಯ ಸಿಕ್ಕಿತು. ದೇಶದ ಪರಿಸ್ಥಿತಿಯ ಬಗ್ಗೆ ಯೋಚಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಇದು ಸಹಾಯಕಾರಿಯಾಯಿತು. ಜೈಲಿನಲ್ಲಿದ್ದಾಗಲೇ ಪತ್ನಿವಿಯೋಗವೂ ಆಗಿದ್ದು ಅವರಿಗೆ ಆಧ್ಯಾತ್ಮದ ಕಡೆಗಿನ ಒಲವನ್ನು ಮತ್ತಷ್ಟು ಬಲವಾಗಿಸಿತು. ಈ ಎಲ್ಲದರ ಫಲವಾಗಿ ಅವರ ಅತ್ಯಮೂಲ್ಯ ಕೃತಿ, ಭಗವದ್ಗೀತೆಯ ಬಗೆಗಿನ ಅವರ ಕರ್ಮಯೋಗ ಭಾಷ್ಯ, "ಗೀತಾರಹಸ್ಯ" ಮೂಡಿ ಬಂದಿತು. ಮಹಾಭಾರತದ ಕಾಲದ ವಿಷಯಗಳನ್ನಷ್ಟೇ ಅಲ್ಲದೆ ಅಂದಿನ ಭಾರತದ ಸನ್ನಿವೇಶಕ್ಕೆ ಹೊಂದುವಂತೆ ನಡೆಸಿರುವ ಗೀತೆಯ ಈ ಸೀಳುನೋಟ ಇಂದಿಗೂ ಸಂಗ್ರಹಯೋಗ್ಯ ಬರಹವಾಗಿರುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಹಲವು ವಿದ್ಯೆಗಳಲ್ಲಿ ಪಾರಂಗತರಾಗಿದ್ದ ತಿಲಕರು ಭಾರತ ದೇಶದ ಪರಿಸ್ಥಿತಿ ಚೆನ್ನಾಗಿದ್ದಾಗ ಜನಿಸಿದ್ದರೆ ಯಾವ ಯಾವ ಕ್ಷೇತ್ರಗಳಲ್ಲಿ ಏನೇನು ಸಾಧನೆಗಳನ್ನು ಮಾಡಬಹುದಿತ್ತೆಂಬ ವಿಚಾರ ಊಹೆಯಾಗಿಯೇ ಉಳಿಯುತ್ತದೆ.