ಇತಿಹಾಸದ ಹೊನ್ನ ಗಣಿ ಹಾನಗಲ್
"ಹಾನಗಲ್" ಎಂದಾಕ್ಷಣ ನೆನಪಾಗುವುದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಂತಕಥೆ ಸ್ವರಶಿರೋಮಣಿ ಗಂಗೂಬಾಯಿ ಹಾನಗಲ್ ಅವರು. ಹೌದು, ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಹಿಂದೂಸ್ತಾನಿ ಗಾಯನದ ಖ್ಯಾತಿಯನ್ನು ಪಸರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಗಂಗೂಬಾಯಿಯವರ ಹುಟ್ಟೂರು ಈ ಹಾನಗಲ್ - ಈಗಿನ ಹಾವೇರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಇದೇ ಊರು ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳ ಪ್ರತಿಷ್ಠೆಯ ಬೀಡಾಗಿತ್ತೆಂಬುದೂ ಅಷ್ಟೇ ಸತ್ಯ. ಸಾವಿರಾರು ವರುಷಗಳ ಇತಿಹಾಸದಲ್ಲಿ ಪಾನುಂಗಲ್, ಹಾನುಂಗಲ್ಲು, ಹಾನಗಲ್ಲು ಎಂದೆಲ್ಲಾ ಕರೆಸಿಕೊಂಡಿರುವ ಈ ಊರು ಕದಂಬ, ಕಲ್ಯಾಣಿ ಚಾಲುಕ್ಯ ಮತ್ತು ಹೊಯ್ಸಳ ರಾಜಸಂಸ್ಥಾನಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿ ಪ್ರಾಧಾನ್ಯದ ಉತ್ತುಂಗದಲ್ಲಿತ್ತು. ಹಾನಗಲ್ ಕೋಟೆಯನ್ನು ವಶಪಡಿಸಿಕೊಳ್ಳುವುದರ ಮೂಲಕವೇ ಹೊಯ್ಸಳ ದೊರೆಗಳಾದ ವಿಷ್ಣುವರ್ಧನ ಮತ್ತು ಎರಡನೇ ವೀರ ಬಲ್ಲಾಳರು ಕಲ್ಯಾಣಿ ಚಾಲುಕ್ಯರ ಸಾಮಂತಿಕೆಯಿಂದ ಹೊರಬರುವ ಮತ್ತು ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸುವ ಕೆಚ್ಚು ತೋರಿದ್ದು. ಹೀಗೆ ಕರ್ನಾಟಕದ ಇತಿಹಾಸದಲ್ಲಿ ಹಾನಗಲ್ಲಿನ ಪಾತ್ರ ಅವಿಸ್ಮರಣೀಯ. ಇಂತಹ ಐತಿಹಾಸಿಕ ಜಾಡು ಹೊಂದಿರುವ ಹಾನಗಲ್ಲಿನಲ್ಲಿ ೧೧ರಿಂದ ೧೩ನೇ ಶತಮಾನಗಳವರೆಗೆ ರಾಜಮನೆತನಗಳು ಕಟ್ಟಿಸಿದ ದೇವಾಲಯಗಳೂ ಹಲವಿವೆ. ಪಶ್ಚಿಮ ಚಾಲುಕ್ಯ ಶಿಲ್ಪಕಲ...