ಇತಿಹಾಸದ ಹೊನ್ನ ಗಣಿ ಹಾನಗಲ್

"ಹಾನಗಲ್" ಎಂದಾಕ್ಷಣ ನೆನಪಾಗುವುದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಂತಕಥೆ ಸ್ವರಶಿರೋಮಣಿ ಗಂಗೂಬಾಯಿ ಹಾನಗಲ್ ಅವರು. ಹೌದು, ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಹಿಂದೂಸ್ತಾನಿ ಗಾಯನದ ಖ್ಯಾತಿಯನ್ನು ಪಸರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಗಂಗೂಬಾಯಿಯವರ ಹುಟ್ಟೂರು ಈ ಹಾನಗಲ್ - ಈಗಿನ ಹಾವೇರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಇದೇ ಊರು ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳ ಪ್ರತಿಷ್ಠೆಯ ಬೀಡಾಗಿತ್ತೆಂಬುದೂ ಅಷ್ಟೇ ಸತ್ಯ. ಸಾವಿರಾರು ವರುಷಗಳ ಇತಿಹಾಸದಲ್ಲಿ ಪಾನುಂಗಲ್, ಹಾನುಂಗಲ್ಲು, ಹಾನಗಲ್ಲು ಎಂದೆಲ್ಲಾ ಕರೆಸಿಕೊಂಡಿರುವ ಈ ಊರು ಕದಂಬ, ಕಲ್ಯಾಣಿ ಚಾಲುಕ್ಯ ಮತ್ತು ಹೊಯ್ಸಳ ರಾಜಸಂಸ್ಥಾನಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿ ಪ್ರಾಧಾನ್ಯದ ಉತ್ತುಂಗದಲ್ಲಿತ್ತು. ಹಾನಗಲ್ ಕೋಟೆಯನ್ನು ವಶಪಡಿಸಿಕೊಳ್ಳುವುದರ ಮೂಲಕವೇ ಹೊಯ್ಸಳ ದೊರೆಗಳಾದ ವಿಷ್ಣುವರ್ಧನ ಮತ್ತು ಎರಡನೇ ವೀರ ಬಲ್ಲಾಳರು ಕಲ್ಯಾಣಿ ಚಾಲುಕ್ಯರ ಸಾಮಂತಿಕೆಯಿಂದ ಹೊರಬರುವ ಮತ್ತು ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸುವ ಕೆಚ್ಚು ತೋರಿದ್ದು. ಹೀಗೆ ಕರ್ನಾಟಕದ ಇತಿಹಾಸದಲ್ಲಿ ಹಾನಗಲ್ಲಿನ ಪಾತ್ರ ಅವಿಸ್ಮರಣೀಯ.



ಇಂತಹ ಐತಿಹಾಸಿಕ ಜಾಡು ಹೊಂದಿರುವ ಹಾನಗಲ್ಲಿನಲ್ಲಿ ೧೧ರಿಂದ ೧೩ನೇ ಶತಮಾನಗಳವರೆಗೆ ರಾಜಮನೆತನಗಳು ಕಟ್ಟಿಸಿದ ದೇವಾಲಯಗಳೂ ಹಲವಿವೆ. ಪಶ್ಚಿಮ ಚಾಲುಕ್ಯ ಶಿಲ್ಪಕಲಾ ಶೈಲಿಯ ಶ್ರೇಷ್ಠ ಉದಾಹರಣೆಗಳಲ್ಲೊಂದಾದ ತಾರಕೇಶ್ವರ ದೇವಾಲಯ ಇಂದಿನ ಹಾನಗಲ್ ಊರಿನೊಳಗೇ ಇದ್ದು ಬಹುಪರಿಚಿತವಾಗಿದೆ. ಈ ದೇವಾಲಯದ ಮಧ್ಯಭಾಗದಲ್ಲಿರುವ ಭವ್ಯವಾದ ಭುವನೇಶ್ವರಿಯು ಶಿಲ್ಪಕಲೆಯ ಪರಾಕಾಷ್ಠೆ ಎಂದರೆ ಅತಿಶಯೋಕ್ತಿಯಾಗಲಾರದು. ಅಷ್ಟೇ ಅಲ್ಲದೆ, ಹಾನಗಲ್ ಇನ್ನೂ ಹಲವು ಚಾರಿತ್ರಿಕ ಸ್ಮಾರಕಗಳ ನೆಲೆವೀಡು. ಆದರೆ ಅವುಗಳಲ್ಲಿ ಹೆಚ್ಚಿನವು ಶೋಚನೀಯ ಸ್ಥಿತಿಯಲ್ಲಿದ್ದು ಕಾಯಕಲ್ಪಕ್ಕೆ ಕಾದು ನಿಂತಿವೆ. ಇತಿಹಾಸದ ಹಲವು ಗುಟ್ಟುಗಳನ್ನು ತಮ್ಮೊಳಗೇ ಹುದುಗಿಸಿಟ್ಟುಕೊಂಡು ವಿನಾಶದಂಚು ತಲುಪುತ್ತಿವೆ.




ಉದಾಹರಣೆಗೆ, ಊರಿನ ಹೊರವಲಯದಲ್ಲಿರುವ ಕೆರೆಯ ತಪ್ಪಲಿನ ಬಿಲ್ಲೇಶ್ವರ ದೇವಾಲಯ ಮತ್ತು ಕೋಟೆಯ ಭಾಗದಲ್ಲಿರುವ ವೀರಭದ್ರ ದೇವಾಲಯಗಳು ಕೆಲ ಸಮಯದ ಹಿಂದಷ್ಟೇ ಪುನರುತ್ಥಾನ ಕಂಡಿರುವಂತಿದ್ದರೂ ಅವುಗಳ ರಕ್ಷಣೆಗೆ ಇನ್ನೂ ಬಹಳ ಕೆಲಸ ನಡೆಯುವ ಅಗತ್ಯವಿದೆ. ಅಷ್ಟೇ ಅಲ್ಲದೆ ಇವುಗಳ ಸುತ್ತಮುತ್ತ ಯಾವ ರೀತಿಯ ಚಾರಿತ್ರಿಕ ಕುರುಹುಗಳು ನಮಗೆ ದೊರಕಬಹುದು ಎಂಬುದು ಸದ್ಯಕ್ಕೆ ಊಹೆಯಾಗಿಯೇ ಉಳಿಯುತ್ತದೆ. ಆ ಕಾಲದಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಹಾನಗಲ್ ಕೋಟೆಯ ಅವಶೇಷಗಳೂ ಇಂದು ಕಾಣಸಿಗುವುದಿಲ್ಲ. 

ಕೋಟೆಯ ಭಾಗದಲಿತ್ತು ಎಂದು ಹೇಳಲ್ಪಡುವ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ದೇಗುಲವೊಂದು ಹಸಿರು ತೋಟವೊಂದರ ನಡುವೆ ಕಾಣಸಿಗುತ್ತದೆ. ವಸಂತ ಋತುವಿನಲ್ಲಂತೂ ಹಸಿರನ್ನೇ ಹೊದ್ದಂತೆ ಭಾಸವಾಗುವ ಹಾನಗಲ್ಲಿನ ಹೊರವಲಯದ ತೋಟಗಳ ನಡುವೆ ದಟ್ಟ ಹಸಿರಿನ ಎತ್ತರದ ಪೊದೆಯೇನೋ ಎಂಬಂತೆನಿಸುವ ಆಕೃತಿಯೊಂದು ಹತ್ತಿರ ಹೋದಂತೆ ಪುರಾತನ ದೇಗುಲವೆಂದು ಮನದಟ್ಟಾಗುತ್ತದೆ. ಸ್ಥಳೀಯರಲ್ಲಿ ಹಲವರಿಗೆ ಈ ದೇಗುಲ ಯಾವುದೆಂಬುದೂ ನಿಖರವಿಲ್ಲದಿದ್ದರೂ ಅದರ ಪ್ರಾಚೀನತೆಯನ್ನು ಅರಿಯುವುದು ಕಷ್ಟವೇನಲ್ಲ. ಬ್ರಿಟಿಷ್ ಲೈಬ್ರರಿ ಉಲ್ಲೇಖಿಸಿರುವಂತೆ ಹೆನ್ರಿ ಕೌಸೆನ್ಸ್ ಎಂಬುವವರು ೧೮೮೫ರಲ್ಲಿ ಸೆರೆಹಿಡಿದಿರುವ ಛಾಯಾಚಿತ್ರವೊಂದು ಇದನ್ನು ಜೈನ ದೇವಾಲಯವೆಂದು ಗುರುತಿಸಿದ್ದರೆ ಸ್ಥಳೀಯರಲ್ಲಿ ಕೆಲವರು ಇದೊಂದು ಹೆಣ್ಣು ದೇವರ ದೇಗುಲವಾಗಿತ್ತೆನ್ನುತ್ತಾರೆ. ದೇವಾಲಯದ ಮುಂಭಾಗ ಮತ್ತು ಶಿಖರಗಳು ಕುಸಿದು ಸುತ್ತ ಗಿಡಗಂಟೆಗಳು ಬೆಳೆದಿದ್ದರೂ ತಿರುಗಣಿಯಿಂದ ನುಣುಪಾಗಿಸಲ್ಪಟ್ಟಿರುವ ಕಂಬಗಳು ಹೊರಚಾಚಿಕೊಂಡು ನಯನಮನೋಹರವಾಗಿವೆ.




ತೋಟದ ಬದುವಿನಲ್ಲೇ ಮುಂದುವರೆದಾಗ ಬಹಳ ಹಿಂದಿನ ಕಾಲದ್ದೆನಿಸುವ ಕಲ್ಲಿನ ಚಕ್ರವೊಂದು ಹತ್ತಿರದ ಕೊಟ್ಟಿಗೆಯಲ್ಲಿ ಅನಾಥವಾಗಿ ಬಿದ್ದಿರುವುದು ಗೋಚರಿಸುತ್ತದೆ. ಹೀಗೆಯೇ ಹಾನಗಲ್ ಊರಿನಾದ್ಯಂತ ಐತಿಹಾಸಿಕ ಕುರುಹುಗಳು ಹರಡಿರುವ ಸಾಧ್ಯತೆಗಳು ಹೆಚ್ಚು. 


ವ್ಯವಸ್ಥಿತವಾದ ಉತ್ಖನನವನ್ನು ಕೈಗೊಂಡಲ್ಲಿ ಇತಿಹಾಸದ ಹಲವು ಪುಟಗಳನ್ನು ತುಂಬಿಸುವತಹ ವಿಚಾರಗಳು ಹಾನಗಲ್ ಆಸುಪಾಸಿನಲ್ಲಿ ಹೊರಬಂದರೆ ಆಶ್ಚರ್ಯವೇನಿಲ್ಲ. ಐಹೊಳೆ, ಲಕ್ಕುಂಡಿ, ಹಳೇಬೀಡುಗಳಂತೆ ಹಾನಗಲ್ ಸಹ ಶತಶತಮಾನಗಳ ಚಾರಿತ್ರಿಕ ಶ್ರೀಮಂತಿಕೆಯನ್ನು ಹೊಮ್ಮಿಸುವ ಸಾಮರ್ಥ್ಯ ಹೊಂದಿರುವುದರಲ್ಲಿ ಎರಡು ಮಾತಿಲ್ಲ.

Comments