Posts

Showing posts from September, 2024

ದೇವರ ತೋಟ

Image
 Kannada Translation of Robert Frost's poem "God's Garden" ದೇವರ ತೋಟ ದೇವರು ಸುಂದರ ತೋಟವನೊಂದನು ಮಾಡುತ ಹೂಗಿಡ ಹರಹಿದನು; ದಾರಿಯನೊಂದನು ಚಿಕ್ಕದು ಚೊಕ್ಕದು ಅವುಗಳ ನಡುವೆಯೆ ತೋರಿದನು. ಈ ಸುಂದರಬನದೊಳು ಜೀವಿಸಲೆನೆ ಮನುಕುಲವನು ತಾ ಕರೆಸಿದನು, ಇಂತೆಂದನು - "ಓ ನನ್ನಯ ಮಕ್ಕಳೆ, ಚಂದದಲರುಗಳ ನೀಡಿಹೆನು, ಲತೆಗಳನೋರಣಗೊಳಿಸುತಲರಳಿಯ ಪೋಷಿಸಿ ಹೂಗಳನುಪಚರಿಸಿ! ಹಾದಿಗೆ ತೆರಪಿರುವಂತೆಯೆ ಬಿಟ್ಟರೆ ನಿಮ್ಮಯ ಮನೆಯದೊ! ಕಾಣುವಿರಿ" ಹೊಸತೊಬ್ಬನು ಧಣಿ ಬಂದನು ನಂತರ, ಮನುಕುಲದೆಡೆಗವಗೊಲವಿಲ್ಲ, ಪಥವನೆ ಮುಚ್ಚುವ ಪರಿಯಲಿ ಹೊನ್ನಿನ ಹೂಗಳ ಬೆಳೆಸುತ ಸೆಳೆದಿದ್ದ. ಹೊಳೆಯುವ ಹೂಗಳ ಕಂಡಿತು ಮನುಕುಲ, ಥಳಥಳಿಸಿದವವು ಬೆಳಗಿನಲಿ! ಲೋಭದ ಮುಳ್ಳುಗಳಿದ್ದವು ಮರೆಯಲಿ ನಂಜನು ಸೂಸಿದವಾಳದಲಿ! ದೂರಕೆ ದೂರಕೆ ಅಲೆದರು ಹಲವರು ಹೊನ್ನಿನ ಹೂಗಳಲೊಲವಿಟ್ಟು, ಬಾಳಿನಿರುಳಿನಲಿ ದಾರಿಯು ತಪ್ಪಿರೆ ತೊಳಲಾಡಿದರಲ ಗತಿಗೆಟ್ಟು! ಸೊಗಸಿನ ಮಾಯೆಯು ಕುರುಡಾಗಿಸುವುದು ಕೈವಶವಾಗದೆ ಎಚ್ಚರಿರು! ದೇವರು ಸೃಜಿಸಿದ ಬಾನೊಳು ಮಿನುಗುವ ತಾರೆಗಳತ್ತಲೆ ಗಮನವಿಡು. ಅಪ್ಪಟ ನಡೆಯಿಹ ಕೇಡನು ಬಯಸದ ದಾರಿಯ ತೋರುವ ಕೆಳೆಗಳವು, ತಪ್ಪಿದ ಹೆಜ್ಜೆಯ ನೀನಿಡುತಿರಲವು ಹಾದಿಗೆ ಮರಳಿಸಿ ಸಲಹುವುವು. ನೇಸರ ಬೆಳಗಿರೆ ದೇವರು ನೆಟ್ಟಿಹ ಹೂಗಿಡಗಳ ಕಾಪಿಡುತಲಿರು, ಸಗ್ಗವ ತೋರುವ ಹಾದಿಯ ತೆರಪಿಗೆ ಬೆವರನು ಹರಿಸುತ ದುಡಿಯುತಿರು! - ವೆಂಕಟೇಶಪ್ರಸನ್ನ The or...

ನೆನಪು

Image
  ಪ್ರಕೃತಿಸೌಂದರ್ಯವನು ಬೆರಗಾಗಿ ಸವಿದಿರಲು  ನಿನ್ನ ಮಡಿಲೊಳು ಆಡಿ ಬೆಳೆದಿದ್ದ ನೆನಪು ಹೇಮಾವತಿಯ ಜಲವ ಕಣ್ಗೊತ್ತಿ ಸೇವಿಸಿರೆ ನೀನೂಡಿಸಿದ ಸುಧೆಯ ದಿವ್ಯತೆಯ ನೆನಪು ಸುಬ್ಬುಲಕ್ಷ್ಮಿಯ ಭಕ್ತಿಗಾನಗಳನಾಲಿಸಿರೆ ನೀನೆನಗೆ ಹಾಡಿದ್ದ ಲಾಲಿಗಳ ನೆನಪು ಚನ್ನಕೇಶವಗುಡಿಯ ಶಾಂತಲೆಯ ಶಿಲ್ಪದಲಿ ನೀ ತೋರಿದಕ್ಕರೆಯ ಔನ್ನತ್ಯ ನೆನಪು ಶಾರದೆಯ ಸಾನ್ನಿಧ್ಯದಲಿ ನಿಂತು ಕೈ ಮುಗಿಯೆ ನೀನಂದು ತಿದ್ದಿಸಿದ ಅಕ್ಷರದ ನೆನಪು ತುಳಜಾನಿವಾಸಿನಿಯ ಪೀಠಕ್ಕೆ ಹಣೆಯೊತ್ತೆ ನೀ ಮಮತೆಯಿಂದೆನ್ನನಪ್ಪಿದ್ದ ನೆನಪು ವರಲಕ್ಷ್ಮಿಯಿತ್ತಿರುವ ನೆಮ್ಮದಿಗೆ ವಂದಿಸಿರೆ ನೀನೆನಗೆ ಬೆಂಗಾವಲಾಗಿದ್ದ ನೆನಪು ಗುಬ್ಬಿಗಳ ಚಿಲಿಪಿಲಿಯನಾಲಿಸಿರೆ ನೀನೆನಗೆ ಕಚಗುಳಿಯನಿತ್ತು ನಲಿದಾಡಿಸಿದ ನೆನಪು ಕರುನಾಡ ಮಣ್ಣಿನಲಿ ಬೆಳೆದಕ್ಕಿಯನ್ನವನು ನೀನೆನಗೆ ತುತ್ತಿತ್ತು ಹರ್ಷಿಸಿದ ನೆನಪು ಭಾರತಿಯ ಪುಣ್ಯಧರೆಯೊಳು ಪುಟ್ಟಿಸಿದ ನಿನ್ನ ಋಣವ ನಾ ತೀರಿಸಲು ಅರಿದೆಂಬ ನೆನಪು ಮನುಕುಲದ ಸಂಸ್ಕಾರವನು ಧಾರೆಯೆರೆದೆನಗೆ ಗುರುವಾಗಿ ನಡೆನುಡಿಯ ಕಲಿಸಿದ್ದ ನೆನಪು ಹೂದೋಟವನು ಹೊಕ್ಕು ಕಂಪನಾಸ್ವಾದಿಸಿರೆ  ವನಸುಮದವೊಲು ನೀನು ಜೀವಿಸಿದ ನೆನಪು - ವೆಂಕಟೇಶಪ್ರಸನ್ನ This was inspired by two works: 1. The poem "ನಾನು" by Dattatreya Ramachandra Bendre 2. This nice song written and sung beautifully by Hindustani singer Shruti Bode: