ನೆನಪು

 

ಪ್ರಕೃತಿಸೌಂದರ್ಯವನು ಬೆರಗಾಗಿ ಸವಿದಿರಲು 
ನಿನ್ನ ಮಡಿಲೊಳು ಆಡಿ ಬೆಳೆದಿದ್ದ ನೆನಪು

ಹೇಮಾವತಿಯ ಜಲವ ಕಣ್ಗೊತ್ತಿ ಸೇವಿಸಿರೆ
ನೀನೂಡಿಸಿದ ಸುಧೆಯ ದಿವ್ಯತೆಯ ನೆನಪು

ಸುಬ್ಬುಲಕ್ಷ್ಮಿಯ ಭಕ್ತಿಗಾನಗಳನಾಲಿಸಿರೆ
ನೀನೆನಗೆ ಹಾಡಿದ್ದ ಲಾಲಿಗಳ ನೆನಪು

ಚನ್ನಕೇಶವಗುಡಿಯ ಶಾಂತಲೆಯ ಶಿಲ್ಪದಲಿ
ನೀ ತೋರಿದಕ್ಕರೆಯ ಔನ್ನತ್ಯ ನೆನಪು

ಶಾರದೆಯ ಸಾನ್ನಿಧ್ಯದಲಿ ನಿಂತು ಕೈ ಮುಗಿಯೆ
ನೀನಂದು ತಿದ್ದಿಸಿದ ಅಕ್ಷರದ ನೆನಪು

ತುಳಜಾನಿವಾಸಿನಿಯ ಪೀಠಕ್ಕೆ ಹಣೆಯೊತ್ತೆ
ನೀ ಮಮತೆಯಿಂದೆನ್ನನಪ್ಪಿದ್ದ ನೆನಪು

ವರಲಕ್ಷ್ಮಿಯಿತ್ತಿರುವ ನೆಮ್ಮದಿಗೆ ವಂದಿಸಿರೆ
ನೀನೆನಗೆ ಬೆಂಗಾವಲಾಗಿದ್ದ ನೆನಪು

ಗುಬ್ಬಿಗಳ ಚಿಲಿಪಿಲಿಯನಾಲಿಸಿರೆ ನೀನೆನಗೆ
ಕಚಗುಳಿಯನಿತ್ತು ನಲಿದಾಡಿಸಿದ ನೆನಪು

ಕರುನಾಡ ಮಣ್ಣಿನಲಿ ಬೆಳೆದಕ್ಕಿಯನ್ನವನು
ನೀನೆನಗೆ ತುತ್ತಿತ್ತು ಹರ್ಷಿಸಿದ ನೆನಪು

ಭಾರತಿಯ ಪುಣ್ಯಧರೆಯೊಳು ಪುಟ್ಟಿಸಿದ ನಿನ್ನ
ಋಣವ ನಾ ತೀರಿಸಲು ಅರಿದೆಂಬ ನೆನಪು

ಮನುಕುಲದ ಸಂಸ್ಕಾರವನು ಧಾರೆಯೆರೆದೆನಗೆ
ಗುರುವಾಗಿ ನಡೆನುಡಿಯ ಕಲಿಸಿದ್ದ ನೆನಪು

ಹೂದೋಟವನು ಹೊಕ್ಕು ಕಂಪನಾಸ್ವಾದಿಸಿರೆ 
ವನಸುಮದವೊಲು ನೀನು ಜೀವಿಸಿದ ನೆನಪು

- ವೆಂಕಟೇಶಪ್ರಸನ್ನ



Comments