Kannada Translation of Robert Frost's poem "God's Garden"
ದೇವರ ತೋಟ
ದೇವರು ಸುಂದರ ತೋಟವನೊಂದನು
ಮಾಡುತ ಹೂಗಿಡ ಹರಹಿದನು;
ದಾರಿಯನೊಂದನು ಚಿಕ್ಕದು ಚೊಕ್ಕದು
ಅವುಗಳ ನಡುವೆಯೆ ತೋರಿದನು.
ಈ ಸುಂದರಬನದೊಳು ಜೀವಿಸಲೆನೆ
ಮನುಕುಲವನು ತಾ ಕರೆಸಿದನು,
ಇಂತೆಂದನು - "ಓ ನನ್ನಯ ಮಕ್ಕಳೆ,
ಚಂದದಲರುಗಳ ನೀಡಿಹೆನು,
ಲತೆಗಳನೋರಣಗೊಳಿಸುತಲರಳಿಯ
ಪೋಷಿಸಿ ಹೂಗಳನುಪಚರಿಸಿ!
ಹಾದಿಗೆ ತೆರಪಿರುವಂತೆಯೆ ಬಿಟ್ಟರೆ
ನಿಮ್ಮಯ ಮನೆಯದೊ! ಕಾಣುವಿರಿ"
ಹೊಸತೊಬ್ಬನು ಧಣಿ ಬಂದನು ನಂತರ,
ಮನುಕುಲದೆಡೆಗವಗೊಲವಿಲ್ಲ,
ಪಥವನೆ ಮುಚ್ಚುವ ಪರಿಯಲಿ ಹೊನ್ನಿನ
ಹೂಗಳ ಬೆಳೆಸುತ ಸೆಳೆದಿದ್ದ.
ಹೊಳೆಯುವ ಹೂಗಳ ಕಂಡಿತು ಮನುಕುಲ,
ಥಳಥಳಿಸಿದವವು ಬೆಳಗಿನಲಿ!
ಲೋಭದ ಮುಳ್ಳುಗಳಿದ್ದವು ಮರೆಯಲಿ
ನಂಜನು ಸೂಸಿದವಾಳದಲಿ!
ದೂರಕೆ ದೂರಕೆ ಅಲೆದರು ಹಲವರು
ಹೊನ್ನಿನ ಹೂಗಳಲೊಲವಿಟ್ಟು,
ಬಾಳಿನಿರುಳಿನಲಿ ದಾರಿಯು ತಪ್ಪಿರೆ
ತೊಳಲಾಡಿದರಲ ಗತಿಗೆಟ್ಟು!
ಸೊಗಸಿನ ಮಾಯೆಯು ಕುರುಡಾಗಿಸುವುದು
ಕೈವಶವಾಗದೆ ಎಚ್ಚರಿರು!
ದೇವರು ಸೃಜಿಸಿದ ಬಾನೊಳು ಮಿನುಗುವ
ತಾರೆಗಳತ್ತಲೆ ಗಮನವಿಡು.
ಅಪ್ಪಟ ನಡೆಯಿಹ ಕೇಡನು ಬಯಸದ
ದಾರಿಯ ತೋರುವ ಕೆಳೆಗಳವು,
ತಪ್ಪಿದ ಹೆಜ್ಜೆಯ ನೀನಿಡುತಿರಲವು
ಹಾದಿಗೆ ಮರಳಿಸಿ ಸಲಹುವುವು.
ನೇಸರ ಬೆಳಗಿರೆ ದೇವರು ನೆಟ್ಟಿಹ
ಹೂಗಿಡಗಳ ಕಾಪಿಡುತಲಿರು,
ಸಗ್ಗವ ತೋರುವ ಹಾದಿಯ ತೆರಪಿಗೆ
ಬೆವರನು ಹರಿಸುತ ದುಡಿಯುತಿರು!
- ವೆಂಕಟೇಶಪ್ರಸನ್ನ
The original:
God's Garden by Robert Frost
God made a beauteous garden
With lovely flowers strewn,
But one straight, narrow pathway
That was not overgrown.
And to this beauteous garden
He brought mankind to live,
And said: "To you, my children,
These lovely flowers I give.
Prune ye my vines and fig trees,
With care my flowerets tend,
But keep the pathway open
Your home is at the end."
Then came another master,
Who did not love mankind,
And planted on the pathway
Gold flowers for them to find.
And mankind saw the bright flowers,
That, glittering in the sun,
Quite hid the thorns of avarice
That poison blood and bone;
And far off many wandered,
And when life's night came on,
They were seeking gold flowers,
Lost, helpless and alone.
O, cease to heed the glamour
That blinds your foolish eyes,
Look upward to the glitter
Of stars in God's clear skies.
Their ways are pure and harmless
And will not lead astray,
But aid your erring footsteps
To keep the narrow way.
And when the sun shines brightly
Tend flowers that God has given
And keep the pathway open
That leads you on to heaven.
Comments