ಬಾಲ್ಯದ ಓದಿನ ನೆನಪುಗಳು

ಈ ಕೆಳಗಿನ ದಿ ಅರುಣ್ ಮೇಷ್ಟ್ರು ಶೋ ಎರಡನೇ ಆವೃತ್ತಿಯ ಮಾತುಗಳನ್ನು ಕೇಳಿದ ಮೇಲೆ ನನಗೂ ಬಾಲ್ಯದಲ್ಲಿ ಓದಲು ಪುಸ್ತಕಗಳಿಗಾಗಿ ಹಾತೊರೆಯುತ್ತಿದ್ದ ದಿನಗಳು ನೆನಪಾದವು.



ನಾನು ಇದ್ದದ್ದು ಒಂದು ಸಣ್ಣ ಊರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ. ಈಗ ಊರು ದೊಡ್ಡದಾಗಿ ಬೆಳೆದಿದ್ದರೂ ನನ್ನ ಬಾಲ್ಯದ ಕಾಲಕ್ಕೆ ಅದು ಸಣ್ಣ ಊರು. ಅಲ್ಲಿ ಕೊಳ್ಳಲು ಪುಸ್ತಕದ ಅಂಗಡಿಗಳು ಹೆಚ್ಚಾಗಿ ಇರಲಿಲ್ಲ. ನನ್ನ ಪಾಲಿಗೆ ವರವಾಗಿದ್ದಂತಹವು ಊರಿನ "ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿ" ಎಂಬ ಒಂದು ಖಾಸಗಿ ಗ್ರಂಥಾಲಯ ಮತ್ತು ಸರ್ಕಾರಿ ಗ್ರಂಥಾಲಯ. ಅಲ್ಲಿಂದ ಎರವಲು ತಂದು ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲ.

ನನಗೆ ಪುಸ್ತಕಗಳ ಪರಿಚಯವಾದದ್ದು ಮನೆಯಲ್ಲಿದ್ದ ಅಮರ ಚಿತ್ರ ಕಥೆ ಪುಸ್ತಕಗಳಿಂದ. ನಮ್ಮ ತಂದೆಯವರು, ಚಿಕ್ಕಪ್ಪ ಆಗಾಗ ಈ ಪುಸ್ತಕಗಳನ್ನು ತಂದಿಟ್ಟಿದ್ದರು. ಅವು ಕೇವಲ ಕಾಮಿಕ್ಸ್ ಪುಸ್ತಕಗಳಾಗಿದ್ದರೂ ಅವುಗಳಿಂದ ಕಲಿತದ್ದು ಬಹಳ. ಮಕ್ಕಳಿಗೆ ಭಾರತದ ಮೂಲೆ ಮೂಲೆಗಳಿಂದ ಪುರಾಣ ಮತ್ತು ನೀತಿಕಥೆಗಳನ್ನು ಹೆಕ್ಕಿ ತಂದು ಮನಮುಟ್ಟುವಂತೆ ಕಲಿಸಿದ ಶ್ರೇಯ ಅಮರ ಚಿತ್ರ ಕಥೆ ಮತ್ತು ಅನಂತ ಪೈ ಅವರಿಗೆ ಸಲ್ಲಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತರೇ (ಪ್ರೀತಿಯ ಕಾರಂತಜ್ಜ) ಅವುಗಳಲ್ಲಿ ಹಲವನ್ನು ಖುದ್ದಾಗಿ ಕನ್ನಡಕ್ಕೆ ಅನುವಾದಿಸಿದ್ದರೆಂದರೆ ಇನ್ನು ಕೇಳಬೇಕೇ?

ಅಮರ ಚಿತ್ರ ಕಥೆಗಳ ನಂತರ ಶಾಲೆಯಲ್ಲಿ ಬೇರೆ ಪುಸ್ತಕಗಳ ಪರಿಚಯವೂ ಆಯಿತು. ಶಾಲೆಯೆಂದರೆ ಊರಿನಲ್ಲಿದ್ದ ಚೈತನ್ಯ ವಿದ್ಯಾ ಶಾಲೆ. ಅಂದಿಗೂ, ಇಂದಿಗೂ ಊರಿನಲ್ಲಿ ಕಲಶಪ್ರಾಯವಾದ ವಿದ್ಯಾ ಸಂಸ್ಥೆ. ಒಂದು ವರ್ಷದ ಮಟ್ಟಿಗೆ ನಮ್ಮ ಶಾಲೆಯಲ್ಲಿ ಪ್ರತಿ ಶನಿವಾರ ಮಕ್ಕಳಿಗೆ ಒಬ್ಬೊಬ್ಬರಿಗೆ ಒಂದೊಂದರಂತೆ ಪುಸ್ತಕಗಳನ್ನು ಹಂಚುವುದು ನಡೆಯಿತು. ಶಾಲೆಯದ್ದೇ ಲೈಬ್ರರಿ. ಇನ್ನೂ ಕರಾರುವಾಕ್ಕಾಗಿ ಹೇಳಬೇಕೆಂದರೆ ಶಾಲೆಯ ಪ್ರಿನ್ಸಿಪಾಲರದೇ. ಅವರ ಮನೆಯಲ್ಲಿದ್ದ ಅವರ ಸ್ವಂತ ಪುಸ್ತಕಗಳು. ಒಂದು ಶನಿವಾರ ಪುಸ್ತಕವೊಂದನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ ಮುಂದಿನ ಶನಿವಾರ ವಾಪಸ್ ಕೊಡುವುದು; ಮತ್ತೊಂದು ಪುಸ್ತಕ ತೆಗೆದುಕೊಂಡು ಹೋಗುವುದು - ಹೀಗಿತ್ತು ಪರಿಪಾಠ. ಪ್ರತಿ ವಾರ ಯಾವ ಪುಸ್ತಕ ನಮಗೆ ಸಿಗುತ್ತದೆ ಎಂಬ ವಿಷಯ ಗುರುಗಳು ನಮಗೆ ಪುಸ್ತಕ ಕೊಡುವವರೆಗೂ ಗೊತ್ತಿರುತ್ತಿರಲಿಲ್ಲ. ನಮಗೆ ಆ ಆಯ್ಕೆಯೂ ಇರಲಿಲ್ಲ. ಅವರು ಕೊಟ್ಟಿದ್ದನ್ನು ಓದುವುದು. ಹಾಗಿದ್ದರೂ ಅದೇ ಒಂದು ಖುಷಿ. ಅದು ಒಂದು ರೀತಿಯ ಕುತೂಹಲವನ್ನೂ ಹುಟ್ಟಿಸುತ್ತಿತ್ತು - "ಈ ವಾರ ನನಗೆ ಯಾವ ಪುಸ್ತಕ ಸಿಗುತ್ತದಪ್ಪಾ" ಎಂದು. 

ಈ ರೀತಿ ಶಾಲೆಯಲ್ಲಿ ವಾರಕ್ಕೊಮ್ಮೆ ಹಂಚುತ್ತಿದ್ದ ಪುಸ್ತಕಗಳಲ್ಲಿ ನನಗೆ ಮೊದಲಿಗೆ ಸಿಕ್ಕಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ "ಫ್ಲೈಯಿಂಗ್ ಸಾಸರ್ಸ್ - ಭಾಗ ೧". ಇದರಿಂದ ನನಗೆ ಹಾರುವ ತಟ್ಟೆಗಳ ಬಗ್ಗೆ ಮತ್ತು ತೇಜಸ್ವಿಯವರ ಬರವಣಿಗೆಯ ಬಗ್ಗೆ ಪರಿಚಯ ದೊರೆಯಿತು. ಆದರೆ ಶಾಲೆಯಲ್ಲಿ ಅವರ "ಫ್ಲೈಯಿಂಗ್ ಸಾಸರ್ಸ್ - ಭಾಗ ೨" ಪುಸ್ತಕ ಸಿಗಲೇ ಇಲ್ಲ. ಮುಂದಿನ ಮೂರ್ನಾಲ್ಕು ವರ್ಷಗಳು ನಾನು ಫ್ಲೈಯಿಂಗ್ ಸಾಸರ್ಸ್‌ಗಳ ಬಗ್ಗೆ ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಹುಡುಕಾಡಿ ಓದಿ ತಿಳಿದುಕೊಂಡಿದ್ದಷ್ಟೇ ಅಲ್ಲದೆ ನನಗೆ ನಾನೇ ಅದರ ಬಗ್ಗೆ ಒಂದು ಪುಸ್ತಕ ಬರೆದಿಟ್ಟುಕೊಂಡೆ. ಹಾರುವ ತಟ್ಟೆಗಳ ಬಗೆಗಿನ ಎಲ್ಲಾ conspiracy theoryಗಳು ಒಂದು ರೀತಿ ಆ ವಯಸ್ಸಿನಲ್ಲಿ ಮೋಡಿ ಮಾಡಿದ್ದವು. ಅದಕ್ಕೆ ಕಾರಣ ತೇಜಸ್ವಿಯವರ ಬರವಣಿಗೆಯ ಶೈಲಿ.



ಈ ಪುಸ್ತಕವಲ್ಲದೆ ಶಾಲೆಯ ಶನಿವಾರದ ಲೈಬ್ರರಿಯ ಕಾರಣದಿಂದಲೇ ನನಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಹಲವು ಮಹನೀಯರ ಬಗ್ಗೆ ಚಿಕ್ಕದಾಗಿಯಾದರೂ ಚೊಕ್ಕವಾಗಿ ತಿಳಿದುಕೊಳ್ಳುವ ಅವಕಾಶವಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕರು, ಸರದಾರ್ ವಲ್ಲಭಭಾಯ್ ಪಟೇಲರು, ಅಶ್ಫಾಕ್ ಉಲ್ಲಾ ಖಾನ್, ಸುಭಾಷ್ ಚಂದ್ರ ಬೋಸ್, ಮುಂತಾದವರ ಬಗ್ಗೆ, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿಯಂತಹವರ ಬಗ್ಗೆ ನಾನು ಆಗ ಆ ಸಣ್ಣ ಪುಸ್ತಕಗಳಲ್ಲಿ ಓದಿದ ಹಲವು ವಿಷಯಗಳು ಈಗಲೂ ಅಚ್ಚೊತ್ತಿದಂತೆ ನೆನಪಿವೆ.

ಮತ್ತೊಂದು ಶನಿವಾರ ಅನುಪಮಾ ನಿರಂಜನ ಅವರ "ದಿನಕ್ಕೊಂದು ಕಥೆ" ಪುಸ್ತಕ ದೊರೆತಿತ್ತು. ಅದನ್ನು ಮಂಗಳವಾರದ ಹೊತ್ತಿಗೇ ಪೂರ್ತಿಯಾಗಿ ಓದಿ ಮುಗಿಸಿ ಸ್ನೇಹಿತನಿಗೆ ಸಿಕ್ಕಿದ್ದ ಡಿವಿಜಿಯವರ "ಇಂದ್ರವಜ್ರ"ವನ್ನೂ ಪಡೆದುಕೊಂಡು ಓದಿದ್ದೆ. ಅದರಲ್ಲೇ ಏನೋ ಒಂದು ಮಹತ್ಸಾಧನೆ ಮಾಡಿದ ಅನುಭವ. ಜೀವನದಲ್ಲಿ ಅದೇ ಮೊದಲ ಬಾರಿಗೆ ಡಿವಿಜಿಯವರ ಬರವಣಿಗೆಯನ್ನು ಓದಿದ್ದೂ ಸಹ.

ಆದರೆ ಶಾಲೆಯ ಲೈಬ್ರರಿ ಹೆಚ್ಚು ದಿನ ನಡೆಯಲಿಲ್ಲ. ಕಾರಣ ಗೊತ್ತಿಲ್ಲ. ಓದಿಗೆ ಇನ್ನಷ್ಟು ಆಸಕ್ತಿ ಹೆಚ್ಚಾಗತೊಡಗಿದ್ದಾಗ ನನ್ನ ಸಹಾಯಕ್ಕೆ ಬಂದಿದ್ದು ಈ ಮೊದಲೇ ಹೇಳಿದ ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿ. ಅದರ ಮಾಲಿಕರಾದ ಜಯರಾಮು ಅವರು ನನ್ನ ತಂದೆಯವರ ಹತ್ತಿರದ ಸ್ನೇಹಿತರಾಗಿದ್ದದ್ದು ಇನ್ನೂ ಒಳ್ಳೆಯದಾಯಿತು. ನಾನು ಯಾವಾಗ ಯಾವ ಪುಸ್ತಕ ಕೇಳಿದರೂ ಅವರು ಇಲ್ಲವೆಂದವರಲ್ಲ. ಮಾರಾಟಕ್ಕೆಂದು ತಂದಿಟ್ಟುಕೊಂಡಿದ್ದ ಪುಸ್ತಕಗಳನ್ನೂ ಅವರು ನನಗೆಂದು ಎರವಲಿಗೆ ಕೊಟ್ಟದ್ದಿದೆ. ಅಲ್ಲಿಂದಲೇ ಹಲವು ನಿಯತಕಾಲಿಕೆಗಳೂ ಸಹ ನನಗೆ ಪರಿಚಯವಾದವು. Reader's Digest, ಚುಟುಕ, ಸಂತೃಪ್ತಿ, ಕಸ್ತೂರಿ, ಮಯೂರ, ತುಷಾರ ಮುಂತಾದವು, ಮಕ್ಕಳ ನಿಯತಕಾಲಿಕೆಗಳಾಗಿದ್ದ ಬಾಲಮಂಗಳ, ಬಾಲಮಿತ್ರ, ಚಂದಮಾಮ, ಬೊಂಬೆಮನೆ, ಚಂಪಕ, Tinkle ಮುಂತಾದವು ನಮ್ಮ ಮನೆಯ ಖಾಯಂ ಅತಿಥಿಗಳಾದವು. ಬಾಲಮಂಗಳವಂತೂ ನಾನು ಪ್ರತಿ ಹದಿನೈದು ದಿನಕ್ಕೊಮ್ಮೆ ದುಡ್ಡು ಕೊಟ್ಟು ಕೊಂಡು ಓದಿ ಸಂಗ್ರಹಿಸಿಟ್ಟುಕೊಂಡ ಮೊದಲ ಪುಸ್ತಕಗಳ ಗೊಂಚಲಿಗೆ ಸೇರುತ್ತದೆ. ಸ್ನೇಹಿತರೊಡನೆ ಯಾರ ಬಳಿ ಅತಿ ಹೆಚ್ಚು ಬಾಲಮಂಗಳಗಳಿವೆ ಎಂಬ ಪಂಥ ಹೂಡಿ ಅದಕ್ಕಾಗಿ ನಮ್ಮ ಚಿಕ್ಕಪ್ಪನವರಿಗೆ ದುಂಬಾಲು ಬಿದ್ದು, ಅವರು ಬೆಂಗಳೂರಿನ ಅವೆನ್ಯೂ ರೋಡಿನಿಂದ ಹಳೆಯ ಬಾಲಮಂಗಳಗಳ ನೂರಕ್ಕೂ ಹೆಚ್ಚು ಪ್ರತಿಗಳನ್ನು ನನಗೆ ತಂದುಕೊಟ್ಟದ್ದಿದೆ. ಅವೆಲ್ಲವನ್ನೂ ವಾರದೊಳಗೇ ಓದಿ ಮುಗಿಸಿ ಒಂದು ರೀತಿಯ ಶೂನ್ಯವನ್ನು ನನಗೆ ನಾನೇ ಸೃಷ್ಟಿ ಮಾಡಿಕೊಂಡದ್ದೂ ಅಷ್ಟೇ ನಿಜ.

ಪ್ರೈಮರಿ ಸ್ಕೂಲಿನ ಕೊನೆಯ ಎರಡು ವರ್ಷಗಳಲ್ಲಿ ನಮಗೆ ನಮ್ಮದೇ ಆದ ಒಂದು ಗ್ರಂಥಾಲಯ ಮಾಡಿಕೊಳ್ಳಲೂ ಸಲಹೆ ಕೊಟ್ಟವರು ಶಾಲೆಯಲ್ಲಿ ನಾಟಕ ಕಲೆಯನ್ನು ಕಲಿಸುತ್ತಿದ್ದ ನಾಗರಾಜ್ ಮೇಷ್ಟ್ರು. ಶಾಲೆಯಿಂದ ಪುಸ್ತಕಗಳನ್ನು ಎರವಲು ಕೊಡುತ್ತಿದ್ದ ಪದ್ಧತಿ ನಿಂತು ಹೋಗಿ ಎರಡು ವರ್ಷಗಳಾಯಿತು ಎಂದು ನಾವು ಕೆಲವು ವಿದ್ಯಾರ್ಥಿಗಳು ಅವರಲ್ಲಿ ಅಲವತ್ತುಕೊಂಡಾಗ ಅವರು "ನಿಮ್ಮ ನಿಮ್ಮ ಮನೆಗಳಲ್ಲಿ ಪುಸ್ತಕಗಳಿಲ್ಲವೇ? ಒಬ್ಬರು ಓದಿರುವುದು ಮತ್ತೊಬ್ಬರು ಓದಿರುವುದಿಲ್ಲ. ಅವುಗಳನ್ನೇ ತಂದು ವಾರಕ್ಕೊಮ್ಮೆ ಅದಲು ಬದಲು ಮಾಡಿಕೊಂಡು ಓದಿ. ನಾನೇ ಇದಕ್ಕೆ ಸಹಾಯ ಮಾಡುತ್ತೇನೆ" ಎಂಬ ಬಹಳ ಸುಲಭವಾದ ಸುಂದರವಾದ ಸಲಹೆ ಕೊಟ್ಟ ಅವರು ತಾವು ಶಾಲೆಯಲ್ಲಿರುವವರೆಗೂ ಅದನ್ನು ಪೋತ್ಸಾಹಿಸಿದರು. ಅವರು ಶಾಲೆ ಬಿಟ್ಟು ಹೋದ ಮೇಲೆ ನಮ್ಮಲ್ಲಿಯೂ ಆ ಸಡಗರ ಕಡಿಮೆಯಾಯಿತೇನೋ. ಅದು ಅಲ್ಲಿಗೇ ನಿಂತು ಹೋಯಿತು.

ಆದರೆ ನಾಗರಾಜ್ ಮೇಷ್ಟ್ರ ಆ ಸಲಹೆಯನ್ನು ನಾನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ನಮ್ಮ ಮನೆಯಲ್ಲೇ ಇದ್ದ ಎಲ್ಲ ಪುಸ್ತಕಗಳಿಗೂ ಒಂದೊಂದು ನಂಬರ್ ಕೊಟ್ಟು ಮನೆಯ ಪುಸ್ತಕದ ಗೂಡನ್ನೇ ಲೈಬ್ರರಿಯಾಗಿ ಪರಿವರ್ತಿಸಿದೆ! ನಾನೇ ಲೈಬ್ರೇರಿಯನ್, ನಾನೇ ಗ್ರಾಹಕ! ಮುಂದೊಂದು ದಿನ ನನ್ನದೇ ಲೈಬ್ರರಿಯೊಂದನ್ನು ನಡೆಸಬೇಕೆನ್ನುವುದು ನನ್ನ ಆಗಿನ ಬದುಕಿನ ಗುರಿಗಳಲ್ಲೊಂದಾಗಿತ್ತು.

ಇನ್ನು ಹೈಸ್ಕೂಲಿಗೆ ಹೋದಂತೆ ಊರಿನ ಸರ್ಕಾರಿ ಗ್ರಂಥಾಲಯದ ಕಾರ್ಡ್ ಮಾಡಿಸಿಕೊಂಡು ಶಿಸ್ತಿನಿಂದ ಹಲವು ಪುಸ್ತಕಗಳನ್ನು ಓದಿದ್ದು ಇನ್ನೂ ಆಸಕ್ತಿ ಹೆಚ್ಚುವಂತಾಗಿಸಿತು. ಮಹಾನ್ ಲೇಖಕರ ಹಲವು ಕೃತಿಗಳನ್ನೇನೂ ಓದದಿದ್ದರೂ ನಮ್ಮದೇ ಊರಿನ ಇತಿಹಾಸ, ಕರ್ನಾಟಕದ ದೇಗುಲಗಳು, ಕಂಪ್ಯೂಟರ್‌ಗಳ ಹುಟ್ಟು ಮತ್ತು ಇತಿಹಾಸ, ಇವೇ ಮುಂತಾದ ವಿಷಯಗಳ ಬಗೆಗಿನ ಪುಸ್ತಕಗಳನ್ನು  ಅಲ್ಲಿಂದ ತಂದು ಓದಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಅಲ್ಲಿಯ ಪುಸ್ತಕ ಭಂಡಾರದಲ್ಲಿ ಹುಡುಕಾಡುತ್ತಾ ಗಂಟೆಗಟ್ಟಲೆ ಸಮಯ ಕಳೆದದ್ದೂ ಉಂಟು.

ಇದಲ್ಲದೇ ನಮಗೆ ಹೊಸ ಪುಸ್ತಕಗಳನ್ನು ಕೊಳ್ಳಲು ಸಿಗುತಿದ್ದ ಒಂದು ಅವಕಾಶವೆಂದರೆ ನಮ್ಮ ಶಾಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ. ಅದರ ಅಂಗವಾಗಿ ಮೈಸೂರು, ಬೆಂಗಳೂರುಗಳ ಶ್ರೀ ರಾಮಕೃಷ್ಣ ಮಿಷನ್ ಮತ್ತು ಇನ್ನೂ ಕೆಲವು ಸಂಘ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸುತ್ತಿದ್ದರು ಶಾಲೆಯಲ್ಲಿ. ಆ ಸಂದರ್ಭದಲ್ಲಿ ಪುಸ್ತಕಗಳನ್ನು ಕೊಳ್ಳಲು ಮನೆಯಲ್ಲಿ ಹಣ ಕೇಳುವುದು ಸ್ವಲ್ಪ ಸುಲಭವಾಗಿತ್ತು. ಇಂಥದ್ದೊಂದು ಪುಸ್ತಕ ಬೇಕೆಂದು ಯಾವಾಗ ಕೇಳಿದರೂ ಮನೆಯಲ್ಲಿ ಯಾರೇನೂ ಬೇಡವೆನ್ನುತ್ತಿರಲಿಲ್ಲ. ಆದರೂ ಏನೋ ಒಂದು ಹಿಂಜರಿಕೆ, ಮನೆಯ ಹಣಕಾಸಿನ ಪರಿಸ್ಥಿತಿಯನ್ನು ಮನಗಂಡಿದ್ದರಿಂದ. ಆದರೆ ಶಾಲೆಯಲ್ಲೇ ಪುಸ್ತಕ ಕೊಳ್ಳುವ ಅವಕಾಶ ವರ್ಷಕ್ಕೊಮ್ಮೆ ಸಿಕ್ಕಿದಾಗ ಆ ಹಿಂಜರಿಕೆಯನ್ನು ಬದಿಗೊತ್ತಿ ಒಂದಷ್ಟು ಪುಸ್ತಕಗಳನ್ನು ಕೊಂಡು ಓದಿ ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡದ್ದರಲ್ಲಿ ಅನುಮಾನವಿಲ್ಲ.

ಪುಸ್ತಕಗಳನ್ನು ಓದುವುದರಲ್ಲಿ ಆಗಿದ್ದ ಕಾತರತೆ, ಆನಂದವನ್ನು ನೆನೆಸಿಕೊಂಡರೆ ಈಗಲೂ ಮನಸ್ಸಿಗೆ ಒಂದು ಬಗೆಯ ಸಂತೋಷವಾಗುತ್ತದೆ. ಇದನ್ನು ನೆನಪು ಮಾಡಿಕೊಳ್ಳಲು ದಾರಿ ಮಾಡಿಕೊಟ್ಟ ಅರುಣ್ ಮೇಷ್ಟ್ರಿಗೆ ಧನ್ಯವಾದಗಳು.

Comments