ಪರಿದೃಶ್ಯ

 ಪರಿದೃಶ್ಯ


ಪುಗ್ಗೆಯ ಮಾರುವ ಅಣ್ಣನು ಬಂದಿಹ,
ಹಿಗ್ಗೋಹಿಗ್ಗದು ಮಕ್ಕಳಿಗೆ.
ಗಿಲಕಿಯನಾಡಿಸಿ ಪೀಪಿಯನೂದಿಹ,
ನಲಿವಿನ ಪರಿಸರವೆಲ್ಲ ಕಡೆ!

ಬಣ್ಣದ ಹಾಳೆಯ ಗಾಳಿಯ ಪಟವಿದೆ
ಚಿಣ್ಣಿಯ ಕೋಲಿದೆ, ಬುಗುರಿಯಿದೆ,
ಗಿರಿಗಿರಿಗುಟ್ಟುವ ಗಿರಿಗಿಟ್ಟಲೆಯಿದೆ,
ಬುರುಗಿನ ಗುಳ್ಳೆಯ ಬಳೆಗಳಿವೆ!

ಗಿಲಕಿಯು, ಪುಗ್ಗೆಯು, ತಗಡಿನ ತುತ್ತುರಿ,
ತಲೆಯಾಡಿಸುವಾಟಿಕೆಗಳಿವೆ,
ಕಪ್ಪೆಯ ಚಿಪ್ಪಿದೆ, ಚನ್ನೆಯ ಮಣೆಯಿದೆ,
ತಿಪ್ಪರಲಾಗದ ಗೊಂಬೆಯಿದೆ!

ಸಕ್ಕರೆ ಕಾಳಿದೆ, ಅಜ್ಜಿಯ ಕೂದಲು,
ಮುಕ್ಕುವ ಹುರಿಗಾಳಿರಬಹುದು!
ಜಜ್ಜಿದ ಹುಣಿಸೆಯು, ಬೋರೆಯ ಹಣ್ಣಿದೆ
ಗಜ್ಜುಗ ಗೋಲಿಗಳಿರಬಹುದು!

ಹೊತ್ತು ತರುತಲಿಹನವನದನೆಲ್ಲವ
ಸುತ್ತಿಹುದವನನು ಹಸುಳೆಪಡೆ!
ರಟ್ಟೆಗಳೆರಡೇ, ವಿಸ್ಮಯವೇನೆನೆ
ಸೃಷ್ಟಿಯವನ ಬೆನ್ನೇರಿಹುದೆ?

ಅಚ್ಚರಿಯಿಂದಲಿ ನೋಡುತಲವನನು
ಮೆಚ್ಚಿದ ಚಿಣ್ಣನು ಕಣ್ಣಿನಲೇ! 
ಸಡಗರದಿಂದಲಿ ತಾಯಿಯ ಕೇಳಿದ,
ತಡೆಯಿರದಾಯಿತು ಕಲ್ಪನೆಗೆ!

ಜಟೆಯಲಿ ನಾಗರ, ಶಶಿ, ಗಂಗೆಯರಿಹ
ನಟರಾಜನು ಇವನೇನಮ್ಮಾ?
ವಸುದೇವನ ಸುತ ರಣದಲಿ ನರನಿಗೆ
ಬೆಸಸಿದ ರೂಪವಿದೇನಮ್ಮಾ?

ಗಿರಿಯನೆ ಹೊರುತಲಿ ರಾಘವರಿಗೆ ಮ-
ದ್ದೆರೆದಿಹ ಹನುಮನು ಇವನೇನೆ?
ಸಾವಿರದಾಸೆಗಳೆಲ್ಲವ ನೀಡುವ
ದೇವರ ಲೋಕದ ಗೋವೇನೆ?

ಚಿಣ್ಣರ ಮೊಗದಲಿ ನಗುವನು ಮೂಡಿಸಿ
ತನ್ನಯ ಸಂತಸ ಕಂಡವನು,
ಅರಿವು-ಇರವು-ನಲಿವೆಂಬುವನೆಲ್ಲವ
ಮೆರೆಸುತ ದಿನಗಳ ಕಳೆದಿಹನು!

ಕುಗ್ಗಿದ ಮನಗಳ ಹಿಗ್ಗಿಸಿ ನಲಿಸುವ
ಪುಗ್ಗೆಯ ಪಣ್ಯವ ನಾ ತೆರೆವೆ!
ಕೊಳ್ಳಲು ಜನ ಬರದಿರೆ ತೊಡಕೇನಿದೆ?
ಗುಳ್ಳೆಯನೂದುತ ಮೈಮರೆವೆ!

ವೆಂಕಟೇಶಪ್ರಸನ್ನ




Comments