ಡಂಬಳ: ಮತ್ತೆ ಮತ್ತೆ ನೋಡಬೇಕೆನಿಸುವ ಹಂಬಲ

ಹನ್ನೊಂದು ಮತ್ತೆ ಹನ್ನೆರಡನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ಮತ್ತು ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪದ ಪರಾಕಾಷ್ಠೆಯನ್ನು ಪ್ರದರ್ಶಿಸುವ ಹಲವು ದೇಗುಲಗಳಿಗೆ ಗದಗ ಜಿಲ್ಲೆ ಇಂದು ತವರೂರಾಗಿದೆ. ಇವುಗಳಲ್ಲಿ ಅತ್ಯಂತ ಸುಂದರವಾಗಿದ್ದೂ ಸಹ ಎಲೆಮರೆಯ ಕಾಯಾಗಿರುವ ಡಂಬಳ ದೊಡ್ಡಬಸಪ್ಪ ದೇವಾಲಯವೂ ಒಂದು. ಡಂಬಳ ಗದಗಿನಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರವಿದ್ದು, ಮುಂಡರಗಿ ತಾಲ್ಲೂಕಿಗೆ ಸೇರಿರುವ ಒಂದು ಹಳ್ಳಿ. ಆದರೆ ಇದೇ ಡಂಬಳ ಚಾಲುಕ್ಯರ ಕಾಲಕ್ಕೆ ಮಾಸವಾಡಿನಾಡೆಂದು ಕರೆಸಿಕೊಂಡ ಪ್ರದೇಶದ ರಾಜಧಾನಿಯಾಗಿ ಮೆರೆದ ಧರ್ಮಪುರ, ಧರ್ಮೋಳ, ಧರ್ಮವೊಳಲ್ ಎಂದೆಲ್ಲಾ ಹೆಸರು ಮಾಡಿದ್ದ ಮಹಾಪಟ್ಟಣ. ಆಗಿನ ಕಾಲದ ಧಾರ್ಮಿಕ ಅನ್ಯೋನ್ಯತೆಗೆ ಹಿಡಿದ ಕನ್ನಡಿಯಂತಿದ್ದ ಡಂಬಳದ ಶಿಲ್ಪಕಲಾ ಮತ್ತು ಐತಿಹಾಸಿಕ ಹೆಚ್ಚುಗಾರಿಕೆನ್ನು ಬಿಂಬಿಸುವ ಪ್ರಯತ್ನ ಲೇಖನ.

ಚಿತ್ರ ೧. ದೂರದಿಂದಲೇ ಕೈಬೀಸಿ ಕರೆಯುವ ದೊಡ್ಡಬಸಪ್ಪ ದೇವಾಲಯ

ಡಂಬಳ ಮತ್ತು ಆಸುಪಾಸಿನಲ್ಲಿ ದೊರಕಿರುವ ಶಾಸನಗಳ ಪ್ರಕಾರ ಹಿಂದೆ ಹಳ್ಳಿ ಬೌದ್ಧ, ಜೈನ ಮತ್ತು ಹಿಂದೂ ಧರ್ಮಗಳ ಪೋಷಣೆ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿರುವುದು ಕಂಡುಬರುತ್ತದೆ. ಕ್ರಿ.ಶ. 1059 ಶಾಸನದಿಂದಾಗಿ ಡಂಬಳದಲ್ಲಿ ಮೊದಲೇ ಉಪಸ್ಥಿತವಿದ್ದ ಜಿನಾಲಯವೊಂದಕ್ಕೆ ಚಾಲುಕ್ಯ ದೊರೆ ಮೊದಲನೇ ಸೋಮೇಶ್ವರ ದತ್ತಿ ಕೊಟ್ಟಿರುವುದು ತಿಳಿದುಬಂದರೆ, 1095 ಶಾಸನವೊಂದರಂತೆ ಹದಿನಾರು ಜನ ವರ್ತಕರು ಬೌದ್ಧ ದೇವತೆ ತಾರಾದೇವಿಯ ದೇಗುಲವನ್ನು ಕಟ್ಟಲು ಸಹಾಯ ಮಾಡಿರುವುದು ಗೊತ್ತಾಗುತ್ತದೆ. ಆದರೆ ದೇಗುಲವಾಗಲೀ, ಬೌದ್ಧ ವಿಹಾರವಾಗಲೀ ಅಥವಾ ಜಿನಾಲಯಗಳಾಗಲೀ ಇಂದು ಡಂಬಳದಲ್ಲಿ ಕಾಣಸಿಗುವುದಿಲ್ಲ. 

ಚಿತ್ರ : ನಂದಿ ಮಂಟಪದ ಮೂಲಕ ಹಾದುಹೋಗುವ ಮುಖ್ಯದ್ವಾರ

ಡಂಬಳಕ್ಕೆ ಕಲಶಪ್ರಾಯವಾಗಿ ಇಂದಿಗೂ ನಿಂತಿರುವುದು ದೊಡ್ಡಬಸಪ್ಪ ದೇವಾಲಯ. ದೇವಸ್ಥಾನವು ಆಲಯದ ಹೊರಗಿರುವ ದೊಡ್ಡ ನಂದಿಯಿಂದಾಗಿ ಹೆಸರುವಾಸಿಯಾಗಿದ್ದರೂ ಮೂಲತಃ ಅದೊಂದು ಶಿವ ದೇವಾಲಯ. ತ್ರಿಭುವನಮಲ್ಲನೆಂದು ಖ್ಯಾತಿ ಗಳಿಸಿದ್ದ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯ ಕಾಲದಲ್ಲಿ ಸೇನಾನಾಯಕನಾಗಿರಬಹುದಾದ ರೆಬ್ಬರಸ ಮತ್ತು ಬಾವಿಕಬ್ಬೆಯರ ಮಗ ಅಜ್ಜಯ ದೇವಾಲಯವನ್ನು ಕಟ್ಟಿಸಿರುವ ಉಲ್ಲೇಖ 1125 ಶಾಸನವೊಂದರಲ್ಲಿದೆ. ಕಾರಣದಿಂದಲೇ ಇರಬಹುದು, ದೇಗುಲದ ಶಿವಲಿಂಗಕ್ಕೆ "ಅಜ್ಜಮೇಶ್ವರ"ನೆಂದೇ ಹಿಂದೆ ಹೆಸರಾಗಿತ್ತು. ಹದಿನಾರು ಜನ ಶ್ರೇಷ್ಠಿಗಳು, ಮಾಸವಾಡಿನಾಡಿನ ಅರಸರು, ಮತ್ತಿತರರು ಹೇರಳವಾಗಿ ದತ್ತಿ ನೀಡಿರುವುದೂ ಶಾಸನದಲ್ಲಿ ದಾಖಲಾಗಿದೆ. ದೇವಾಲಯವು ಕಲ್ಯಾಣಿ ಚಾಲುಕ್ಯರ ಕಾಲದ ಉಳಿದ ದೇಗುಲಗಳಂತೆ ಮುಖಮಂಟಪ, ಒಂದು ವಿಶಾಲವಾದ ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿದ್ದು, ಅಂತರಾಳದ ಮೇಲೆ ಶುಕನಾಸಿಕ ಮತ್ತು ಗರ್ಭಗುಡಿಯ ಮೇಲೆ ಬಹುಚಿತ್ರಿತ ಶಿಖರವನ್ನು ಹೊಂದಿದೆ. ದೇಗುಲಕ್ಕೆ ಎರಡು ದ್ವಾರಗಳಿದ್ದು, ಒಂದು ಪೂರ್ವಕ್ಕೆ ಮತ್ತು ಇನ್ನೊಂದು ದಕ್ಷಿಣಕ್ಕೆ ತೆರೆದುಕೊಂಡಿವೆ. ಒಳಗಿರುವ ಶಿವಲಿಂಗ ಸುಮಾರು ಐದು ಅಡಿ ಎತ್ತರವಿದೆ. ಮುಖಮಂಟಪದೆದುರಿನ ಬಾಗಿಲಿನಿಂದಾಚೆಗೆ ಮತ್ತೊಂದು ಮಂಟಪದಡಿಯಲ್ಲಿ ಬೃಹತ್ ಗಾತ್ರದ ನಂದಿಯ ವಿಗ್ರಹವಿದೆ. ಎರಡೂ ದ್ವಾರಗಳ ಪರಿಧಿಯಲ್ಲಿ ಚಾಲುಕ್ಯ ವಾಸ್ತುಶಿಲ್ಪ ರೀತಿಯಲ್ಲಿ ಏಳು ತೋಳುಗಳ ಸುಂದರ ವಿನ್ಯಾಸಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ನವರಂಗದೊಳಗಿನ ಕಂಬಗಳೂ ಉತ್ತಮ ಕೆತ್ತನೆಗಳನ್ನು ಹೊಂದಿವೆ.

ಚಿತ್ರ ೩: ತನ್ನದೇ ಮಂಟಪದೊಳಗೆ ರಾರಾಜಿಸುತ್ತಿರುವ ನಂದಿ - "ದೊಡ್ಡ ಬಸಪ್ಪ"

ಕರ್ನಾಟಕದ ಐತಿಹಾಸಿಕ ಶಿವ ದೇವಾಲಯಗಳಲ್ಲಿ ಮುದ್ದಾದ ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಅಲಂಕೃತವಾದ ನಂದಿಯ ವಿಗ್ರಹಗಳನ್ನು ಕಾಣುವುದು ಬಹಳ ಸಾಮಾನ್ಯ. ಮನಸೂರೆಗೊಳ್ಳುವ ಬೃಹದ್ಗಾತ್ರದ ನಂದಿಗಳನ್ನೂ ಸಹ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ, ತುರುವೇಕೆರೆಯ ಗಂಗಾಧರೇಶ್ವರ ದೇವಾಲಯದಲ್ಲಿ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ, ಮತ್ತಿತರ ಸ್ಥಳಗಳಲ್ಲಿ ಕಾಣಬಹುದು. ಸಾಲಿಗೆ ಸೇರುವ, ಅಷ್ಟೇ ಸೌಂದರ್ಯವುಳ್ಳ ನಂದಿಯನ್ನು ಡಂಬಳದ ದೊಡ್ಡಬಸಪ್ಪ ದೇಗುಲದಲ್ಲಿ ಕಾಣಬಹುದು. ಇವನು ನಿಜವಾಗಿಯೂ "ದೊಡ್ಡ ಬಸಪ್ಪ"ನೇ. ಅಜ್ಜಮೇಶ್ವರ ಶಿವ ದೇವಾಲಯದ ಹೆಸರನ್ನೇ ತನ್ನ ಖ್ಯಾತಿಯಿಂದಾಗಿ ಬದಲಾಯಿಸಿಬಿಡುವಷ್ಟು ಗಾತ್ರ ಅವನದ್ದು.

ಇನ್ನು ದೇವಾಲಯದ ಶಿಖರದ ವಿಚಾರಕ್ಕೆ ಬಂದರೆ, ಅದರ ವಿನ್ಯಾಸದಲ್ಲಿ ಶಿಲ್ಪಿಗಳು ತೋರಿರುವ ಪ್ರಾವೀಣ್ಯತೆಯನ್ನು ನೋಡಿಯೇ ಸವಿಯಬೇಕು. ಸಾಮಾನ್ಯವಾಗಿ ಎಂಟು, ಹನ್ನೆರಡು, ಅಥವಾ ಹದಿನಾರು ಮೂಲೆಗಳನ್ನೊಳಗೊಂಡ ನಿರಂತರವಲ್ಲದ ಶಿಖರಗಳನ್ನು ಚಾಲುಕ್ಯ ಮತ್ತು ಹೊಯ್ಸಳ ದೇಗುಲಗಳಲ್ಲಿ ನಾವು ನೋಡಬಹುದು. ಆದರೆ ದೊಡ್ಡಬಸಪ್ಪ ದೇವಾಲಯ 24 ಮೂಲೆಗಳುಳ್ಳ ಶಿಖರವನ್ನು ಹೊಂದಿರುವ ಅಪರೂಪದ ಕೆತ್ತನೆ. ಹೆಚ್ಚು ಮೂಲೆಗಳಿಂದಾಗಿ ದೇಗುಲದ ಶಿಖರ ಬಹುಮಟ್ಟಿಗೆ ವೃತ್ತಾಕಾರದ ತಳವನ್ನು ಹೊಂದಿರುವ ಶಂಕುವಿನಂತೆ ತೋರುತ್ತದೆ. ಕನ್ನಡಿಗಳನ್ನು ನಿರ್ದಿಷ್ಟ ಕೋನಗಳಿಗೆ ಜೋಡಿಸಿ ಚಿತ್ರವಿಚಿತ್ರವಾದ ನಮೂನೆಗಳನ್ನು ಸೃಷ್ಟಿಸುವ ಕಲೈಡೋಸ್ಕೋಪ್  ರೀತಿಯಲ್ಲಿ ದೇಗುಲದ ಶಿಖರದ ಅನುರೂಪತೆ ಯಾತ್ರಿಕರನ್ನು ಹುಬ್ಬೇರಿಸುವಂತೆ ಮಾಡುತ್ತದೆ. 

ಚಿತ್ರ : ದೊಡ್ಡಬಸಪ್ಪ ದೇವಾಲಯದ ಸೂಕ್ಷ್ಮ ಕೆತ್ತನೆಗಳುಳ್ಳ ಶಿಖರ

ದೇವಾಲಯದ ಹೊರಗಣ ಭಿತ್ತಿ ಮತ್ತು ಶಿಖರಗಳಲ್ಲಿನ ಸೂಕ್ಷ್ಮ ಮತ್ತು ಸುಂದರ ಕೆತ್ತನೆಗಳು, ಮತ್ತು ಅವುಗಳಲ್ಲಿ ಅಡಕವಾಗಿರುವ ಜ್ಯಾಮಿತೀಯ ಅನುರೂಪತೆ ಮತ್ತು ಪರಿಪೂರ್ಣತೆಗಳು ನೋಡುಗರ ಕಣ್ಮನ ಸೆಳೆಯುವುದರಲ್ಲಿ ಸಂದೇಹವಿಲ್ಲ. ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪ ಪದ್ಧತಿಯಲ್ಲಿ ಕಟ್ಟಿದ ದೇಗುಲಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವೈಶಿಷ್ಟ್ಯವೆಂದರೆ ಆಲಯದ ಹೊರಭಿತ್ತಿಗಳ ಮೇಲೆ ಸಾಲಾಗಿ ಕಾಣಸಿಗುವ ಸೂಕ್ಷ್ಮವಾದ ಕೀರ್ತಿಮುಖಗಳ ಮತ್ತು ಚಿಕಣಿ ಶಿಖರಗಳ ಕೆತ್ತನೆಗಳು. ಸಾಮಾನ್ಯವಾಗಿ ಇವು ಇತರ ಕೆತ್ತನೆಗಳಿಲ್ಲದ ಹೊರಗೋಡೆಗಳನ್ನು ಸೊಗಸಾಗಿ ಆವರಿಸಿ ಖಾಲಿ ಜಾಗಗಳು ಮತ್ತು ಕೆತ್ತನೆಗಳ ನಡುವೆ ಸಮತೋಲನವನ್ನು ಕಾಯ್ದುಕೊಂಡು ಇಡೀ ದೇವಾಲಯದ ಹೊರಗಿನ ಅಂದವನ್ನು ಹೆಚ್ಚಿಸುತ್ತವೆ. ಡಂಬಳದ ದೊಡ್ಡಬಸಪ್ಪ ದೇವಸ್ಥಾನದಲ್ಲಿ ಶಿಲ್ಪಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕೀರ್ತಿಮುಖ ಮತ್ತು ಚಿಕಣಿ ಶಿಖರಗಳ ಆಸುಪಾಸಿನ ಸಣ್ಣ ಕೆತ್ತನೆಗಳಲ್ಲಿ ಸಂಗೀತ ಮತ್ತು ನೃತ್ಯನಿರತರಾದ ಯಕ್ಷ ಯಕ್ಷಿಯರು, ಆನೆಗಳನ್ನೇರಿ ಯುದ್ಧನಿರತರಾದ ಸೇನೆಯ ವೀರರು ಮತ್ತು ಮದಗಜಗಳನ್ನು ಪಳಗಿಸಿ ಜಯಭೇರಿ ಬಾರಿಸುತ್ತಿರುವ ಸಿಂಹಗಳನ್ನು ಚಿತ್ರಿಸಿದ್ದಾರೆ. ಅವುಗಳ ನಡುವೆ ಒಂದೇ ಆನೆಯನ್ನು ನೆಲಕ್ಕುರುಳಿಸಲು ಮೂರು ಸಿಂಹಗಳು ಅದರ ಮೇಲೆ ಹಲ್ಲೆ ನಡೆಸಿರುವ ಚಿಕ್ಕ ಭಿತ್ತಿಶಿಲ್ಪ ಹೆಚ್ಚು ಕಡೆ ಕಾಣಸಿಗದ ಅಪರೂಪದ ಆಕೃತಿ. ಇವರ ಅಪೂರ್ವವೆನಿಸುವ ಪ್ರಯತ್ನಗಳೇ ಮುಂದೆ ಹೊಯ್ಸಳ ವಾಸ್ತುಶಿಲ್ಪ ಪದ್ಧತಿಯಲ್ಲಿ ಹೊರಗೋಡೆಗಳ ಮೇಲೆ ದೇವದೇವತೆಗಳ ಸಂಪೂರ್ಣ ಶಿಲ್ಪಗಳನ್ನು, ಪುರಾಣದ ಕಥೆಗಳನ್ನು, ಪದಾತಿ, ಕುದುರೆ ಮತ್ತು ಗಜಸೇನೆಗಳನ್ನು ಬಿಂಬಿಸಿ ಕಲೋಪಾಸಕರನ್ನು ಮತ್ತೊಂದು ಲೋಕಕ್ಕೇ ಕೊಂಡೊಯ್ಯುವ ನೈಪುಣ್ಯತೆಗೆ ತಳಹದಿ ಹಾಕಿಕೊಟ್ಟಿದ್ದರೆ ಆಶ್ಚರ್ಯವಿಲ್ಲ.


ಚಿತ್ರ : ನಕ್ಷತ್ರಾಕಾರ ಹೊರಭಿತ್ತಿ ಮತ್ತು ಕೀರ್ತಿಮುಖ, ಚಿಕಣಿ ಶಿಖರ ಕೆತ್ತನೆಗಳು

ದೊಡ್ಡಬಸಪ್ಪ ದೇವಾಲಯದ ತಳಹದಿಯೂ ಸಹ ಮುಂದೆ ಹೊಯ್ಸಳರ ಕಾಲದಲ್ಲಿ ಪ್ರಾಮುಖ್ಯತೆ ಪಡೆದ ನಕ್ಷತ್ರಾಕಾರದ ಅಡಿಪಾಯದ ವಿನ್ಯಾಸವನ್ನು ಹೊಂದಿರುವುದು ಕುತೂಹಲಕರ. ಹೊಯ್ಸಳರ ಬೇಲೂರು, ಹಳೇಬೀಡು, ಸೋಮನಾಥಪುರ ಮತ್ತಿತರ ದೇವಾಲಯಗಳಂತೆ ಪ್ರದಕ್ಷಿಣ ಪಥವಾಗುವಷ್ಟು ಅಗಲವಾದ ತಳಹದಿಯಿಲ್ಲದಿದ್ದರೂ ನಕ್ಷತ್ರಾಕಾರ ಮಾತ್ರ ಇಡೀ ದೇವಸ್ಥಾನವನ್ನು ಆವರಿಸಿಕೊಂಡಿದೆ. ಕಲ್ಯಾಣಿ ಚಾಲುಕ್ಯ ಶೈಲಿಯಿಂದ ಹೊಯ್ಸಳ ಶೈಲಿಗೆ ಕೈ ದಾಟಿಸುವ ಹೊಣೆಯನ್ನು ಬಳ್ಳಿಗಾವೆಯ ದೇವಾಲಯಗಳೊಂದಿಗೆ ತಾನೂ ಸಮಪ್ರಮಾಣದಲ್ಲಿ ಹೊತ್ತಿದ್ದನ್ನು ಜಗತ್ತಿಗೆ ತಿಳಿಯಪಡಿಸಲೋ ಎಂಬಂತೆ ಡಂಬಳದ ದೊಡ್ಡಬಸಪ್ಪ ದೇವಾಲಯ ಹಳ್ಳಿಯ ನಡುವೆ ಇಂದಿಗೂ ತನ್ನದೇ ಆದ ವಿಶಿಷ್ಟ ವಾಸ್ತುಶಿಲ್ಪದೊಂದಿಗೆ ರಾರಾಜಿಸುತ್ತಿದೆ.

ಚಿತ್ರ : ಸಂಗೀತ - ನೃತ್ಯ ನಿರತರಾದ ಯಕ್ಷ ಯಕ್ಷಿಯರು


ಚಿತ್ರ : ಆನೆಯ ಮೇಲೆ ದಾಳಿ ನಡೆಸಿರುವ ಮೂರು ಸಿಂಹಗಳು

ದೊಡ್ಡಬಸಪ್ಪ ದೇವಾಲಯದ ಹಿಂಭಾಗಕ್ಕೆ ಇದಕ್ಕಿಂತ ಹಳೆಯದಾಗಿ ತೋರುವ ಕದಂಬ ಶೈಲಿಯ ಮತ್ತು ಜಿನಾಲಯಗಳ ವಿನ್ಯಾಸವನ್ನು ಹೋಲುವ ಇನ್ನೊಂದು ಕಲ್ಲಿನ ಕಟ್ಟಡವಿದೆ. ಇದು ಹಿಂದೆ ಮೈಳಬೇಶ್ವರನೆಂದು ಹೆಸರಾಗಿದ್ದ  ಸೋಮೇಶ್ವರ ಶಿವ ದೇವಾಲಯ. ದೇಗುಲವು ಮಂಟಪ, ಅಂತರಾಳ ಮತ್ತು ಗರ್ಭಗೃಹಗಳನ್ನು ಹೊಂದಿದ್ದು ಅಂತರಾಳದ ಬಾಗಿಲಿನ ಎರಡೂ ಕಡೆಗಳಲ್ಲಿ ಕಲ್ಲಿನಲ್ಲಿ ಕೊರೆದು ಮಾಡಿರುವ ಸಣ್ಣ ಸುಂದರ ಜಾಲಂಧ್ರಗಳಿವೆ. ಶಿಖರವಿಲ್ಲದಿದ್ದರೂ ತನ್ನ ಶ್ರೇಷ್ಠತೆಯನ್ನು ಸಾರುವ ಸಾಲಿಗೆ ಸೇರುವ ದೇಗುಲಕ್ಕೆ ದೊಡ್ಡಬಸಪ್ಪನಿಗೆ ಸಿಕ್ಕಿರುವಷ್ಟು ಪಾಲನೆ, ಪೋಷಣೆ ಸಿಕ್ಕಿರುವಂತಿಲ್ಲ.

ಚಿತ್ರ : ಡಂಬಳದ ಸೋಮೇಶ್ವರ ದೇವಾಲಯ

ಸೋಮೇಶ್ವರ ದೇವಾಲಯದಿಂದ ತೋಟಗಳ ನಡುವೆ ತುಸು ದೂರ ಸಾಗಿದರೆ ಜೀರ್ಣಾವಸ್ಥೆಯಲ್ಲಿ ಉಳಿದಿರುವ ಮತ್ತೊಂದು ಶಿವ ದೇವಾಲಯ ಕಾಣಸಿಗುತ್ತದೆ. ಅದರ ಬಾಗಿಲುವಾಡದ ಸುತ್ತ ಇರುವ ತೋಳುಗಳ ಕೆತ್ತನೆಗಳನ್ನು ನೋಡಿದರೆ ದೇವಾಲಯವೂ ಕಲ್ಯಾಣಿ ಚಾಲುಕ್ಯರ ಕಾಲದ್ದೆಂದು ನಿರ್ಧರಿಸುವುದು ಕಷ್ಟವಾಗುವುದಿಲ್ಲ. ಇದನ್ನು ಶಾಸನಗಳಲ್ಲಿ ಮತ್ತು ದಿನಬಳಕೆಯಲ್ಲಿ ಕಲ್ಮೇಶ್ವರ ಅಥವಾ ಸಿದ್ದೇಶ್ವರ ದೇವಾಲಯವೆಂದು ಉಲ್ಲೇಖಿಸಿರುವುದುಂಟು. ದೇಗುಲದ ಗರ್ಭಗುಡಿ ಮತ್ತು ಶಿವಲಿಂಗ ಮಾತ್ರ ಉಳಿದಿದ್ದು, ಇನ್ನಿತರ ವಿವರಗಳು ಕಾಣಸಿಗುವುದಿಲ್ಲ. ಆದರೆ ಆಲಯದ ಹತ್ತಿರ ಹೋದಾಗ ಅದರ ಎದುರಿಗಿರುವ ಅಗಲವಾದ ಕಲ್ಲಿನ ಬಾವಿ ಪ್ರವಾಸಿಗರ ಗಮನವನ್ನು ತನ್ನತ್ತ ಸೆಳೆದುಕೊಳ್ಳುವುದು ಸಹಜ. ಸೌಂದರ್ಯದ ಖನಿಯಾಗಿರುವ ಬಾವಿಯನ್ನು ಸ್ಥಳೀಯರು "ಜಪದ ಬಾವಿ" ಎಂದು ಕರೆಯುತ್ತಾರೆ.

ಚಿತ್ರ : ಚಿಕ್ಕ ಮನೋಹರ ಮಂಟಪಗಳನ್ನೊಳಗೊಂಡ ಜಪದ ಬಾವಿ

ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪದ ಪ್ರಮುಖ ವೈಶಿಷ್ಟ್ಯಗಳಲ್ಲೊಂದು ಕೆಲವೆಡೆ ದೇವಾಲಯಗಳ ಹತ್ತಿರ ಅವರು ಕಟ್ಟಿಸಿರುವ ದೊಡ್ಡ ಸೋಪಾನದ ಬಾವಿಗಳು. ಇವುಗಳನ್ನು ಗುಜರಾತ್, ಮಹಾರಾಷ್ಟ್ರಗಳಲ್ಲಷ್ಟೇ ಅಲ್ಲದೆ ಉತ್ತರ ಕರ್ನಾಟಕದಲ್ಲಿಯೂ ಲಕ್ಕುಂಡಿಯ ಮಾಣಿಕೇಶ್ವರ ದೇವಾಲಯದ ಹತ್ತಿರವಿರುವ ಮುಸುಕಿನ ಬಾವಿಯ ವೈಭವದಲ್ಲಿ ಕಾಣಬಹುದು. ಇದೇ ಪಟ್ಟಿಗೆ ಸೇರ್ಪಡೆಯಾಗುವ ಅರ್ಹತೆ ಹೊಂದಿರುವ ಸುಂದರ ಮತ್ತು ಸರಳ ಕಟ್ಟಡ ಡಂಬಳದ ಜಪದ ಬಾವಿ. ಅಧ್ಯಯನಗಳ ಪ್ರಕಾರ 32 ಅಡಿ ಅಗಲ, 76 ಅಡಿ ಉದ್ದ ಮತ್ತು 24 ಅಡಿ ಆಳವಿರುವ ಬಾವಿಯನ್ನು ಪ್ರವೇಶಿಸಲು ಮೆಟ್ಟಿಲುಗಳನ್ನು ಪೂರ್ವ ದಿಕ್ಕಿನಿಂದ ನಿರ್ಮಿಸಲಾಗಿದೆ. ಬಾವಿಯ ಒಳಭಾಗದಲ್ಲಿ ಸುತ್ತಲೂ ಅಂದವಾಗಿ ಕೊರೆದಿರುವ ಗೂಡುಗಳಿದ್ದು ಇವುಗಳನ್ನು ಜಪಮಂಟಪಗಳೆಂದು ಪರಿಗಣಿಸಲಾಗಿದೆ. ಶೈವ ಮುನಿಗಳು ಬೆಳಗಿನ ಜಾವ ಬಾವಿಯ ನೀರಿನಲ್ಲಿ ಮಿಂದು ಜಪತಪಗಳನ್ನಾಚರಿಸಲು ಮಂಟಪಗಳನ್ನು ಉಪಯೋಗಿಸಿರಬಹುದೆಂದೂ, ಕಾರಣದಿಂದಲೇ ಬಾವಿಗೆ "ಜಪದ ಬಾವಿ" ಎಂಬ ಹೆಸರು ಬಂದಿರಬಹುದೆಂದೂ ಊಹಿಸಲು ಕಷ್ಟವಾಗುವುದಿಲ್ಲ.


ಚಿತ್ರ ೧೦: ಜಪದ ಬಾವಿಯ ಮತ್ತೊಂದು ನೋಟ

ಹೀಗೆ ಹಲವಾರು ಚಾರಿತ್ರಿಕ ಮತ್ತು ಕಲಾತ್ಮಕ ಸ್ಮಾರಕಗಳನ್ನು ತನ್ನಲ್ಲೇ ಹುದುಗಿಸಿಟ್ಟುಕೊಂಡರೂ ಎಂದಿನಂತೆ ಸಾಮಾನ್ಯವಾಗಿ ದಿನಗಳನ್ನು ದೂಡುತ್ತಿರುವ ಡಂಬಳದಂತಹ ನಿಶ್ಶಬ್ದವಾದ ಹಳ್ಳಿಗೆ ಒಮ್ಮೆ ಹೋದವರಿಗೆ ಅಲ್ಲಿಗೆ ಮತ್ತೆ ಮತ್ತೆ ಹೋಗಬೇಕೆನಿಸುವ ಹಂಬಲ ಹತ್ತಿದರೆ ಆಶ್ಚರ್ಯವಿಲ್ಲ.

Comments