ನಾಶಿಕ್ - ಇತಿಹಾಸ, ಪುರಾಣ ಮತ್ತು ವಾಸ್ತುಶಿಲ್ಪ

2015 ಜುಲೈ ತಿಂಗಳು ಬಂತೆಂದರೆ ಭಾರತದ ನಾಲ್ಕು ಪವಿತ್ರ ಯಾತ್ರಾಸ್ಥಳಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮಹಾರಾಷ್ಟ್ರದ ನಾಶಿಕ್‍ನಲ್ಲಿ ಮತ್ತೆ ಮೇಳೈಸುತ್ತದೆ. ಒಂದು ವರ್ಷಕ್ಕೂ ಮೇಲ್ಪಟ್ಟು, ಅಂದರೆ ೨೦೧೬ರ ಆಗಸ್ಟ್ ತಿಂಗಳವರೆಗೂ ಶಾಹಿ ಸ್ನಾನಗಳು, ಪವಿತ್ರ ಪೂಜೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಂದೇ ನಗರವು ಜನವರಿಯಿಂದಲೇ ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ ಎಂಬುದು ನಾಶಿಕ್‍ಗೆ ಈಚೆಗೆ ಭೇಟಿ ಕೊಟ್ಟ ಎಲ್ಲರಿಗೂ ಸುಲಭದಲ್ಲಿ ವೇದ್ಯವಾಗುತ್ತದೆ. ನಗರದೊಳಗಿನ ಮತ್ತು ರಾಜ್ಯದ ಇತರ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣ ಒಂದೆಡೆ ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಬರುವ ಭಕ್ತಾದಿಗಳ ವಾಸ್ತವ್ಯಕ್ಕಾಗಿ ನಗರದುದ್ದಗಲಕ್ಕೂ ಮತ್ತು ನಾಶಿಕದಿಂದ ತ್ರ್ಯಂಬಕೇಶ್ವರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ವಸತಿಗೃಹಗಳ ಮತ್ತು ಧರ್ಮಛತ್ರಗಳ ಸಮುಚ್ಚಯಗಳ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆದಿದೆ.

ಮಹಾಕುಂಭಮೇಳ ನಡೆಯುವ ಇತರ ಮೂರು ಸ್ಥಳಗಳಾದ ಹರಿದ್ವಾರ, ಪ್ರಯಾಗ ಮತ್ತು ಉಜ್ಜೈನಿಗಳಿಗೆ ಹೋಲಿಸಿದರೆ ದಕ್ಷಿಣ ಭಾರತೀಯರಿಗೆ ಇದ್ದುದರಲ್ಲಿ ಹತ್ತಿರವಾಗಿರುವ ನಾಶಿಕ್‍ಗೆ ರಸ್ತೆ ಮತ್ತು ರೈಲು ಸಂಪರ್ಕಗಳೆರಡೂ ಸಮರ್ಪಕವಾಗಿದ್ದು, ಕುಂಭಮೇಳವನ್ನು ನೋಡಿ ಕಣ್ತುಂಬಿಕೊಳ್ಳುವ ಮತ್ತು ಭಾಗವಹಿಸಿ ಪುನೀತರಾಗುವ ಆಸೆಯಿದ್ದವರಿಗೆ ಮುಂದಿನ ಒಂದು ವರ್ಷ ಪ್ರವಾಸೀ ತಾಣವಾಗಿ ಆಕರ್ಷಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಐತಿಹಾಸಿಕವಾಗಿ, ಪೌರಾಣಿಕವಾಗಿ ಮತ್ತು ವಾಸ್ತುಶಿಲ್ಪಕ್ಕಾಗಿ ಹೆಸರು ಮಾಡಿರುವ ಈ ನಗರದ ಮತ್ತು ಅದರ ಸುತ್ತಮುತ್ತಲಿನ ಪ್ರಮುಖ ಆಕರ್ಷಣೆಗಳತ್ತ ಒಂದು ಪಕ್ಷಿನೋಟ ಈ ಲೇಖನ.

ಪೌರಾಣಿಕ ಹಿನ್ನೆಲೆ

ನಾಸಿಕ್ (ಅಥವಾ ಮಹಾರಾಷ್ಟ್ರದವರು ಕರೆಯುವಂತೆ ನಾಶಿಕ್) ನಗರಕ್ಕೆ ರಾಮಾಯಣ ಕಾಲದ ಉಲ್ಲೇಖವಿದೆ. ಸಂಸ್ಕೃತದಲ್ಲಿ ನಾಸಿಕವೆಂದರೆ ಮೂಗು. ರಾವಣನ ತಂಗಿ ಶೂರ್ಪನಖಿಯು ರಾಮನನ್ನು ಬಯಸಿ ಬಂದ ಕಥೆ ಎಲ್ಲರಿಗೂ ತಿಳಿದದ್ದೇ. ರಾಮನು ತನಗೆ ಮದುವೆಯಾಗಿದೆಯೆಂದೂ ತನ್ನ ತಮ್ಮ ಲಕ್ಷ್ಮಣನನ್ನು ವಿಚಾರಿಸಬೇಕೆಂದೂ ಅವಳನ್ನು ಕಳಿಸಿದಾಗ ಲಕ್ಷ್ಮಣನು ಅವಳು ರಾಕ್ಷಸಿಯೆಂದರಿತು ಅವಳ ಮೂಗು ಕತ್ತರಿಸಿ ಕಳುಹಿಸಿದ್ದು ಇದೇ ಜಾಗದಲ್ಲಿ ಎಂದು ಪ್ರತೀತಿ. ಆದ್ದರಿಂದಲೇ ನಾಸಿಕ್ ಎಂಬ ಹೆಸರು. ಆ ಕಾಲಕ್ಕೆ ಇದು ದಂಡಕಾರಣ್ಯವೆಂಬ ಹೆಸರಿನ ದಟ್ಟವಾದ ಅಡವಿ. ರಾಮ, ಸೀತೆ, ಲಕ್ಷ್ಮಣರು ವನವಾಸದಲ್ಲಿದ್ದಾಗ ಹೆಚ್ಚು ಕಾಲ ಕಳೆದ ಪಂಚವಟಿ ಇದೇ ಅರಣ್ಯದೊಳಗೆ ಐದು ಬೃಹತ್ ವಟವೃಕ್ಷಗಳು ಇದ್ದ ಸ್ಥಳ. ಈ ಪಂಚವಟಿ ಇಂದು ನಾಶಿಕ್ ನಗರದ ಒಂದು ಭಾಗ. ನಗರದ ನಡುವೆಯೇ ಠೀವಿಯಿಂದ ಹರಿಯುವ ಗೋದಾವರಿ ನದಿ ಪಂಚವಟಿ ಪ್ರದೇಶವನ್ನು ನಾಶಿಕ್‍ನ ಇತರ ಭಾಗಗಳಿಂದ ಬೇರ್ಪಡಿಸುತ್ತದೆ.

ಗೋದಾವರಿ ಘಟ್ಟಗಳು ಮತ್ತು ಸುತ್ತಲಿನ ಐತಿಹಾಸಿಕ ದೇಗುಲಗಳು

ಚಿತ್ರ ೧: ಒಂದು ಶಾಂತ ಸಂಜೆಯಲ್ಲಿ ರಾಮಕುಂಡದ ಗೋದಾವರಿ ಸ್ನಾನಘಟ್ಟಗಳು

ಪವಿತ್ರ ಗೋದಾವರಿ ನದಿಯ ನೀರಿನಲ್ಲಿ ಮಿಂದು ಪುನೀತರಾಗಲು ನಾಶಿಕ್ ನಗರದ ಹೃದಯ ಭಾಗದಲ್ಲಿ ಕಟ್ಟಿಸಿರುವ ಬಹಳ ವರ್ಷಗಳಷ್ಟು ಹಳೆಯದಾದ ಸ್ನಾನ ಘಟ್ಟಗಳಿಗೆ ರಾಮಕುಂಡ ಎಂದು ಹೆಸರು. ಹರಿದ್ವಾರದ ಹರ್ ಕೀ ಪೌಳಿಯಷ್ಟೇನೂ ದೊಡ್ಡದಲ್ಲದಿದ್ದರೂ ನಿಧಾನಗತಿಯಲ್ಲಿ ಹರಿಯುವ ನದಿಯ ಎರಡೂ ಕಡೆಗಳಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಲಭ್ಯವಿವೆ ಈ ಪೌಳಿಗಳು. ರಾಮಕುಂಡದ ಸುತ್ತಲೂ ಹೆಜ್ಜೆಗೊಂದರಂತೆ ಚಿಕ್ಕ ಚಿಕ್ಕ ದೇಗುಲಗಳು, ದೇವತಾಮೂರ್ತಿಗಳಿದ್ದರೂ ಐತಿಹಾಸಿಕವಾಗಿ ಮತ್ತು ವಾಸ್ತುಶಿಲ್ಪದ ದೃಷ್ಟಿಕೋನದಿಂದ ಯಾತ್ರಿಕರ ಕಣ್ಮನ ಸೆಳೆಯುವ ಕೆಲವು ದೇವಾಲಯಗಳು ಎದ್ದು ಕಾಣುವುದು ಸಹಜ. ಇವುಗಳಲ್ಲಿ ಹಲವು ೧೭ನೇ ಶತಮಾನದ ಕೊನೆಯಲ್ಲಿ ಮತ್ತು ೧೮ನೇ ಶತಮಾನದ ಮೊದಲಾರ್ಧ ಭಾಗದಲ್ಲಿ ಕಟ್ಟಿಸಿರುವಂತಹವು.

ಗೋಮುಖದಿಂದ ಗೋದಾವರಿ ನದಿಯ ನೀರು ಸುರಿಯುವಂತಿರುವ ರಚನೆಯ ಎದುರಾಗಿ ನಿಂತಿರುವ ಶಿವನ ದೇಗುಲವನ್ನು ಸ್ಥಳೀಯರು ಗೋರಾನಂದಿ ದೇವಾಲಯವೆಂದು ಕರೆಯುತ್ತಾರೆ. ಶಿವಲಿಂಗದ ಎದುರಿಗೆ ದೇವಾಲಯದ ಹೊರಗಿರುವ ನಂದಿಯ ಶಿಲ್ಪ ಅಮೃತಶಿಲೆಯಿಂದ ಕೆತ್ತಲ್ಪಟ್ಟಿದ್ದು ಬಿಳಿಯ (ಗೋರಾ) ಬಣ್ಣಕ್ಕಿದೆ. ಇದು ನಾಶಿಕ್ ನಗರವು ೧೮ನೇ ಶತಮಾನದ ಆರಂಭದಲ್ಲಿ ಇಂದೂರಿನ ಹೋಳ್ಕರ್ ರಾಜಮನೆತನಕ್ಕೆ ಸೇರಿದ್ದ ಸಂದರ್ಭದಲ್ಲಿ ಅವರು ಕಟ್ಟಿಸಿದ ಮಂದಿರ.

ಚಿತ್ರ ೨: ರಾಮಕುಂಡದ ಗೋರಾನಂದಿ ಮಂದಿರ

ಈ ದೇವಾಲಯವೇ ಆಗಲಿ, ಆ ಕಾಲದಲ್ಲಿ ಪೇಶ್ವೆ ಮನೆತನದವರು ಕಟ್ಟಿಸಿದ ದೇಗುಲಗಳೇ ಆಗಲಿ, ವಾಸ್ತುಶಿಲ್ಪದ ವಿಚಾರ ಬಂದಾಗ ಒಂದು ನಿರ್ದಿಷ್ಟ ವಿನ್ಯಾಸವನ್ನು ಹೋಲುತ್ತವೆ. ಈ ಎಲ್ಲವೂ ಒಂದರ ಹಿಂದೊಂದು ಬರುವಂತೆ ಮೂರು ಶಿಖರಗಳನ್ನೊಳಗೊಂಡ ರಚನೆಗಳಾಗಿದ್ದು, ಕಲ್ಲಿನ ಕಟ್ಟಡಗಳಾಗಿರುತ್ತವೆ. ಮುಂದಿನ ಶಿಖರವು ಸಾಮಾನ್ಯವಾಗಿ ಹೊರಚಾಚಿದ ಕಂಬಗಳ ಮೇಲಿನದಾಗಿದ್ದು ಗುಂಬಜ್‍ನಂತಿರುವುದು ಅಥವಾ ಕಡಿಮೆ ಎತ್ತರದ್ದಾಗಿರುವುದು ಸಾಮಾನ್ಯ. ಮಧ್ಯದ ಶಿಖರವು ಮೂರರಲ್ಲಿ ಅತ್ಯಂತ ಅಗಲವಾಗಿದ್ದು ಗಹನವಾದ ಸೂಕ್ಷ್ಮ ಕೆತ್ತನೆಗಳಿಂದ ಗಮನ ಸೆಳೆಯುವಂತಿರುತ್ತದೆ. ಇದು ದೇಗುಲದ ನವರಂಗದ ಮೇಲೆ ರಚಿತವಾದ ಶಿಖರ. ಅತ್ಯಂತ ಹಿಂದಿನ ಶಿಖರವು ಗರ್ಭಗುಡಿಯ ಮೇಲೆ ಕಟ್ಟಿರುವ ಬಂಧವಾಗಿದ್ದು, ಎತ್ತರವಾಗಿಯೂ, ಸುಂದರವಾಗಿಯೂ ನಾಗರ ಶೈಲಿಯಲ್ಲಿ ಕೆತ್ತಿದ ರಚನೆಯಾಗಿರುತ್ತದೆ. ಈ ರೀತಿಯ ವಾಸ್ತುಶಿಲ್ಪವನ್ನು ಪೇಶ್ವೆಗಳು ಮತ್ತು ಹೋಳ್ಕರ್ ಮನೆತನದವರು ಹಲವು ಕಡೆ ಬಳಸಿರುವುದು ಗಮನಕ್ಕೆ ಬರುತ್ತದೆ.

ಇಡೀ ರಾಮಕುಂಡದಲ್ಲೇ ಅತ್ಯಂತ ಮನೋಹರವಾದ ನರೋಶಂಕರ ಶಿವ ದೇವಾಲಯ ಗೋರಾನಂದಿ ದೇವಾಲಯದ ಎಡಕ್ಕೆ ಅನತಿ ದೂರದಲ್ಲಿ ಕಾಣುತ್ತದೆ. ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಹೋಲುವಂತೆ ಮೂರ್ನಾಲ್ಕು ಅಡಿ ಎತ್ತರದ ಜಗಲಿಯ ಮೇಲೆ ಕಟ್ಟಲ್ಪಟ್ಟಿರುವ ಈ ದೇಗುಲದ ಮೂಲ ದೇವರು ರಾಮೇಶ್ವರ ಶಿವಲಿಂಗ. ೧೭೪೭ರಲ್ಲಿ ನರೋಶಂಕರ ರಾಜೇಬಹಾದ್ದೂರರಿಂದ ನಿರ್ಮಿತವಾದ ಈ ದೇವಾಲಯ ಮೂರು ಶಿಖರಗಳನ್ನು ಹೊಂದಿರುವ ರಚನೆಯಷ್ಟೇ ಅಲ್ಲದೆ ಹೊರಭಾಗದಲ್ಲಿ ನಿಲ್ಲಿಸಿರುವ ಆಳೆತ್ತರದ ಗೋಡೆಯ ಮೇಲೆ ಅಡ್ಡವಾಗಿ ಮತ್ತೂ ಮೂರು ಗೋಪುರಗಳನ್ನು ಪಡೆದಿದೆ. ಹೊರಬಾಗಿಲಿನ ಮೇಲಿರುವ ಟೊಳ್ಳಾದ ಗೋಪುರದೊಳಗೆ ಪ್ರಸಿದ್ಧ ನರೋಶಂಕರ ಗಂಟೆಯನ್ನು ತೂಗುಹಾಕಲಾಗಿದೆ. ಈ ಗಂಟೆಯು ಪೋರ್ತುಗೀಸರ ಮೇಲೆ ಪೇಶ್ವೆಯವರು ಸಾಧಿಸಿದ ಜಯದ ಪ್ರತೀಕವಾಗಿದೆ. ದೇಗುಲದ ಮೂರು ಶಿಖರಗಳಲ್ಲಿ ಮೊದಲನೆಯದು ಸ್ವಲ್ಪ ಮಟ್ಟಿನ ಹಾನಿ ಅನುಭವಿಸಿರುವಿದು ಕಂಡರೆ ಎರಡನೆಯ ವಿಶಾಲವಾದ ಶಿಖರ ತನ್ನ ಅನುರೂಪತೆಯಿಂದ ಚಕಿತಗೊಳಿಸುತ್ತದೆ. ಅದರ ಮೇಲಿರುವ ಆನೆಗಳ ಮತ್ತು ಸಿಂಹಗಳ ಸುಂದರ ಕೆತ್ತನೆಗಳೂ ಮನ ಸೂರೆಗೊಳ್ಳುತ್ತವೆ. ದೇವಾಲಯದ ಹೊರಗೋಡೆಗಳಲ್ಲಿ ದತ್ತಾತ್ರೇಯ, ಗಣೇಶ, ಕಾಲಭೈರವ, ಧ್ಯಾನದಲ್ಲಿ ಮುಳುಗಿರುವ ಯತಿಗಳ, ಮತ್ತೂ ಹಲವು ಶಿಲ್ಪಗಳನ್ನು ಕೆತ್ತಲಾಗಿದೆ.

ಚಿತ್ರ ೩: ಗೋದಾವರಿ ಘಟ್ಟಗಳಿಂದ ಕಾಣುವಂತೆ ನರೋಶಂಕರ ದೇವಾಲಯದ ಶಿಖರಗಳು

ಚಿತ್ರ ೪: ನರೋಶಂಕರ ದೇವಾಲಯದ ಪ್ರಮುಖ ಶಿಖರದ ಕೆತ್ತನೆಗಳು

ನರೋಶಂಕರ ದೇವಾಲಯದ ಎದುರಿಗೆ ರಾಮಕುಂಡದ ಆಚೆಗಿನ ಭಾಗದಲ್ಲಿ ಕಾಣುವ ಕಪ್ಪು ಕಲ್ಲಿನ ಮತ್ತೊಂದು ದೇವಾಲಯವೇ ನಿಳಕಂಠೇಶ್ವರ (ನೀಲಕಂಠೇಶ್ವರ) ದೇವಾಲಯ. ವಾಸ್ತುಶಿಲ್ಪದಲ್ಲಿ ಗೋರಾನಂದಿ ದೇವಾಲಯವನ್ನೇ ಹೋಲುವ ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗ ಅಮೃತಶಿಲೆಯದಾಗಿದ್ದು ಮೊದಲಿದ್ದ ವಿಗ್ರಹವು ಭಿನ್ನವಾದಾಗ ಸ್ಥಾಪಿಸಲಾದ ಹೊಸ ಲಿಂಗದಂತೆ ಕಂಡುಬರುತ್ತದೆ.

ಚಿತ್ರ ೫: ಕಪ್ಪು ಕಲ್ಲಿನಲ್ಲಿ (ಬಸಾಲ್ಟ್) ಕಟ್ಟಿದ ನೀಲಕಂಠೇಶ್ವರ ಮಂದಿರ

ಗೋದಾವರಿ ನದಿಯ ಅಡ್ಡಲಾಗಿರುವ ಅಹಲ್ಯಾಬಾಯಿ ಹೋಳ್ಕರ್ ಸೇತುವೆಯನ್ನು ದಾಟಿ ಸ್ವಲ್ಪ ದೂರ ಹೋದರೆ ಭವ್ಯವಾದ ಸುಂದರನಾರಾಯಣ ದೇಗುಲ ಕಾಣಸಿಗುತ್ತದೆ. ಪ್ರತೀತಿಯಂತೆ ಈ ಸುಂದರನಾರಾಯಣನ ಕಥೆ ಹೀಗಿದೆ. ಹಿಂದೆ ಈ ಭಾಗದಲ್ಲಿ ಜಲಂಧರನೆಂಬ ಮಹಾ ಶಿವಭಕ್ತನಾದ ರಕ್ಕಸ ಮತ್ತು ಅವನ ಪತಿವ್ರತಾ ಪತ್ನಿ ವೃಂದಾದೇವಿ ವಾಸಿಸುತ್ತಿದ್ದರಂತೆ. ಜಲಂಧರನ ತಪಸ್ಸು ಮತ್ತು ವೃಂದಾದೇವಿಯ ಪಾತಿವ್ರತ್ಯವನ್ನು ಮೆಚ್ಚಿ ಶಿವನು ಜಲಂಧರನಿಗೆ ಚಿರಂಜೀವಿಯಾಗುವ ವರವನ್ನಿತ್ತನಂತೆ. ಆ ನಂತರ ಕ್ರೌರ್ಯವನ್ನು ಪ್ರದರ್ಶಿಸಲಾರಂಭಿಸಿದ ಜಲಂಧರ ಸಕಲ ಜೀವಜಂತುಗಳಿಗೂ ಮತ್ತು ದೇವತೆಗಳಿಗೂ ಕೆಡುಕನ್ನುಂಟುಮಾಡಲಾರಂಭಿಸಿದನಂತೆ. ಅಮರನಾದ ಜಲಂಧರನಿಗೆ ನೇರವಾಗಿ ಏನನ್ನೂ ಮಾಡಲಾಗದ ಪರಿಸ್ಥಿತಿಯನ್ನು ಸುಧಾರಿಸಲು ವಿಷ್ಣು ಜಲಂಧರನ ವೇಷ ಧರಿಸಿ ವೃಂದಾಳೊಡನೆ ಗಂಡನಾಗಿ ಜೀವಿಸಿ ಅವಳ ಪಾತಿವ್ರತ್ಯವನ್ನು ಪ್ರಶ್ನಿಸುವಂತೆ ಮಾಡಿದಾಗ ಶಿವನು ತಾನು ಕೊಟ್ಟಿದ್ದ ವರವನ್ನು ವಾಪಸ್ ಪಡೆದನಂತೆ. ಇದರ ನಂತರ ಜಲಂಧರನ ಸಂಹಾರ ಒಂದೆಡೆಯಾದರೆ ಈ ದ್ರೋಹದಿಂದ ಕುಪಿತಳಾದ ವೃಂದಾದೇವಿ ಮತ್ತೊಂದೆಡೆ ವಿಷ್ಣುವಿಗೆ ಕುರೂಪಿಯಾಗೆಂದು ಶಾಪವನ್ನಿತ್ತಳಂತೆ. ವಿಷ್ಣು ಶಾಪವಿಮೋಚನೆಗಾಗಿ ಗೋದಾವರಿಯಲ್ಲಿ ಪವಿತ್ರ ಸ್ನಾನ ಮಾಡಿ ಮತ್ತೆ ತನ್ನ ಸೌಂದರ್ಯವನ್ನು ಗಳಿಸಿಕೊಂಡಿದ್ದರಿಂದ ಅವನಿಗೆ ಇಲ್ಲಿ ಸುಂದರನಾರಾಯಣ ಎಂಬ ಹೆಸರಾಯಿತಂತೆ.

ಚಿತ್ರ ೬: ಸುಂದರನಾರಾಯಣ ದೇವಾಲಯದ ಒಂದು ನೋಟ

ದೇವಾಲಯದಲ್ಲಿ ಸುಂದರನಾರಾಯಣನು ಲಕ್ಷ್ಮಿ ಮತ್ತು ವೃಂದಾದೇವಿ ಸಮೇತರಾಗಿ ಸ್ಥಾಪಿತನಾಗಿದ್ದು ಮೂರ್ತಿಗಳು ಬಹಳ ಆಕರ್ಷಕವಾಗಿವೆ. ದೇಗುಲದ ಒಳಗೂ ಹೊರಗೂ ವಿಗ್ರಹಗಳ ಕೆತ್ತನೆಯಿದ್ದು ಬಹಳ ಅಪರೂಪವಾಗಿ ಕಾಣಸಿಗುವ ನಿಂತಿರುವ ಗಣೇಶ (ಉಭಾ ಗಣಪತಿ) ಮತ್ತು ಒಂಟಿಯಾಗಿ ಕುಳಿತಿರುವ (ರಾಮಪರಿವಾರವಿಲ್ಲದೇ) ಹನುಮಂತನ (ಬಸ್ಲೇಲಾ ಮಾರುತಿ) ವಿಗ್ರಹಗಳು ಗಮನ ಸೆಳೆಯುತ್ತವೆ.

ಈ ದೇಗುಲಗಳಷ್ಟೇ ಅಲ್ಲದೆ ರಾಮಕುಂಡದ ಒಂದೆರಡು ಕಿಲೋಮೀಟರ್‍ಗಳ ಪರಿಧಿಯಲ್ಲಿ ಮತ್ತೂ ಹಲವು ಪೌರಾಣಿಕ ಮತ್ತು ಐತಿಹಾಸಿಕ ಕುರುಹುಗಳು ದೊರೆಯುತ್ತವೆ. ರಾಮಕುಂಡದ ಗಂಗಾ ಗೋದಾವರಿ ದೇವಾಲಯ ಒಂದೆಡೆಯಾದರೆ, ಮತ್ತೊಂದೆಡೆ ಪಂಚವಟಿಯಲ್ಲಿ ರಾವಣನು ಮಾರುವೇಷದಲ್ಲಿ ಬಂದಾಗ ಸೀತೆಯು ವಾಸಿಸುತ್ತಿದ್ದ ಗುಹೆ "ಸೀತಾಗುಂಫಾ" ಕಾಣಸಿಗುತ್ತದೆ. ಪೇಶ್ವೆ ಸರದಾರ ಓಢೇಕರ್ ಕಟ್ಟಿಸಿದ ಭವ್ಯ ಕಳಾರಾಮ ಮಂದಿರವು ದೇವಾಲಯಗಳ ಪ್ರವೇಶದ ವಿಷಯದಲ್ಲಿ ಜಾತಿ ಅಧಾರಿತ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಡಾ॥ ಅಂಬೇಡ್ಕರರು ಪಟ್ಟ ಶ್ರಮದ ಫಲವನ್ನು ಸಾರುತ್ತದೆ.

ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಮತ್ತು ಕುಶಾವರ್ತ 

ನಾಶಿಕ್ ನಗರದಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿರುವುದು ಭಾರತದ ಉದ್ದಗಲಕ್ಕೂ ಹರಡಿರುವ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದಾದ ತ್ರ್ಯಂಬಕೇಶ್ವರ. ದೇಗುಲದಿಂದಾಗಿ ಈ ಊರಿಗೂ ತ್ರ್ಯಂಬಕೇಶ್ವರವೆಂದೇ ಹೆಸರು ಬಂದಿದೆ. ನಗರದ ಮೆರುಗು ಹೆಚ್ಚಿಸುವಂತಿರುವ ಬ್ರಹ್ಮಗಿರಿ ಬೆಟ್ಟ ಬಹಳ ದೂರದಿಂದಲೇ ಕಣ್ಮನ ಸೆಳೆಯುತ್ತದೆ. ಪುರಾಣಗಳ ಪ್ರಕಾರ ಇದೇ ಬೆಟ್ಟದ ಮೇಲೆ ಕುಳಿತು ತಪಸ್ಸು ಮಾಡಿ ಗೌತಮಮುನಿಯು ಶಿವನನ್ನು ಮೆಚ್ಚಿಸಿ ಗಂಗೆಯೇ ಈ ಕ್ಷೇತ್ರದಲ್ಲಿ ಗೋದಾವರಿಯಾಗಿ ಹರಿಯುವಂತೆ ವರ ಪಡೆದದ್ದು. ಹೀಗಾಗಿ ಬ್ರಹ್ಮಗಿರಿ ಗೋದಾವರಿ ನದಿಯ ಉಗಮಸ್ಥಾನ. ಗೋಹತ್ಯಾದೋಷವನ್ನು ತೊಳೆದುಕೊಳ್ಳಲೋಸುಗ ಗಂಗಾಸ್ನಾನವನ್ನು ಮಾಡುವ ಸಲುವಾಗಿ ಗಂಗೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಗೌತಮರು ಮಾಡಿದ ಘೋರ ತಪಸ್ಸನ್ನು ಮೆಚ್ಚಿ ಶಿವನು ಗಂಗೆಯನ್ನು ತನ್ನ ಜಟೆಯಿಂದ ಹರಿಯಬಿಟ್ಟರೂ ಸಹ ನದಿಯು ಒಂದೆಡೆ ನಿಲ್ಲದೆ ಬೆಟ್ಟದಿಂದ ಕೆಳಜಾರುತ್ತ ಕಣ್ಣುಮುಚ್ಚಾಲೆಯಾಡುತ್ತ ಓಡುತ್ತಿರಲು ಗೌತಮರು ಬೆಟ್ಟದ ತಪ್ಪಲಿನಲ್ಲಿ ತಮ್ಮ ತಪಶ್ಶಕ್ತಿಯನ್ನು ಉಪಯೋಗಿಸಿ ಹುಲ್ಲಿನ ಜೊಂಡಿನಿಂದ ಸ್ವಲ್ಪ ಜಾಗವನ್ನು ಸುತ್ತುವರಿಸಿ ಗಂಗೆಯು ಅಲ್ಲೇ ನಿಲ್ಲುವಂತೆ ಮಾಡಿದರು. ಹೀಗೆ ರಚಿತವಾದ ಪವಿತ್ರವಾದ ಕುಂಡವೇ ಕುಶಾವರ್ತ.

ಚಿತ್ರ ೭: ಕುಶಾವರ್ತ ಕುಂಡ, ತ್ರ್ಯಂಬಕೇಶ್ವರ

ಬ್ರಹ್ಮಗಿರಿಯಲ್ಲಿ ಜನಿಸಿದ ಗೋದಾವರಿ ಕುಶಾವರ್ತ ಕುಂಡದ ಮೂಲಕ ಹಾದುಹೋಗಿ ತ್ರ್ಯಂಬಕೇಶ್ವರ ಲಿಂಗದಲ್ಲಿ ಮತ್ತೆ ಉದ್ಭವಿಸುತ್ತಾಳೆ. ಕುಶಾವರ್ತದಲ್ಲಿ ಮಿಂದು ಪುನೀತರಾಗಲು ದಿನವೂ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ.

ಕುಶಾವರ್ತದಿಂದ ಸ್ವಲ್ಪ ದೂರದಲ್ಲೇ ಇರುವುದು ಗೌತಮ ಕೊಳ, ಮತ್ತದರ ಮುಂಭಾಗಕ್ಕೆ ಘನಗಾಂಭೀರ್ಯ ತೋರುವ ಮನೋಹರ ತ್ರ್ಯಂಬಕೇಶ್ವರ ಮಂದಿರ. ನಾನಾಸಾಹೇಬನೆಂದೇ ಪ್ರಖ್ಯಾತನಾದ ಬಾಲಾಜಿ ಬಾಜಿರಾವ್ ಪೇಶ್ವೆ ಈಗಿರುವ ಈ ಭವ್ಯ ಕಪ್ಪುಶಿಲೆಯ ಮಂದಿರವನ್ನು ಕಟ್ಟಿಸಿದ್ದು. ಮೂರು ಬಾಗಿಲುಗಳು ಮತ್ತು ಐದು ಶಿಖರಗಳನ್ನು ಹೊಂದಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಸದಾ ಪೂಜಿತನಾದ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗವಿದೆ. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಮತ್ತು ಗೋದಾವರಿ ನದಿಯ ಅಂಶಗಳನ್ನು ಈ ಜ್ಯೋತಿರ್ಲಿಂಗವು ಹೊಂದಿದೆ ಎನ್ನುವುದು ಜನಪ್ರಿಯ ನಂಬಿಕೆ. ದೇಗುಲ ಮತ್ತು ಅದರ ಸುತ್ತಮುತ್ತಲಿನ ಪರಿಸರದ ಪ್ರಸನ್ನತೆಯನ್ನು ಅನುಭವಿಸಿಯೇ ಅರಿಯಬೇಕು.

ಚಿತ್ರ ೮: ತ್ರ್ಯಂಬಕೇಶ್ವರ ದೇವಾಲಯದ ಪ್ರಮುಖ ಶಿಖರ, ಗೋದಾವರಿಯ ಉಗಮಸ್ಥಾನ ಬ್ರಹ್ಮಗಿರಿಯ ಹಿನ್ನೆಲೆಯಲ್ಲಿ

ಪಾಂಡುಲೆಣಿ ಗುಹೆಗಳು

ನಾಶಿಕ್ ನಗರದಿಂದ ಸುಮಾರು ೮ ಕಿಲೋಮೀಟರ್ ದೂರದಲ್ಲಿ ಸರಿಸುಮಾರು ಎರಡು ಸಾವಿರ ವರ್ಷಗಳಷ್ಟೇ ಹಳೆಯದಾದ ಪಾಂಡುಲೆಣಿ (ಅಥವಾ ಪಾಂಡವಲೆಣಿ) ಗುಹಾಂತರ್ದೇವಾಲಯಗಳಿದ್ದು, ಇವು ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ಅಜಂತಾ - ಎಲ್ಲೋರಾ ಗುಹೆಗಳನ್ನೇ ಹೋಲುವಷ್ಟು ಹಳೆಯವೂ, ಐತಿಹಾಸಿಕವಾಗಿ ಮಹತ್ವವುಳ್ಳವೂ ಆಗಿವೆ. ತ್ರಿರಶ್ಮಿ ಎಂದು ಕರೆಯಲ್ಪಡುವ ಬೆಟ್ಟಗಳ ಶ್ರೇಣಿಯಲ್ಲಿರುವ ಈ ಗುಹೆಗಳಲ್ಲಿ ಕ್ರಿಸ್ತಪೂರ್ವ ಮೂರನೇ ಶತಮಾನದಿಂದ ಕ್ರಿಸ್ತಶಕ ಎರಡನೇ ಶತಮಾನದವರೆಗಿನ ಹೀನಯಾನ ಬೌದ್ಧಮತದ ವಿಹಾರಗಳು ಮತ್ತು ಚೈತ್ಯಗಳನ್ನು ಕಾಣಬಹುದು. ೨೪ ಗುಹೆಗಳ ಈ ಸಂಕೀರ್ಣವನ್ನು ತಲುಪಲು ಸುಮಾರು ೨೫೦ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗಬೇಕು.

ಚಿತ್ರ ೯: ಮಂತ್ರಮುಗ್ಧವಾಗಿಸುವ ಹಲವು ಬುದ್ಧನ ವಿಗ್ರಹಗಳಲ್ಲೊಂದು

ಚಿತ್ರ ೧೦: ಪಾಂಡುಲೆಣಿಯ ತಿಳಿಹಳದಿ ಬಣ್ಣದ ಗುಹಾಂತರ್ವಿಹಾರಗಳಲ್ಲೊಂದು

ಬುದ್ಧ ಮತ್ತು ಬೋಧಿಸತ್ತ್ವರ ಹಲವು ಭಂಗಿಗಳ ವಿಶಾಲ ಶಿಲ್ಪಗಳನ್ನು ಹೊಂದಿರುವ ಪಾಂಡವಲೆಣಿ ಗುಹೆಗಳಿಗೆ ಆ ಹೆಸರು ಬರುವುದಕ್ಕೂ ಮಹಾಭಾರತದ ಪಾಂಡವರಿಗೂ ಯಾವುದೇ ಸಂಬಂಧವಿಲ್ಲ. ಬೆಟ್ಟದಲ್ಲಿ ಹೇರಳವಾಗಿರುವ ಸುಣ್ಣ ಮಿಶ್ರಿತ ಕಲ್ಲುಗಳಿಂದಾಗಿ ಗುಹಾಂತರ್ದೇಗುಲಗಳು ತಿಳಿಹಳದಿ (ಪಾಂಡು) ಬಣ್ಣದಲ್ಲಿ ಕಂಗೊಳಿಸುತ್ತವೆ. ಹೀಗೆ ಬಂದಿದೆ ಅವಕ್ಕೆ ಆ ಹೆಸರು. ಆಗಿನ ಕಾಲದ ಭಿಕ್ಷುಗಳು ಮತ್ತು ಸಾಮಾನ್ಯ ಜನರು ಈ ದೇಗುಲಗಳ ರಚನೆ, ರಕ್ಷಣೆಗಳಿಗೆಂದು ಬಹಳ ನೆರವು ನೀಡಿದ್ದರೂ ಅಪಾರವಾದ ಧನಸಹಾಯದೊಂದಿಗೆ ಇವುಗಳ ನಿರ್ಮಾಣಕ್ಕೆ ನೆರವಾಗಿರುವವರು ಅಂದಿನ ರಾಜಮನೆತನಗಳು - ಶಾತವಾಹನರು, ಕ್ಷತ್ರಪರು ಮತ್ತು ಅಭೀರರು. ಶಾತವಾಹನ ದೊರೆಗಳಾದ ಗೌತಮೀಪುತ್ರ ಶಾತಕರ್ಣಿ, ವಸಿಷ್ಠೀಪುತ್ರ ಪುಲುಮಾವಿ ಮತ್ತು ಕೃಷ್ಣ, ಕ್ಷತ್ರಪ ರಾಜರಾದ ನಹಾಪನ ಮತ್ತು ಉಸವದತ್ತರ ಕಾಲದ ಹಲವು ಶಾಸನಗಳು ಇಲ್ಲಿನ ವಿಹಾರ ಮತ್ತು ಚೈತ್ಯಗಳಲ್ಲಿ ಕಾಣಸಿಗುತ್ತವೆ.

ಚಿತ್ರ ೧೧: ಪಾಂಡುಲೆಣಿಯ ಚೈತ್ಯ. ೨೦೦೦ ವರ್ಷಗಳ ಹಳೆಯ ವಾಸ್ತುಶಿಲ್ಪದ ಪರಾಕಾಷ್ಠೆ

ಹದಿನೆಂಟನೇ ಗುಹೆ ಇವುಗಳಲ್ಲೆಲ್ಲ ಅತಿ ಮುಖ್ಯವಾದ ಚೈತ್ಯ ಪ್ರಾರ್ಥನಾಮಂದಿರ. ಬೃಹತ್ ಗೋಳಾಕಾರದ ಒಳಚಾವಣಿಯನ್ನು ಹೊಂದಿರುವ ಈ ಗುಹೆಯಲ್ಲಿ ದೊಡ್ಡ ಅಷ್ಟಮುಖಿ ಕಂಬಗಳು ಆಸರೆಯಾಗಿ ನಿಂತಂತೆ ಕಂಡರೆ ಒಳಭಾಗದಲ್ಲಿರುವ ಸ್ತೂಪ ಪ್ರಶಂತಭಾವ ಮೂಡಿಸುತ್ತದೆ. ಕೆಲವು ಗುಹೆಗಳಲ್ಲಿ ಅಪರೂಪದ ಮಲಗಿರುವ ಬುದ್ಧನ ವಿಗ್ರಹಗಳನ್ನೂ ಮೂಡಿಸಲಾಗಿದೆ. ಬೆಟ್ಟದ ಗುಹೆಗಳ ಎತ್ತರದಿಂದ ಕೆಳಗೆ ನೋಡಿದರೆ ಇಡೀ ನಾಶಿಕ್ ನಗರದ ಒಂದು ಪಕ್ಷಿನೋಟವೇ ದೊರಕುತ್ತದೆ.

ಸ್ಮಾರಕಗಳು

ದೇಗುಲ, ವಾಸ್ತುಶಿಲ್ಪ ಮತ್ತು ಶಾಸನಗಳಷ್ಟೇ ಅಲ್ಲದೆ ನಾಶಿಕ್ ನಗರ ಕೆಲವು ಪ್ರತಿಷ್ಠಿತ ಸ್ಮಾರಕಗಳಿಗೂ ಪ್ರಸಿದ್ಧವಾಗಿದೆ. ಪಾಂಡುಲೆಣಿಯ ತಪ್ಪಲಲ್ಲೇ ಭಾರತೀಯ ಚಲನಚಿತ್ರ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ನೆನಪಿನಲ್ಲಿ ಕಟ್ಟಿಸಿರುವ ಸುಂದರ ಸ್ಮಾರಕವಿದೆ. ಫಾಲ್ಕೆ ತ್ರ್ಯಂಬಕೇಶ್ವರದಲ್ಲಿ ಹುಟ್ಟಿ ಬೆಳೆದವರು. ನಗರದಿಂದ ೧೭ ಕಿಲೋಮೀಟರ್ ದೂರದಲ್ಲಿರುವ ಭಗೂರ್ ಎಂಬ ಸಣ್ಣ ಊರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್‍ಕರ್ ಅವರ ಹುಟ್ಟೂರು. ಅವರು ಹುಟ್ಟಿದ ಮನೆ ಈಗ ಸಾವರ್‍ಕರ್ ಸ್ಮಾರಕವಾಗಿ ಪರಿವರ್ತಿತಗೊಂಡಿದ್ದು ಅವರ ಜೀವನದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಅಲ್ಲಿ ಮಾಡಲಾಗಿದೆ.

ಕುಂಭಮೇಳದ ಸಮಯದಲ್ಲಿ ನಾಶಿಕ್ ನಗರಕ್ಕೆ ಪ್ರಯಾಣ ಬೆಳೆಸುವ ಇರಾದೆಯೇನಾದರೂ ನಿಮ್ಮದಾಗಿದ್ದರೆ ಮೇಲೆ ತಿಳಿಸಿದ ಸ್ಥಳಗಳನ್ನು ಸಂದರ್ಶಿಸುವುದನ್ನು ಮಾತ್ರ ಮರೆಯಬೇಡಿ.




ತರಂಗದಲ್ಲಿ ಪ್ರಕಟವಾದ ಈ ಲೇಖನದ ಚಿತ್ರಗಳು:





Comments

hamsanandi said…
Thanks for this very nicely written article!
Prasanna said…
Thank you sir!
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ