Another Vivekananda Jayanti Poem : ವಿವೇಕಸಂಕಲ್ಪ

ಕಳೆದ ವರ್ಷದಂತೆಯೇ ಈ ವರ್ಷವೂ ವಿವೇಕಾನಂದರ ಜಯಂತಿಯ ದಿನ ಅವರ ಕುರಿತು ಒಂದು ಕವನವನ್ನು ನನ್ನ ಬ್ಲಾಗ್‌ನಲ್ಲಿ ಬರೆಯುವ ಆಸೆಯಾಯಿತು. ಇದಕ್ಕೆ ನಾನಾಗಲೇ ಕಳೆದ ವರ್ಷ ಎರಡು ತಿಂಗಳು ತುಂಬಾ ಯೋಚನೆ ಮಾಡಿ ರಚಿಸಿದ ಕವನ ಇಲ್ಲಿದೆ:


ನೂರಾರು ವರುಷಗಳ ಹಿಂದೆ ಮಕರಸಂಕ್ರಾಂತಿಯಂದು
ದಿವಾಕರನ ಕಿರಣಗಳು ಭುವಿಗೆ ತಲುಪುವ ಮೊದಲೇ
ಜನನವಾಗಿತ್ತು ರಮ್ಯಚೇತನವೊಂದು;
ಮುಖದಲ್ಲಿ ಕಾರ್ತಿಕ ಹುಣ್ಣಿಮೆಯ ಚಂದಿರನ ತೇಜಸ್ಸು
ವಿಜಯೋತ್ಸವದಲಿ ಮೆರೆವ ರಾಜಠೀವಿಗಳನೊಳಗೊಂಡು
ಕರೆಸಿಕೊಂಡನವನು ನರೇಂದ್ರನೆಂದು.

ಬಾಲ್ಯದಲೇ ದೈವಭಕ್ತಿ, ಅಪರಿಮಿತ ಜ್ಞಾನಾಸಕ್ತಿ
ಗೆಳೆಯರೆಲ್ಲರೊಡಗೂಡಿ ತಪಗೈವ ಆಟ;
ಪುರಾಣ ಪುಣ್ಯಕಥೆಗಳೇ ಪಾಠ.
ಅತುಳ ಸಹನಾಶಕ್ತಿ, ಲೌಕಿಕದಲ್ಲಿ ವಿರಕ್ತಿ
ಬುದ್ಧಿ ವಿಕಾಸವಾದಂತೆ ಬೆಳೆದಿತ್ತು ಪ್ರಶ್ನಿಸುವ ಯುಕ್ತಿ;
ಅತೀತದ ಅಸ್ತಿತ್ವದತ್ತ ನೆಟ್ಟಿದ್ದ ವಿಮರ್ಶಾತ್ಮಕ ನೋಟ.

ದಕ್ಷಿಣೇಶ್ವರದಲ್ಲಿ ಯೋಗೀಶ ರಾಮಕೃಷ್ಣರ ಭೇಟಿ
ಮಾಡಿಸಿತು ಲೋಕೋದ್ಧಾರಕ ಜೀವಗಳೆರಡರ ಮಿಲನ;
ಆಧ್ಯಾತ್ಮ ಚಿಂತನೆಯ ಮಾರ್ಗವಾಗಿತ್ತು ಸುಗಮ.
ಗುರು ಶಿಷ್ಯರಲ್ಲೇ ಪರೀಕ್ಷೆ, ಬಹುದಿನಗಳ ಪ್ರತೀಕ್ಷೆ
ನಂತರವೇ ದೊರೆತದ್ದು ದೈವ ಸಾಕ್ಷಾತ್ಕಾರದ ರಹಸ್ಯ
ಕಾಳಿಚರಣಕ್ಕೆರಗಿದ ಯುವಕನಾಗಿದ್ದ ಮಹಾತ್ಮ.

ಕಿತ್ತಳೆ, ಕಡುಲೋಹಿತ ವರ್ಣಗಳ ಕಾವಿಯನು ಧರಿಸಿ
ನಾಡಿನ ಮೂಲೆಗಳನ್ನರಸಿ ಜನಜೀವನವನ್ನರಿತು
ಗಳಿಕೆಯಾಗಿತ್ತು ಕಂಡು ಕೇಳರಿಯದ ವಿವೇಕ.
ಕನ್ಯಾಕುಮಾರಿಯ ಅಲೆಗಳ ರೌದ್ರಾವತಾರದ ನಡುವೆ
ಮನದಾಳವನು ಹೊಕ್ಕು ಶಾಶ್ವತ ಪ್ರಸನ್ನತೆಯನು ಕಂಡು
ಆತ್ಮಸಂತೋಷದೊಡನೆ ಗಳಿಸಿದ್ದ ಪರಿಪೂರ್ಣ ಆನಂದ.

ವಿದೇಶ ನೆಲದಲಿ ನಿಂತು ಭಾರತೀಯತೆ ನೆನೆದು
ಜಗದ ಜನರೆಲ್ಲರನು ಭ್ರಾತೃ ಭಗಿನಿಯರೆಂದೆಣಿಸಿ
ಸರ್ವಧರ್ಮ ಸಮನ್ವಯವ ಸಾರಿದ ವಿರಾಗಿ.
ಮಧುಸೂದನನ ಮಧುರ ಮುರಳಿವಾದನದಂತೆ
ಮೈಮರೆಸಿ, ಕಣ್ತೆರೆಸಿ, ವಿಶ್ವರೂಪವನೆ ತೋರಿಸಿದ
ವಿವೇಕಾನಂದನಾದ ಬಹುಜನಾನುರಾಗಿ.

ಯುವಜನತೆಯ ಜೀವನಕ್ಕೆ ಮಾರ್ಗದರ್ಶಕನಾಗಿ
ಶತಮಾನದ ಹಿಂದೆ ನುಡಿದ ನುಡಿಮುತ್ತುಗಳ ತೋರಣ
ಇಂದಿಗೂ ನಿತ್ಯನವ್ಯನೂತನ.
"ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ
ಧ್ಯೇಯೋದ್ದೇಶವನು ಪಾಲಿಸುತ ಬೋಧಿಸಿದ
ವೀರಸನ್ಯಾಸಿಗಿಂದು ಸಂಕಲ್ಪದ ನಮನ...

Comments

Unknown said…
Very nice Venky!!!
Unknown said…
Very nice 🙂