ಕೈಮರ

 

ಕೈಮರ

ಕಾರಿರುಳೆಲ್ಲೆಡೆ, ನೇಸರನಿಳಿದಿಹ 

ಮಾಸಲು ಗಿರಿಗಳ ಹಿಂಬದಿಗೆ,

ಬಾನಲಿ ಕಾಣಿಸವರಿಲುಗಳೊಂದೂ

ಬೆಳಗಲು ಬೆಳ್ಳಿಯ ಮುಗುಳುನಗೆ.


ಗೂಗೆಯು ಹಾರಿತು ಬಯಲನು ಹಾಯುತ 

ಕೂಗನು ಬಿರುಗಾಳಿಗೆ ಬೆರೆಸಿ,

ಮಂಕದು ಕವಿದಿರೆ ಪುಟ್ಟನು ನಡೆದನು 

ಬಿರುಸಿನ ಹೆಜ್ಜೆಯ ಹಾಕುತಲಿ.


ಆ ಕಗ್ಗತ್ತಲಿನೊಳು ನಡುನಡುವೆಯೆ 

ಮಿಂಚಿನ ತಾಂಡವ ನಡೆದಿತ್ತು,

ಕೆಸರಿನ ಜಾಡನು ತೋರಿತ್ತು,

ಬೇಲಿಯ ನೆರಳೂ ಕಂಡಿತ್ತು!


ಭೀಕರ ಕಾವಳ ಕವಿದಿರೆ ಪಥವನು 

ತಡಕಾಡುತಲವ ಹುಡುಕಿದನು,

ಘೋರದ ರೂಪವನೊಂದನು ದೂರದಿ 

ಕಂಡಂತೆನಿಸಿಯೆ ಬೆದರಿದನು.


ಮಾರಕವೆನಿಸುವ ಭೀಕರ ಕಾಯವು 

ಬಿಳಿಯುಡುಪನು ತಾ ಹೊದ್ದಿತ್ತು,

ಪುಟ್ಟನ ಜುಟ್ಟನು ಹಿಡಿದೆಳೆದಾಡಲು 

ತೋಳ್ಗಳನಗಲಿಸಿ ಕಾದಿತ್ತು!


ಮೈ ಮರಗಟ್ಟಿತು ಥರಥರಗುಟ್ಟಿತು

ಮುಂದಿರುವಾಕೃತಿಯನು ನೆನೆದು,

ಕೆಚ್ಚೆದೆಯಿಂದಲಿ ಕೈಲಾದುದ ತಾ-

ನೆಸಗುವ ನಿಶ್ಚಯ ಪುಟ್ಟನದು.


ತನ್ನೆಲ್ಲಳವನು ಕೂಡಿಸಿ ನಡೆದನು

ಹುಡುಗನು ಬೇತಾಳದ ಕಡೆಗೆ,

ಮಬ್ಬಿನಿರುಳಿನಲಿ ತವಕದಿ ಚಲಿಸುತ

ಬೀರಿದ ನೋಟವನದರೆಡೆಗೆ.


ಹತ್ತಿರವಾಗಿರೆ ಭೂತಾಕಾರವು

ಭಯವದು ಕಣ್ಮರೆಯಾಗಿತ್ತು,

ತಟ್ಟುತ ಕೈಗಳ ಪುಟ್ಟನು ನಕ್ಕನು

ಹೊಟ್ಟೆಯು ಹುಣ್ಣಾಗುವವರೆಗೂ!


ಕೈಮರವಿದ್ದಿತು ಭೂತವದಲ್ಲವೊ,

ನೆರವಿಗೆ ದಾರಿಯ ಹೋಕರಿಗೆ!

ಕತ್ತಲ ಮಾಯೆಯು ಕಳೆದಿರೆ ಬೆರಗಿನ 

ನಿಜವದು ಕಂಡಿತು ಪುಟ್ಟನಿಗೆ.


ಹೊಸತೊಂದುತ್ತಮ ಪಾಠವ ಕಲಿತೆನು 

ಸಂಶಯವಿಲ್ಲೆಂದನು ಪುಟ್ಟ -

ದಿಗಿಲನು ತರಿಸುವುದೇನೇ ನಡೆಯಲಿ

ಹುರುಳರಿಯುವುದೇ ಬಹುಮುಖ್ಯ!


ದೆವ್ವದ ಭೂತದ ಕಥೆಗಳ ಕೇಳಿರೆ 

ಹೇಳುವೆ ನಾ ನನ್ನೀ ಕಥೆಯ,

ಬಯಲೊಳು ನಡೆಯುತ ಭಯದಲಿ ತೊಳಲಿದ 

ಬಿಳಿ ಕೈಮರದೀ ಸಂಗತಿಯ!





Original:


The Hand-Post


THE night was dark, the sun was hid 

 Beneath the mountain grey; 

And not a single star appeared 

To shoot a silver ray.


Across the heath the owlet flew,

And screamed along the blast,

And onward, with a quickened step, 

Benighted Henry passed. 


At intervals, amid the gloom,

A flash of lightning played,

And showed the ruts with water filled, 

And the black hedge's shade.


Again in thickest darkness plunged, 

He groped his way to find; 

And now he thought he spied beyond, 

 A form of horrid kind. 


In deadly white it upward rose, 

Of cloak or mantle bare, 

And held its naked arms across, 

To catch him by the hair. 


Poor Henry felt his blood run cold, 

At what before him stood; 

Yet like a man did he resolve 

To do the best he could. 


So calling all his courage up,

He to the goblin went;

And eager, through the dismal gloom,  

His piercing eyes he bent. 


But when he came well nigh the ghost 

That gave him such affright, 

He clapped his hands upon his sides, 

And loudly laughed outright. 


For there a friendly post he found, 

The stranger's road to mark; 

A pleasant sprite was this to see 

For Henry in the dark. 


"Well done!" said he, "one lesson wise

I've learned, beyond a doubt,

Whatever frightens me again, 

I'll try to find it out. 


"And when I hear an idle tale 

Of goblins and a ghost, 

I'll tell of this, my lonely walk, 

And the *tall white Hand-post.'*


Ann Taylor

Comments