ಹೃದಯಂಗಮ ರಾಮ

ರಾಮಮಂದಿರವನ್ನು ನೋಡಲು ಬಂದ ಅಳಿಲುಗಳು, ಹದ್ದುಗಳು, ಜಿಂಕೆಗಳು, ಕೋತಿಗಳು ಮತ್ತು ಕರಡಿಗಳು ತಮ್ಮತಮ್ಮಲ್ಲಿ ಹೇಗೆ ಮಾತನಾಡಿಕೊಳ್ಳಬಹುದೆಂಬ ಒಂದು ಊಹಾತ್ಮಕ ಚಿತ್ರಣದ ಪ್ರಯತ್ನ...

ಶ್ರೀರಾಮಜಯಂ!



ಹೃದಯಂಗಮ ರಾಮ

ಒಲವಿನಿಂದವನೆಮ್ಮ ಬೆನ್ನು ಸವರಿದನಂದು,
ತಿಲಕದಂದದ ರಕ್ಷೆ ನಮಗಾಯಿತು,
ಬಲವಿಲ್ಲದಿರಲೇನು? ಛಲವಳಿಲಿಗಿಹುದೆನುತ
ನೆಲೆನಿಂತನೆಮ್ಮೆದೆಯೊಳನವರತವು!
ಹಲವರುಷಗಳ ಕಳೆದು ದೊರೆತುದೀ ಪುಣ್ಯಫಲ,
ಜಲಜನೇತ್ರನ ಪುರದಿ ಗುಡಿ ಮರಳಿತು!
ಬಲಿದಾನವನ್ನೆಸಗಿದವರಳಿಲುಸೇವೆಯಲಿ
ಕುಲವೆಮ್ಮದೆಲ್ಲರಿಗೆ ನೆನಪಾಯಿತು!

***

ದುರುಳ ಕಳುವಾಗಿಸಿರಲವನ ಹೃನ್ಮಂದಿರವ
ಭರದಿ ಸೆಣೆಸಿದರೆಮ್ಮ ಕುಲತಿಲಕರು,
ಗರುಡ ಲೆಂಕರ ತೆರದೊಳಸುವ ಮುಡಿಪಾಗಿಸಿದ
ಪರಮಪಾವನಪಾತ್ರರವರಾದರು!
ಗರಿಗಳನು ತರಿದರೇಂ? ರೆಕ್ಕೆಗಳ ಕಡಿದರೇಂ?
ಬರವಿಗೆನ್ನುತ ಕಾದು ಕುಳಿತರಲ್ಲ!
ಗರಿಗೆದರಿಹುದು ಕಾಣು ರಾಮದೇಗುಲವಿಂದು
ಜರೆಯು ಚಿರಯೌವನವ ಪಡೆಯಿತಲ್ಲ!

***

ಹುಲ್ಲೆಸಾರಂಗಗಳಿಗೆಂತು ಭಯವಿದ್ದೀತು?
ಫುಲ್ಲಲೋಚನನವನು, ಅಭಯದಾತ!
ಸಲ್ಲದವನೊಬ್ಬ ತಾ ಸೋಗಿನಲಿ ವಂಚಿಸಿರೆ
ನಿಲ್ಲುವುದೆ ಧರ್ಮನದಿ? ಹರಿವು ಸತತ.
ತಲ್ಲಣವು ಕಳೆದಿಹುದು, ಮಾಯೆ ತಾ ಸರಿದುಹುದು,
ಬಲ್ಲಿದರು ತೀರ್ಪನಿತ್ತಿಹರು ನೋಡು!
ಲಲ್ಲೆಮಾತಿನ ಕುವರನಲ್ಲೆ ಮರಳಿಹನಿಂದು,
ಕಲ್ಲಗುಡಿ, ಕೈಮುಗಿದು ಭಯವ ದೂಡು!

***

ಸೇತುವನು ಬೆಸೆಯಿಸಿದನೆಮ್ಮ ಪೂರ್ವಜರಿಂದ
ಮಾತೆ ಸೀತೆಯ ಸೇವೆ ದಯಪಾಲಿಸಿ,
ಪಾತಕಿಯ ಪಡೆಯೆದುರು ಹೋರಿಸಿದನೊಡಗೂಡಿ
ಕೋತಿಗಳ ಸೇನೆಯನು ಮುಂದೆ ನಡೆಸಿ!
ಹೇತುವವನಿರಲಾಗಿ ನಮ್ಮದೇನಿಹುದಿಲ್ಲಿ?
ದೂತರವನಾಶಯದ ವಿನ್ಯಾಸಕೆ!
ನೀತಿಯಿಂದಲಿ ಜನತೆ ಕೈಜೋಡಿಸಿರಲಿನ್ನು
ನೂತನತೆ ಸಂತತದ ದೇವಕುಲಕೆ.

***

ಮರೆತ ಸಾಮರ್ಥ್ಯಗಳ, ಮರೆತ ಹೊಣೆಗಳನೆಲ್ಲ
ಮರಮರಳಿ ನೆನಪಿಸಿದರೆಮ್ಮ ಹಿರಿಯ!
ಮರುತಸುತನಿರಬಹುದು, ಮನದಿ ಸಂದೇಹವಿರೆ
ಕರತಲಾಮಲಕವೂ ಕಷ್ಟಸಾಧ್ಯ!
ಕರಡಿರಾಜನ ತೆರದಿ ಹಲವರೀ ಯುಗದೊಳೂ
ಹುರಿದುಂಬಿಸಿರಬೇಕು ಜನರ ಮನವ,
ಪರಮಪುರುಷನಿಗೆಂದು ಮಂದಿರವು ಬಂದಿಹುದು,
ಶಿರಬಾಗಿ ನಮಿಸೋಣ, ಬಿಡು ಜಂಬವ!

***

ಶ್ರೀರಾಮಜಯಂ!

- ವೆಂಕಟೇಶಪ್ರಸನ್ನ


Comments

User1999 said…
Very unique thought, and beautifully written🙏