ಕೃಷ್ಣಸಂಭವ

 An attempt at translating to Kannada, this beautiful 20-verse poetic beauty - "The Birth of Krishna" - by Sri Bhavesh Kansara (@kansaratva on Twitter): https://kansaratva.wordpress.com/2020/08/11/the-birth-of-krishna/


(Image is a picture taken of the exquisite painting by Sri Chandranath Acharya)


ಕೃಷ್ಣಸಂಭವ

ಆಗಸದೊಂದುಲಿ ಶಕುನವ ಮೊಳಗಿಸಿ
ಸುದ್ದಿಯನೆಲ್ಲೆಡೆಯೊದರಿಹುದು.
"ಕಂಸನೆ, ಭಯದಲಿ ದಿನಗಳನೆಣಿಸಿಕೊ,
ನಿನ್ನಳಿವಿನ ಹೊತ್ತಡರಿಹುದು!"

ಉಲಿವನು ಕೇಳಿದ ದೊರೆ ಬಲಶಾಲಿಗೆ
ಥರಥರ ನಡುಕವು ಹುಟ್ಟಿತ್ತು,
ದಿಗಿಲಿಗೆ ಕಂಗಳು ಕತ್ತಲೆಗಟ್ಟಿರೆ
ಶಂಕೆಯ ಬಲೆಯಾವರಿಸಿತ್ತು.

ಗುರುತರದಾಜ್ಞೆಯ ಸಾರಿತು ಬಾನುಲಿ
ಲೋಕವೆ ನಿಶ್ಚಲವಾಗಿರಲು,
"ದೇವಕಿಯೊಡಲಿನ ಎಂಟನೆ ಬಸಿರದು
ಸಿಗಿವುದು ನಿನ್ನನು ನೇಮದೊಲು."

ಸ್ತಂಭಿಸಿ ನಿಂತನು ನಿರ್ದಯ ರಾಜನು
ತುಂಬಿರೆ ಕತ್ತಲು, ನೀರವತೆ.
ಕೇಡಿನ ಕಿಡಿಯೊಂದಿಣುಕಿತು ಮನದಲಿ
"ಉಳಿಯುವುದೇತಕೆ ಸಹಜಾತೆ?"

ಕೃತ್ರಿಮಹಾಸವ ಮೊಗದಲಿ ಸೂಸುತ
ಹುಡುಕಿದನವಳನು ಗರಬಡಿದು
ಕಂಡೊಡನೆಯೆ ತಾ ಬೀಸಿದ ಗದೆಯನು
ಬೆಚ್ಚಿದ ದೇವಕಿ ಮುದುಡಿದಳು.

ಬೇಡಿದ ವಸುದೇವನು ಸತಿಯುಳಿವಿಗೆ
"ದೇವಕಿ ನಿನಗೇನೆಸಗಿಹಳು?
ಬೇಡುವೆ ರಾಜನೆ, ಕೊಲ್ಲದಿರವಳನು
ಬೇಡುವೆನೋ, ಕೇಳೆನ್ನಳಲು!

ಪಡೆಯುವ ಮಕ್ಕಳನೆಲ್ಲವ ಮರೆಯದೆ
ನಿನಗೊಪ್ಪಿಸುವೆವು, ವಚನವಿದು!
ಬೇಡುವೆ ನಿನ್ನನು, ತಿಳಿದವ ನೀನಿಹೆ,
ದೇವಕಿಯುಳಿವಿಗೆ ಕರುಣೆಯಿಡು!"

ಸದ್ಯದಲವರನ್ನುಳಿಸಿದ ಸಿಡುಕನು
ಕತ್ತಲಕೋಣೆಗೆ ದೂಡುತಲಿ,
ಮಗುವೊಂದಳುತಿಹ ಸಪ್ಪಳವಾದೊಡೆ
ಧಾವಿಸಿ ಬಂದನು ತುರ್ತಿನಲಿ.

ಒಂದು ಎರಡು ಮೂರ್ನಾಲ್ಕೈದಾರದೊ!
ಕಂಸನು ಹಿಂಡಿದನಸುಗಳನು,
ಶೋಕದಿ ಮುಳುಗಿದ ಬಡದಂಪತಿಗಳು
ನೆನೆದರು ಮನದಲೆ ದೈವವನು.

ಮಾಗಿಯ ನಿಶೆಯೊಲು ದಿನಗಳು ಕಳೆದವು
ನಿಟ್ಟುಸಿರಡಗಿತು ಕತ್ತಲಲಿ,
ದೇವಕಿ ಮಲಗಿದಳುಡುಗಳ ದಿಟ್ಟಿಸಿ
ಕಂಬನಿದುಂಬಿದ ಕಂಗಳಲಿ.

ಹರಿ ತಾ ನಗುತಲಿ ತಿರುವಿದ ಚಕ್ರವ,
ಶಕುನವು ಕೈಗೂಡುವ ಹೊತ್ತು;
ದೇವಕಿಯೊಡಲಿನ ಏಳನೆ ಬಸಿರದು
ರೋಹಿಣಿಗರ್ಭವ ಸೇರಿತ್ತು!

ಕಿಡಿಕಾರುತ ದೊರೆ ನುಗ್ಗಿರೆ ಮಗುವಿಗೆ
ಅಸುವಿಲ್ಲೆಂದನು ವಸುದೇವ,
ಕಂದನ ಕಾಣದೆ ದರ್ಪದಿ ನಗುತಲಿ
ಎಂಟರ ಹಾದಿಯ ಕಾದನವ.

ಬಂಧನವೆನಿತೇ ದುಸ್ಸಹವಾಗಲಿ
ಹೊಸತೊಂದಾಸೆಯು ಮೊಳೆತಿತ್ತು;
ದಂಪತಿ ಬೆರಗಿನಲೆಣಿಸಿದರೊಮ್ಮೆಗೆ,
ವಿಭು ಮುನ್ನಡೆಸುವನೆನಿಸಿತ್ತು.

ಶ್ರಾವಣ ಬಹುಳದ ಎಂಟರ ತೇದಿಯ
ಕಾರ್ಮುಗಿಲಡರಿದ ನಟ್ಟಿರುಳು
ಶ್ರೀಹರಿಕೃಪೆಯಿಂದಾವಿರ್ಭವಿಸಿತು
ಎಂಟನೆ ಮಗು ತಾ ಶಾಂತಿಯೊಳು.

ಬಿರಿದವು ಕಾರಾಗಾರದ ಕದಗಳು,
ಸರಪಳಿಯೊಡೆಯಿತು ಕತ್ತರಿಸಿ;
ವಸುದೇವನ ಮನ ಪುಳಕದಿ ಜಿಗಿಯಿತು
ಕಂದನ ಬದುಕಿಸಬಹುದೆನಿಸಿ.

ಕುಕ್ಕೆಯೊಳಿಕ್ಕುತ ನಗುತಿಹ ಮಗುವನು
ಕಾಪನು ತಪ್ಪಿಸಿ ಸಾಗಿದನು;
ನೆರೆದುಂಬಿದ ನದಿ ತಾಂಡವವಾಡಿರೆ
ದಾಟುವುದೆಂತದರಾಳವನು?

ಹಸುಳೆಯನೆತ್ತರದಲಿ ಹಿಡಿದನು ಪಿತ
ದೈವದ ನೆರವಿಗೆ ಕಾತರಿಸಿ;
ಹಾದಿಯು ಮೂಡಿತು ನದಿಯೊಳು, ನಂದನ
ಕಡೆಗವ ನುಗ್ಗಿದನಾತುರಿಸಿ.

ನಂದನ ಮಡದಿ ಯಶೋದೆಯು ಹಡೆದಳು
ಹೆಣ್ಣೊಂದನು ಆ ರಾತ್ರಿಯಲಿ;
ಮಕ್ಕಳ ವಿನಿಮಯಗೊಳಿಸಿದ ಶೌರಿಯು
ಮರಳಿದ ಬೆಳಗಾಗುವುದರಲಿ.

ದರ್ಪದ ಕಂಸನು ಕೆಡುಕನೆ ಕಾರುತ
ಬಂದನು ಗೇಲಿಯ ಮಾಡುತಲಿ,
ಮುಷ್ಟಿಯ ಬಾನೆಡೆಗಣಕಿಸಿ ತೋರಿದ,
ಕೈವಶವಾಗಿಹನೆದುರಾಳಿ!

ಹಸುಳೆಯನೊಗೆದನು ಬಲ್ಮೆಯ ಕೂಡಿಸಿ
ಕಣ್ಮರೆಯವಳೋ ಕಿಡಿಯವೊಲು!
ಕೇಡಿಗ ರಾಯನು ಭಯದಲಿ ಬಿಳಿಚಿದ,
ಹಗೆ ಹೊರಗೆಲ್ಲೋ ಬದುಕಿಹುದು!

- ವೆಂಕಟೇಶಪ್ರಸನ್ನ

 

Comments