ಅಕ್ಟೋಬರ್‌ಫೆಸ್ಟ್: ಜನ ಮರುಳೋ ಜಾತ್ರೆ ಮರುಳೋ!

 ಅಕ್ಟೋಬರ್‌ಫೆಸ್ಟ್:  ಜನ ಮರುಳೋ ಜಾತ್ರೆ ಮರುಳೋ!


ಅಕ್ಟೋಬರ್‌ಫೆಸ್ಟ್ ಎನ್ನುವುದು ಜರ್ಮನಿಯ ಮ್ಯೂನಿಕ್ ನಗರದಲ್ಲಿ ಪ್ರತಿ ವರ್ಷ ಸಪ್ಟೆಂಬರ್ ಮೂರನೇ ವಾರಾಂತ್ಯದಿಂದ ಅಕ್ಟೋಬರ್ ಮೊದಲನೇ ವಾರಾಂತ್ಯವನ್ನು ದಾಟುವವರೆಗೆ ನಡೆಯುವ ಒಂದು ಬೃಹತ್ ಜನಜಾತ್ರೆ. ಈ ಎರಡೂವರೆ ವಾರಗಳಲ್ಲಿ ಸುಮಾರು ಐವತ್ತರಿಂದ ಅರವತ್ತು ಲಕ್ಷ ಜನರು ಜರ್ಮನಿಯ ಬೇರೆ ಬೇರೆ ಭಾಗಗಳಿಂದಷ್ಟೇ ಅಲ್ಲದೆ ಪ್ರಪಂಚದೆಲ್ಲೆಡೆಯಿಂದ ಮ್ಯೂನಿಕ್ ನಗರಕ್ಕೆ ಪ್ರವಾಸ ಬಂದು ತಮ್ಮದೇ ಆದ ವಿಶಿಷ್ಟ ರೀತಿಗಳಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಐತಿಹಾಸಿಕ ಮಹತ್ತ್ವವುಳ್ಳ ಮೆರವಣಿಗೆಗಳು, ತಿಂಡಿ-ತಿನಿಸು-ಪಾನೀಯಗಳ ಸೇವನೆ, ಸಂಗೀತ ಮತ್ತು ಮನರಂಜನಾಕ್ರೀಡೆಗಳಿಗೆಲ್ಲ ಹೆಸರುವಾಸಿಯಾಗಿರುವ ಅಕ್ಟೋಬರ್‌ಫೆಸ್ಟ್‌ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಬಿಯರ್ ಮತ್ತು ಮದ್ಯಸೇವನೆಯ ಜಾತ್ರೆಯೆಂಬಂತೆ ಬಿಂಬಿತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಪ್ರತಿವರ್ಷದ ಜಾತ್ರೆಯಲ್ಲೂ ಎಪ್ಪತ್ತರಿಂದ ಎಂಭತ್ತು ಲಕ್ಷ ಲೀಟರ್‌ಗಳಷ್ಟು ಮದ್ಯ ಖರ್ಚಾಗುವುದು ಇದಕ್ಕೆ ಒಂದು ಕಾರಣವಾದರೆ, ಮತ್ತೊಂದು, ಜಗತ್ತಿನಾದ್ಯಂತ ಅಕ್ಟೋಬರ್‌ಫೆಸ್ಟ್ ಹೆಸರಿನಲ್ಲಿ ಮದ್ಯಸೇವನೆಯನ್ನೇ ಕೇಂದ್ರೀಕರಿಸಿಕೊಂಡು ತಲೆಯೆತ್ತಿರುವ ಸ್ಥಳೀಯ ಉತ್ಸವಗಳು. ಆದರೆ ಮ್ಯೂನಿಕ್‌ನ ಅಕ್ಟೋಬರ್‌ಫೆಸ್ಟ್ ಜಾತ್ರೆಗೆ ಹಲವು ಮುಖಗಳುಂಟು. ಈ ಬರಹ ಅವುಗಳನ್ನು ಪರಿಚಯಿಸುವೆಡೆಗೆ ಒಂದು ಪ್ರಯತ್ನ.

 

ಜರ್ಮನಿಯ ಆಗ್ನೇಯ ಭಾಗಕ್ಕಿರುವ ಪ್ರಾಂತ್ಯದ ಹೆಸರು ಬವೇರಿಯಾ. ಒಂದು ಕಾಲಕ್ಕೆ ಇದು ಆಗ್ನೇಯ ಜರ್ಮನಿಯ ಭಾಗಗಳನ್ನಷ್ಟೇ ಅಲ್ಲದೆ ಇಂದಿನ ಆಸ್ಟ್ರಿಯಾದ ಸಾಲ್ಜ್‌ಬರ್ಗ್, ಉತ್ತರ ಟೈರೋಲ್ ಮತ್ತು ಇಟಲಿಯ ಭಾಗವಾಗಿರುವ ದಕ್ಷಿಣ ಟೈರೋಲ್‌ಗಳನ್ನೂ ಸೇರಿಸಿಕೊಂಡಂತಿದ್ದ ಆಲ್ಪೈನ್ ಸಂಸ್ಕೃತಿಯ ಜನಪದ. ಈಗಲೂ ಬವೇರಿಯಾ ನೈಸರ್ಗಿಕವಾಗಿ ಮತ್ತು ಆರ್ಥಿಕವಾಗಿ ಜರ್ಮನಿಯ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲೊಂದು. ಮ್ಯೂನಿಕ್ ಈ ಪ್ರಾಂತ್ಯದ ರಾಜಧಾನಿ. ಬವೇರಿಯಾದ ರಾಜಕುಮಾರ ಒಂದನೇ ಲುಡ್ವಿಗ್ 1810ರಲ್ಲಿ ರಾಜಕುಮಾರಿ ಥೆರೀಸಾಳನ್ನು ಮದುವೆಯಾದ ಸಂದರ್ಭವನ್ನು ವೈಭವದಿಂದ ಆಚರಿಸಿದಾಗ ಆರಂಭವಾದ ಉತ್ಸವವೇ ಅಕ್ಟೋಬರ್‌ಫೆಸ್ಟ್. ಆಗಿನ ರಾಜಮನೆತನ ಮ್ಯೂನಿಕ್ ನಗರದ ಹೊರವಲಯದಲ್ಲಿದ್ದ ಒಂದು ದೊಡ್ಡ ಹುಲ್ಲುಗಾವಲಿನಲ್ಲಿ ನಾಗರಿಕರೆಲ್ಲರನ್ನೂ ಆಹ್ವಾನಿಸಿ ಸಂಭ್ರಮದಿಂದ ಅತಿಥಿಸತ್ಕಾರಕೂಟವೊಂದನ್ನು ಏರ್ಪಡಿಸಿತ್ತು. ಆ ಉತ್ಸವವೇ ಮುಂದೆ ವಾರ್ಷಿಕ ಜಾತ್ರೆಯಾಗಿ ನಡೆದುಕೊಂಡು ಬಂದಿದೆ. ಆ ಹುಲ್ಲುಗಾವಲಿರುವ ಹರವಿಗೆ ರಾಣಿಯ ಗೌರವಾರ್ಥವಾಗಿ "ಥೆರೀಸೆನ್ವೀಸ" (ಥೆರೀಸಾಳ ಹುಲ್ಲುಬಯಲು) ಎಂದೇ ಹೆಸರಿಡಲಾಗಿದ್ದು, ಇಂದಿಗೂ ಇಲ್ಲಿಯೇ ಅಕ್ಟೋಬರ್‌ಫೆಸ್ಟ್ ನಡೆಯುತ್ತದೆ.




ಚಿತ್ರ 1 ಮತ್ತು 2: ಅಕ್ಟೊಬರ್‌ಫೆಸ್ಟ್‌ನ ಮಳಿಗೆಗಳೆದುರು ಓಡಾಡುತ್ತಿರುವ ಪ್ರವಾಸಿಗರು.


 

ಮೊದಲ ಬಾರಿ ನಡೆದ 1810ರ ಉತ್ಸವದಲ್ಲಿ ರಾಜಮನೆತನಕ್ಕೆ ಗೌರವ ಸಲ್ಲಿಸುವ ಕಾರಣದಿಂದ ಬವೇರಿಯಾ ಪ್ರಾಂತ್ಯದ ಎಲ್ಲ ಪಟ್ಟಣಗಳಿಂದಲೂ ಬಂದ ಮಕ್ಕಳ ದಂಡುಗಳು ತಮ್ಮ ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ಮೆರವಣಿಗೆಯ ಪ್ರದರ್ಶನ ನೀಡಿದರೆ, ಅದರ ನಂತರ ಪ್ರಾಂತ್ಯದ ಅತ್ಯುತ್ತಮ ಕುದುರೆಗಳ ಓಟದ ಸ್ಪರ್ಧೆ ಏರ್ಪಟ್ಟಿತ್ತು. ಸ್ಪರ್ಧೆಯ ನಂತರ ಮಕ್ಕಳ ಗಾಯನವಿದ್ದು, ಅದರ ತರುವಾಯ ಊಟೋಪಚಾರಗಳೊಂದಿಗೆ ಕಾರ್ಯಕ್ರಮ ಕೊನೆಗೊಂಡಿತ್ತು. ಮುಂದುವರಿದ ವರ್ಷಗಳಲ್ಲಿ ಈ ಜಾತ್ರೆಯ ರೂಪ ಇನ್ನಷ್ಟು ವೈಶಿಷ್ಟ್ಯಗಳನ್ನು ಸೇರಿಸಿಕೊಂಡು ಬೆಳೆಯಿತು. ಬವೇರಿಯಾ ಪ್ರಾಂತ್ಯದ ರೈತರ ಉತ್ಪನ್ನಗಳ ಪ್ರದರ್ಶನಗಳು ಮತ್ತು ಮಾರಾಟ ಒಂದು ಕಡೆಯಾದರೆ ಜಾತ್ರೆಗೆ ಬರುವ ಕುಟುಂಬಗಳ ಮಕ್ಕಳ ಮನರಂಜನೆಗೆ ಆಟಗಳು, ಸ್ಪರ್ಧೆಗಳು ಮತ್ತು ಸವಾರಿಗಳು ಸೇರಿಕೊಂಡವು. ಆದರೆ ಕುದುರೆಯೋಟದ ಸ್ಪರ್ಧೆಯಂತಹ ಆಟಗಳು ಕಾಲಕ್ರಮೇಣ ಮರೆಯಾದವು. ದಂಡಿನ ಕವಾಯತು ಮತ್ತು ಪ್ರದರ್ಶನ ಮತ್ತು ಮಕ್ಕಳ ಗೀತಗಾಯನಗಳು ಇನ್ನೂರು ವರ್ಷಗಳ ನಂತರವೂ ಇಂದಿಗೂ ಅಕ್ಟೋಬರ್‌ಫೆಸ್ಟ್ ಜಾತ್ರೆಯ ಭಾಗವಾಗಿದ್ದು ಬವೇರಿಯಾ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ. ಇಂದಿಗೂ ಅಕ್ಟೋಬರ್‌ಫೆಸ್ಟ್ ಪ್ರಾರಂಭವಾಗುವ ಮೊದಲ ಶನಿವಾರದಂದು ಎಂಟು ಸಾವಿರದಷ್ಟು ಜನರ ಸುಸಜ್ಜಿತ ತಂಡ ಮ್ಯೂನಿಕ್‌ನ ಒಬ್ಬ ಪುಟ್ಟ ಹುಡುಗ ಅಥವಾ ಹುಡುಗಿಯನ್ನು ಮುಂದಿಟ್ಟುಕೊಂಡು ನಗರದ ಪ್ರಮುಖ ಭಾಗಗಳಲ್ಲಾಗಿ ನಡೆದು ಜಾತ್ರೆ ನಡೆಯುವ ಹುಲ್ಲುಗಾವಲನ್ನು ತಲುಪುತ್ತದೆ. ಇದು ಕೇವಲ ಸಾಂಕೇತಿಕವಾಗಿ ಉಳಿದಿದ್ದರೂ ಜಾತ್ರೆಯ ಮೂಲವನ್ನು ಹುಡುಕುವವರಿಗೆ ಸಹಕಾರಿಯಾಗುತ್ತದೆ ಮತ್ತು ಬವೇರಿಯನ್ನರ ಸ್ವಾಭಿಮಾನಕ್ಕೆ ಕನ್ನಡಿ ಹಿಡಿಯುತ್ತದೆ.

 

ಇನ್ನು ಥೆರೀಸೆನ್ವೀಸ ಮಾಳಕ್ಕೆ ಕಲಶಪ್ರಾಯವಾಗಿರುವುದು ಅದರ ಸಿಂಹಾವಲೋಕನಕ್ಕೆಂದೇ ನಿಲ್ಲಿಸಿರುವಂತಿರುವ ಬವೇರಿಯಾ ಪ್ರಾಂತ್ಯವನ್ನೇ ಮೂರ್ತಿವೆತ್ತ ಕಲಾಕೃತಿ - ಮಾತೆ "ಬವೇರಿಯಾ". ಈ ಮೂರ್ತಿ ಅರವತ್ತು ಅಡಿಗೂ ಎತ್ತರವಿದ್ದು, ಕಂಚಿನ ಎರಕ ಹೊಯ್ದು ತಯಾರಿಸಿದ ಜಗತ್ತಿನ ಅತಿ ದೊಡ್ಡ ಮೂರ್ತಿಗಳಲ್ಲೊಂದು. ಅರವತ್ತು ಅಡಿಯ ಕಂಚಿನ ಮೂರ್ತಿಗೆ 28 ಅಡಿಯ ಅಡಿಗಲ್ಲು ಸಹ ಇದ್ದು ವಾಸ್ತವಿಕವೇ ಏನೋ ಎನಿಸುವಂತಿರುವ ಸಿಂಹವೊಂದರೊಡನೆ ನಿಂತಿರುವ ಈ ಪ್ರತಿಮೆ ನಯನಮನೋಹರವಾಗಿದೆ. ಈ ಮೂರ್ತಿ ಮತ್ತು ಅದರ ಹಿಂಭಾಗದಲ್ಲಿ ಡೋರಿಕ್ ದೇಗುಲಗಳ ರೀತಿಯಲ್ಲಿ ಕಟ್ಟಲ್ಪಟ್ಟಿರುವ ಕೀರ್ತಿಭವನ (ಹಾಲ್ ಆಫ್ ಫೇಮ್) ರಾಜ ಲುಡ್ವಿಗ್‌ನ ಕಲ್ಪನಾವಿಲಾಸ. ವಾಸ್ತುಶಿಲ್ಪಿ ಲಿಯೋ ವಾನ್ ಕ್ಲೆಂತ್ಸೆ ಪ್ರಸ್ತಾಪಿಸಿದ ಬವೇರಿಯಾ ಮೂರ್ತಿಯ ವಿನ್ಯಾಸವು ಅನುಮೋದನೆ ಪಡೆದದ್ದು 1834ರಲ್ಲಿ. ನಂತರ ಶಿಲ್ಪಿ ಲುಡ್ವಿಗ್ ಮೈಕಲ್ ಶ್ವಾಂಥಾಲೆರ್ ತಯಾರಿಸಿದ ಮಾದರಿಯನ್ನು ಎರಕ ಹೊಯ್ದು ಸಿದ್ಧಗೊಳಿಸಿದ್ದು ಫರ್ಡಿನೆಂಡ್ ವಾನ್ ಮಿಲ್ಲರ್. ಸಂಪೂರ್ಣ ರಚನೆ ಮುಗಿದು ಥೆರೀಸೆನ್ವೀಸದಲ್ಲಿ "ಬವೇರಿಯಾ" ಮೂರ್ತಿ ಪ್ರತಿಷ್ಠಾಪಿತವಾಗಿದ್ದು 1850ರಲ್ಲಿ. ಅಷ್ಟು ಎತ್ತರದ ಮೂರ್ತಿಯಾಗಿರುವುದರಿಂದ ಅದನ್ನು ಸುಸ್ಥಿತಿಯಲ್ಲಿರಿಸಿ ರಕ್ಷಿಸಲು ಮತ್ತು ಆಗಾಗ ಪರೀಕ್ಷಿಸಲು ಅನುಕೂಲವಾಗುವಂತೆ ಒಳಗಿನ ಭಾಗವನ್ನು ಸ್ವಲ್ಪ ಟೊಳ್ಳಾಗಿರಿಸಿ ಅಲ್ಲಿಯೇ ವೃತ್ತಾಕಾರದ ಮೆಟ್ಟಿಲುಗಳನ್ನೂ ಆಗಿನ ಕಾಲದಲ್ಲೇ ನಿರ್ಮಿಸಿರುವುದು ಆಶ್ಚರ್ಯಕರ.



ಚಿತ್ರ 3: ಥೆರೀಸನ್ವೀಸ ಮಾಳದ ಕೀರ್ತಿಭವನದ ಮುಂಭಾಗದಲ್ಲಿ ಬವೇರಿಯಾ ಮೂರ್ತಿ.


 

ಬವೇರಿಯಾ ಮೂರ್ತಿಯ ಹಿಂಭಾಗದ ಕೀರ್ತಿಭವನವನ್ನು ಅಂದಿನಿಂದ ಇಂದಿನವರೆಗೂ ಪ್ರಾಂತ್ಯಕ್ಕೆ ಮಹೋನ್ನತ ಕೊಡುಗೆ ನೀಡಿದವರ ಪುತ್ಥಳಿಗಳನ್ನಿರಿಸಲು ನಿರ್ಮಿಸಲಾಗಿದೆ. ಅಂತಹ ಮಹನೀಯರನ್ನು ಗೌರವಿಸಲೆಂಬಂತೆ ಬವೇರಿಯಾ ಮೂರ್ತಿಯು ತನ್ನ ಎಡಗೈಯಲ್ಲಿ ಓಕ್ ಮರದ ಎಲೆಗಳಿಂದ ತಯಾರಿಸಿದ ಕಿರೀಟಿಕೆಯನ್ನು ಹಿಡಿದುಕೊಂಡಿರುವಂತೆ ಚಿತ್ರಿಸಲಾಗಿದೆ.



ಚಿತ್ರ 4: ಬವೇರಿಯಾ ತಾಯಿಯ ಭವ್ಯ ಕಂಚಿನ ಮೂರ್ತಿ.


 

ಥೆರೀಸೆನ್ವೀಸ ಮಾಳದಲ್ಲಿ ಅಕ್ಟೋಬರ್‌ಫೆಸ್ಟ್ ಜಾತ್ರೆಯ ಸಂದರ್ಭದಲ್ಲಿ ಹತ್ತು ಹಲವು ರೀತಿಯ ಸವಾರಿಗಳು ಮತ್ತು ಸ್ಪರ್ಧೆಗಳು ಸಾಮಾನ್ಯ. ಭಾರತದ ಹಳ್ಳಿ ಹಳ್ಳಿಗಳಲ್ಲೂ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಂಭ್ರಮಕ್ಕೂ ಇಲ್ಲಿನ ಸಂಭ್ರಮಕ್ಕೂ ಹೆಚ್ಚೇನೂ ವ್ಯತ್ಯಾಸ ಕಾಣದು. ಆದರೂ ಅಲ್ಲಿನ ಮಳಿಗೆಗಳು, ಸವಾರಿಗಳು ಮತ್ತು ಆಟಗಳ ವೈವಿಧ್ಯ ಬೇರೊಂದು ಲೋಕಕ್ಕೆ ಕರೆದೊಯ್ದರೆ ಆಶ್ಚರ್ಯವಿಲ್ಲ. "ಜನ ಮರುಳೋ ಜಾತ್ರೆ ಮರುಳೋ" ಎಂಬ ಕನ್ನಡದ ಗಾದೆಗೆ ಅಕ್ಟೋಬರ್‌ಫೆಸ್ಟ್ ಅನ್ವರ್ಥವೆನಿಸಿದರೂ ವಿಶೇಷವೇನಲ್ಲ. ಗಗನಚುಂಬಿ ರಾಟವಾಳಗಳು, ಹಲವು ದಿಕ್ಕುಗಳಲ್ಲಿ ವೇಗದಿಂದ ತಿರುಗುವ ರೈಲುಗಳು, ಗಿರಕಿತೊಟ್ಟಿಲುಗಳು, ನೀರಿನ ಜಾರುಬಂಡೆಗಳು, ರೋಮಾಂಚನಗೊಳಿಸುವ ಆಟದ ಗುಹೆಗಳು, ಸ್ಪರ್ಧೆಯ ಕಟ್ಟೆಗಳು, ಕೀಲುಬೊಂಬೆಯಾಟ, ಇವುಗಳ ಮಧ್ಯೆಯೇ ಹಲವು ತಿಂಡಿ ತಿನಿಸುಗಳ ಮಳಿಗೆಗಳು - ಇಷ್ಟೆಲ್ಲದರ ಜೊತೆಗೆ ಅಕ್ಟೋಬರ್‌ಫೆಸ್ಟ್ ಹೆಸರುವಾಸಿಯಾಗಲು ಪ್ರಮುಖ ಕಾರಣವಾದ "ಬಿಯರ್ ಗಾರ್ಡನ್" ಬಿಡಾರಗಳು.



ಚಿತ್ರ 5: ಇಡೀ ಅಕ್ಟೊಬರ್‌ಫೆಸ್ಟ್‌ ಮಾಳದಲ್ಲಿ ಎದ್ದು ಕಾಣುವ ಬೃಹತ್ ರಾಟವಾಳದ ಸವಾರಿ.




ಚಿತ್ರ 6: ಮಕ್ಕಳನ್ನು ಆಕರ್ಷಿಸುವ ಪುಟ್ಟ ರೈಲು ಸವಾರಿ.




ಚಿತ್ರ 7: ರೋಮಾಂಚನ ಹುಟ್ಟಿಸುವ ದೆವ್ವದ ಕೋಟೆಯ ಆಟದ ಮಳಿಗೆ.




ಚಿತ್ರ 8: ಮಿಂಚಿನ ವೇಗದಲ್ಲಿ ಗರಗರ ತಿರುಗುವ ಗಿರಕಿತೊಟ್ಟಿಲುಗಳು.


 

ಈ ಜಾತ್ರೆಯ ಪ್ರಮುಖ ಆಕರ್ಷಣೆ ವಿಷಯಾಸಕ್ತಿಯ ವಿಲಾಸವೇ ಎಂದೆನಿಸಿದರೂ, ತಿಂದು ಕುಡಿದು ಮೋಜು ಮಾಡುವುದೇ ಈ ಜಾತ್ರೆಯ ಉದ್ದೇಶವೆಂದು ತಿಳಿದ ಇಂದಿನ ಪೀಳಿಗೆಯ ಹಲವರು ಆ ಕಾರಣಕ್ಕಾಗಿಯೇ ಭೇಟಿ ನೀಡುವುದು ಸಾಮಾನ್ಯವಾಗಿದ್ದರೂ, ಬವೇರಿಯಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಹಲವು ಸ್ಥಳೀಯರು ತಮ್ಮ ಮುಂದಿನ ಪೀಳಿಗೆಗೆ ತಮ್ಮತನವನ್ನು ಕೈದಾಟಿಸುವ ಪ್ರಯತ್ನದಲ್ಲಿರುವುದನ್ನೂ ಇಲ್ಲಿ ಕಾಣಬಹುದು. ಮಕ್ಕಳನ್ನಾಕರ್ಷಿಸುವ ಆಟಗಳು ಮತ್ತು ಮಳಿಗೆಗಳಿಗೆ ಬೆಳಗಿನ ಸಮಯದಲ್ಲೇ ಕುಟುಂಬ ಸಮೇತರಾಗಿ ಬಂದು ಮಕ್ಕಳೊಂದಿಗೆ ಆಟವಾಡಿ ನಲಿಯುವುದು ಸ್ಥಳೀಯರಲ್ಲಿ ಸಾಮಾನ್ಯ. ಸಂಜೆಯಾಗತೊಡಗಿದಂತೆ ಮೋಜಿನ ಜನ ಹೆಚ್ಚಾಗುವುದರಿಂದ ಮಕ್ಕಳನ್ನು ಕರೆತರುವವರು ಬೆಳಗಿನಲ್ಲಿಯೇ ಭೇಟಿ ನೀಡುವುದು ಅನಿವಾರ್ಯ. ಅಂತಹ ಹೊತ್ತಿನಲ್ಲಿ ನೋಡಿದರೆ ಯಾವುದೇ ಊರಿನ ಸುಂದರ ಜಾತ್ರೆಯ ವಾತಾವರಣ ಸೃಷ್ಟಿಯಾಗಿರುವುದನ್ನು ಗುರುತಿಸುವುದು ಸುಲಭ. ಅಷ್ಟೇ ಅಲ್ಲದೆ ಸ್ಥಳಿಯರಿಗೆ ತಮ್ಮ ಸಾಂಪ್ರದಾಯಿಕ ಉಡುಗೆಗಳನು ತೊಡಲು ಇದೊಂದು ಸುವರ್ಣಾವಕಾಶ. ಗಂಡಸರು ಲೇಡರ್‌ಹೋಸನ್ ಎನ್ನುವ ಮಂಡಿಯವರೆಗೆ ಬರುವ ಚರ್ಮದ ಪ್ಯಾಂಟುಗಳನ್ನೂ, ಕೋಟನ್ನೂ ಧರಿಸಿದರೆ, ಹೆಂಗಸರು ಡಿರ್ನ್ಡಲ್ ಎಂದು ಕರೆಯಲಾಗುವ ಸಾಂಪ್ರದಾಯಿಕ ಕುಪ್ಪಸ, ಲಂಗ ಮತ್ತು ಮೇಲುಡುಪುಗಳನ್ನು ಧರಿಸಿ ಸಂಭ್ರಮಿಸುತ್ತಾರೆ.



ಚಿತ್ರ 9: ಸಾಂಪ್ರದಾಯಿಕ ಲೇಡರ್‌ಹೋಸನ್ ಮತ್ತು ಡಿರ್ನ್ಡಲ್ ಧರಿಸಿ ಅಕ್ಟೊಬರ್‌ಫೆಸ್ಟ್‌ಗೆ ಭೇಟಿ ನೀಡಿ ವಾಪಸಾಗುತ್ತಿರುವ ಜೋಡಿ.


 

ಮದ್ಯಪಾನದಿಂದ ಆಗುವ ಅನಾಹುತಗಳನ್ನು ಬಿಡಿಸಿ ಬೇರೆ ಹೇಳಬೇಕಿಲ್ಲ. ಇನ್ನು ಅದಕ್ಕೆಂದೇ ನಿಯತಗೊಳಿಸಿರುವ "ಬಿಯರ್ ಗಾರ್ಡನ್" ಬಿಡಾರಗಳನ್ನು ಹತೋಟಿಯಲ್ಲಿಡುವುದು ಬಹಳ ಮುಖ್ಯ. ಇದು ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬಂದಿರುವ ಸಾಂಪ್ರದಾಯಿಕ ಉತ್ಸವವಾದ್ದರಿಂದ ಪ್ರತಿ ವರ್ಷ ಉತ್ಸವಕ್ಕೆ ಮುನ್ನವೇ ಮ್ಯೂನಿಕ್ ನಗರದ ಸಂಬಂಧಪಟ್ಟ ಅಧಿಕಾರಿಗಳು, ಪೌರಸಂಸ್ಥೆಯ ಹಲವು ಇಲಾಖೆಗಳ ಕಾರ್ಮಿಕರು ಬೆವರು ಸುರಿಸಿ ದುಡಿದು ಯಾವ ತೊಂದರೆಯಿಲ್ಲದೆ ಈ ಬೃಹತ್ ಜನಜಾತ್ರೆ ಸಾಗುವಂತೆ ನೋಡಿಕೊಳ್ಳುತ್ತಾರೆ. ಕಳೆದೆರಡು ವರ್ಷಗಳು ಕೋವಿಡ್ ಕಾರಣದಿಂದಾಗಿ ರದ್ದಾಗಿದ್ದ ಅಕ್ಟೋಬರ್‌ಫೆಸ್ಟ್ 2022ರಲ್ಲಿ ಮತ್ತೆ ಆಯೋಜಿತಗೊಂಡಿರುವುದು ಸ್ಥಳೀಯರಿಗೆ ಸಂತಸ ತಂದಿದ್ದರೆ ಆಶ್ಚರ್ಯವಿಲ್ಲ.


Comments