An attempt at translating Thomas Campion's poem to Kannada - "The Man of Life Upright":
ನೀತಿವಂತ ಮಾನವ
ನೀತಿವಂತನಾಗಿ ನಡೆವ ನರನ ಬದುಕೆ ಸುಂದರ,
ಹರುಷ ತುಂಬಿದವನ ಮನಸು ನಿರಾತಂಕ ಹಂದರ.
ಪಾಪಕರ್ಮಋಣದ ಭಾರದಿಂದಲವನು ಲುಪ್ತನು,
ದುರಭಿಮಾನವೆಂಬ ನೊಗದ ದಾಸ್ಯದಿಂದ ಮುಕ್ತನು.
ತನ್ನ ಬಾಳ ನೀರವತೆಯನವನು ಕಳೆವನನುದಿನ,
ಹೆರರಿಗಾವ ಕೇಡು ತರದ ಚಿದಾನಂದ ಚೇತನ.
ತನ್ನ ನಂಬಿಕೆಗಳ ನೆಚ್ಚಿ ಅವನು ಮರುಳನಾಗನು,
ಶೋಕವೆಷ್ಟೆ ಇದ್ದರೇನು? ನಿರುತ್ಸಾಹವಿಣುಕದು.
ಬೇಡವವನಿಗಾವ ಕೋಟೆ ಕೊತ್ತಲಗಳ ರಕ್ಷಣೆ
ಅವನ ಕಾಪಿಗೇಕೆ ಬೇಕು ಕವಚ ಹರಿಗೆ ಮಾರ್ಗಣೆ?
ದುರಿತಗಳನು ಹುದುಗಿಸಿಡುವ ಗೊಡವೆಯಿಲ್ಲವವನಿಗೆ
ಮನದೊಳಿಲ್ಲ ಸಿಡಿಲಿನಂತೆ ಕುತ್ತೆರಗುವ ಹೆದರಿಕೆ.
ಗಹ್ವರದೊಲು ಗಹನವಿರುವ ದಿಗಿಲು ಎಲ್ಲೆ ಮೀರಲಿ!
ಮುಗಿಲಿನಿಂದ ಬರ್ಬರತೆಯೆ ಮೇಲೆ ಬಿದ್ದು ಮೆರೆಯಲಿ!
ದಿಟ್ಟಿಸುತ್ತಲವನು ನೋಡಬಲ್ಲ ಗಟ್ಟಿ ಮನದಲಿ,
ಭಯವೆಂಬುದನರಿಯನವನು ತೊಡಕದೇನೆ ಸುಳಿಯಲಿ.
ತೃಣಸಮಾನವವನಿಗಿಹದ ಕೊರಗು, ಚಿಂತೆ, ತಳಮಳ.
ವಿಧಿಯ ದೆಸೆಯೊ ಹಣೆಬರಹವೊ - ಅವನಿಗಿಲ್ಲ ಕಳವಳ.
ದೈವದೆಡೆಗೆ ಚಿತ್ತವದುವೆ ವೇದವಾಕ್ಯವವನಿಗೆ,
ಪಾರಮಾರ್ಥಿಕತೆಯ ಮರ್ಮವವನ ತಿಳಿವಿಗಾಸರೆ.
ಅವನು ಬಯಸುವೊಳಿತುಗಳೇ ಅವನ ಗೆಳೆಯರೆನ್ನಿರಿ!
ತುಂಬು ಬಾಳಿನವನ ಬದುಕೆ ಅವನು ಗಳಿಸಿದೈಸಿರಿ.
ಗಳಿಗೆ ನೆಲೆಸಿ ದಣಿವ ನೀಗಿ ನಡೆವ ಸತ್ರವೀ ಧರೆ,
ಅವನಿಗಿದೋ ತೀರ್ಥಯಾತ್ರೆ, ಮನಕೆ ನೆಮ್ಮದಿಯ ಸೆಲೆ.
- ವೆಂಕಟೇಶಪ್ರಸನ್ನ
Comments