ಹೀಗೊಂದು ಆಲೋಚನೆ

ನೆನ್ನೆ ಸಂಜೆ ಒಂದಷ್ಟು ಹೊತ್ತು ವಿದ್ಯುತ್ ಅಡಚಣೆಯುಂಟಾದಾಗ ಮನೆಯಿಂದ ಹೊರಬಂದು ನೋಡಿದೆ. ಸಲ್ಪ ಹೆಚ್ಚೇ ಕತ್ತಲು ಕವಿದ ಹಾಗಿತ್ತು. ಲಾಕ್‌ಡೌನ್‌ನಿಂದಾಗಿ ರಸ್ತೆಯಲ್ಲಿ ಹೆಚ್ಚು ವಾಹನಗಳೂ ಇರಲಿಲ್ಲ; ಒಂದೆರಡು ಗಂಟೆಗಳ ಮುಂಚೆ ಬಂದ ಭಾರೀ ಮಳೆಯಿಂದಾಗಿ ಜನರೂ ಮನೆ ಸೇರಿದ್ದರೇನೋ, ಕಾಲುದಾರಿಗಳೂ ನಿರ್ಜನವಾಗಿದ್ದವು. ಸುತ್ತಮುತ್ತಲಿನ ಮನೆಯ ಜನರೂ ತಮ್ಮ ತಮ್ಮ ಮನೆಯೊಳಗೆ ಸೇರಿದ್ದರು. ಈ ಬೆಳಕು, ಶಬ್ದ ಎರಡೂ ಇಲ್ಲದ ವಾತಾವರಣ ಬೆಂಗಳೂರಿನ ಮಟ್ಟಕ್ಕೆ ಅಪರೂಪವೇ. ಸುಮಾರು ಒಂದು ೧೫ - ೨೦ ನಿಮಿಷಗಳಷ್ಟು ಕಾಲ - ವಿದ್ಯುಚ್ಛಕ್ತಿ ಪೂರೈಕೆ ಮತ್ತೆ ಆರಂಭವಾಗುವುದರೊಳಗೆ - ನಮ್ಮ ಮನೆಯ ಆವರಣದಿಂದಲೇ ಈ ಪ್ರಶಾಂತ ಪರಿಸರದಲ್ಲಿ ನಿಂತು ಹೊರನೋಡುತ್ತಿದ್ದಾಗ ಮನಸ್ಸಿನಲ್ಲಿ ಒಂದಷ್ಟು ವಿಚಾರಗಳು, ನೆನಪುಗಳು ಮಿಂಚಿ ಹೋದವು.
 
ಚಿಕ್ಕಂದಿನಲ್ಲಿ ಸಣ್ಣ ಊರೊಂದರಲ್ಲಿ ವಿದ್ಯಾರ್ಥಿಯಾಗಿ ಬೆಳೆಯುತ್ತಿದ್ದಾಗ ಇಂತಹ ವಿದ್ಯುತ್ ಅಡಚಣೆಗಳು ಸಾಮಾನ್ಯವಾಗಿತ್ತು. ಆಗೆಲ್ಲಾ ಚಾರ್ಜ್‌ಲೈಟುಗಳಾಗಲೀ ಬ್ಯಾಟರಿ-ಇನ್‌ವರ್ಟರ್‌ಗಳಾಗಲೀ ಇಷ್ಟೊಂದು ಹಾಸುಹೊಕ್ಕಾಗಿರಲಿಲ್ಲ. ಮಧ್ಯಮವರ್ಗದ ಜನರಿಗೆ ಅವುಗಳನ್ನು ಕೊಂಡುತಂದು ಬಳಸುವ ಶಕ್ತಿಯೂ ಇರಲಿಲ್ಲವೆನ್ನೋಣ. ಅಷ್ಟೇ ಅಲ್ಲದೆ ಈ ವಿದ್ಯುತ್ ಅಡಚಣೆಗಳನ್ನೂ ಜೀವನದ ಒಂದು ಭಾಗವನ್ನಾಗಿ ಸ್ವೀಕರಿಸಿಬಿಟ್ಟಿದ್ದರು ಜನ. ಕೆಲವೊಮ್ಮೆ ಸಂಜೆಯ ಹೊತ್ತು ಗಂಟೆಗಟ್ಟಲೆ ವಿದ್ಯುತ್ ಇರುತ್ತಿರಲಿಲ್ಲ. ಆಗ ಒಮ್ಮೊಮ್ಮೆ ಸಂಬಂಧಪಟ್ಟವರನ್ನು ಶಪಿಸಿದ್ದಿದ್ದರೂ, ಆ ಕ್ಷಣಗಳಿಗೂ ಒಂದು ಸೊಬಗಿತ್ತೇನೋ ಎಂದು ಈಗ ಅನ್ನಿಸುತ್ತದೆ. ಆಗೆಲ್ಲಾ ಸಂಜೆ ಹೊತ್ತು ವಿದ್ಯುತ್ ಸಂಚಾರ ನಿಂತುಹೋದಾಗ ನಮಗಿದ್ದ ಆಯ್ಕೆಗಳು ಎರಡು:
 
೧. ಶಾಲೆಯಲ್ಲಿ ಕೊಟ್ಟಿರುವ ಮನೆಗೆಲಸ ಮಾಡಿ ಮುಗಿದಿಲ್ಲದಿದ್ದರೆ, ಅಥವಾ ಇನ್ನು ಕೆಲವು ದಿನಗಳಲ್ಲೇ ಯಾವುದಾದರೂ ಪರೀಕ್ಷೆ ಬರುವುದಿದ್ದರೆ ಆಗ ಬೇರೆ ಗತಿಯೇ ಇಲ್ಲ. ದೀಪದ ಬುಡ್ಡಿ ಹಚ್ಚಿಕೊಂಡು ಓದು-ಬರಹ ಮುಂದುವರೆಸಲೇಬೇಕಾಗಿತ್ತು. "ಸೊಸೈಟಿ" ಎಂದು ಕರೆಸಿಕೊಳ್ಳುತ್ತಿದ್ದ ನ್ಯಾಯಬೆಲೆ ಅಂಗಡಿಯಿಂದ ತಿಂಗಳಿಗೊಮ್ಮೆ ತರುತ್ತಿದ್ದ ನೀಲಿ ಬಣ್ಣದ ಸೀಮೆ ಎಣ್ಣೆ ಬಳಸಿ ಉರಿಸುತ್ತಿದ್ದ ಎರಡು ಚಿಮಣಿ ಬುಡ್ಡಿಗಳ ಮಹತ್ವ ಹೆಚ್ಚೇ ಇತ್ತು. ಒಂದು ಬುಡ್ಡಿಯನ್ನು ಹಚ್ಚಿ ಮನೆಯ ಮಧ್ಯೆ ಎಲ್ಲರಿಗೂ ಬೆಳಕಾಗುವಂತೆ ಇಟ್ಟರೆ ಇನ್ನೊಂದನ್ನು ಅಡುಗೆ ಮನೆಯಲ್ಲಿ ಬಳಸಲಾಗುತ್ತಿತ್ತು. ಮನೆಯ ಮಧ್ಯದ ಬುಡ್ಡಿಯ ಸಹಾಯದಲ್ಲೇ ನನ್ನ ಓದು. ಮಧ್ಯೆ ಬೇಜಾರಾದಾಗ ಅದರ ಬೆಳಕಲ್ಲೇ ಏನಾದರೂ ಚಿತ್ರ ಗೀಚುವುದೋ ಅಥವಾ ಆ ಚಿಮಣಿಯ ಬೆಳಕಿಗೆ ಕೈಗಳನ್ನು ಅಡ್ಡ ಹಿಡಿದು ಒಂದಷ್ಟು ಪ್ರಾಣಿ ಪಕ್ಷಿಗಳ ನೆರಳಿನ ಚಿತ್ರಗಳನ್ನು ಮೂಡಿಸಿ ಆನಂದಿಸಿ ಮತ್ತೆ ಓದಿಗೆ ಮರಳಬೇಕಾಗಿತ್ತು. ಅದೇ ಒಂದು ಖುಷಿ, ಆಗಿನ ಕಾಲಕ್ಕೆ. ವಿದ್ಯುತ್ ಅಡಚಣೆ ಎಂದರೆ ಮನೆಯ ಮಂದಿಗೂ ಒಂದು ರೀತಿಯ ಬಿಡುವು ಸಿಕ್ಕಂತೆ. ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡಲು ಅವಕಾಶವೂ ಸಿಕ್ಕಂತಾಗುತ್ತಿತ್ತು. ಕೆಲವು ಮನೆಗಳಲ್ಲಿ ಈ ಬಿಡುವು ಹಾಡು-ಹಸೆ ಇವುಗಳಿಗೂ ಮೀಸಲಿರುತಿತ್ತು.
 
೨. ಇನ್ನು ಎರಡನೆಯದಾಗಿ, ಕೊಟ್ಟ ಮನೆಗೆಲಸಗಳು ಮುಗಿದಿದ್ದು ಆತುರಾತುರವಾಗಿ ಓದಿ ಮುಗಿಸಬೇಕಾದದ್ದೇನೂ ಇಲ್ಲದಿದ್ದರೆ ಆಗ ಮನೆಯಿಂದ ಹೊರಬಂದು ಅಥವಾ ಮನೆಯ ತಾರಸಿಯ ಮೇಲೆ ಹೋಗಿ ಈ ಕತ್ತಲಿನ ಸಂದರ್ಭದಲ್ಲಿ ಆಗಸದ ತಾರೆ-ಗ್ರಹಗಳನ್ನು ನೋಡಿ, ಗುರುತಿಸಿ ಆನಂದಿಸುವ ಅವಕಾಶವಿರುತ್ತಿತ್ತು. ಈ ವಿದ್ಯುತ್ ಅಡಚಣೆ ಪ್ರತಿದಿನದ ವಿಷಯವಾಗಿದ್ದರಿಂದ ದಿನವೂ ಒಂದಷ್ಟು ಹೊತ್ತು ಆಗಸವನ್ನು ನೋಡಿ ಆ ತಾರೆ ನೆನ್ನೆ ಎಲ್ಲಿತ್ತು, ಇವತ್ತು ಎಲ್ಲಿಗೆ ಬಂದಿದೆ, ನಾಳೆ ಎಲ್ಲಿರಬಹುದು ಎಂದೆಲ್ಲಾ ಎಣಿಕೆ ಮಾಡವುದೂ ಒಂದು ಆಟ. ಗುರು-ಶುಕ್ರ-ಶನಿ-ಮಂಗಳ ಗ್ರಹಗಳು ಕಾಣುವಂತಿದ್ದರೆ ಅವುಗಳನ್ನು ಚಂದ್ರನಿಗೆ ಹೋಲಿಸಿ ದಿನದಿನಕ್ಕೂ ಹೇಗೆ ಸಾಗುತ್ತಿವೆ ಎಂಬುದನ್ನು ಕುತೂಹಲದಿಂದ ನೋಡುವುದೂ ನಡೆಯುತ್ತಿತ್ತು. ಎಂದಾದರೊಮ್ಮೆ ಆ ಕಡುಗತ್ತಲೆಯಲ್ಲಿ ಬಹಳ ಎತ್ತರದಲ್ಲಿ ಬೆಳಕನ್ನು ಮಿನುಗಿಸುತ್ತಾ ವಿಮಾನವೊಂದು ಹಾದು ಹೋಗುವುದನ್ನು ಕಂಡಾಗ ಅದಿನ್ನು ಕಾಣುವುದೇ ಇಲ್ಲ ಎಂಬಷ್ಟು ದೂರದವರೆಗೂ ಅದರ ಮಿನುಗನ್ನು ನೋಡುತ್ತಾ ನಿಂತದ್ದಿದೆ. ಇನ್ನು ಕೆಲವೊಮ್ಮೆ ಮಿಂಚು ಹುಳುಗಳು ಹಾರಿ ಹೋಗುವುದನ್ನು ಕಂಡು ಪುಳಕದಿಂದ ನಲಿದಾಡಿದ್ದಿದೆ. ಹಾಗೆಯೇ ಮನೆಯ ಹಿರಿಯರಿಗೂ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಬೇಜಾರಾಗಿದ್ದರೆ ಹೊರಗೆ ಬಂದು ಜಗಲಿಯ ಮೇಲೆ ಕುಳಿತು ಪಕ್ಕದ, ಎದುರು ಮನೆಯವರೊಡನೆ ಕಷ್ಟ-ಸುಖ ಹಂಚಿಕೊಳ್ಳುವುದೂ ಸಾಮಾನ್ಯವಾಗಿತ್ತು. ಯಾವ ಕೃತಕ ಬೆಳಕಿಲ್ಲದ, ಬೇರೆ ಶಬ್ದವಿಲ್ಲದ, ಕೇವಲ ಬೆಳದಿಂಗಳ ಹರಹಿನಲ್ಲಿ ಮನೆಯವರೆಲ್ಲಾ ಮಾತನಾಡುತ್ತಾ ಕೂರುವುದು ಆಗಿನ ಅಲ್ಪತೃಪ್ತಿಯ ಮತ್ತು ನೆಮ್ಮದಿಯ ಬದುಕಿಗೆ ಹಿಡಿದ ಕನ್ನಡಿಯಂತಿರುತ್ತಿತ್ತು.
 
ಈಗಿನ ಪರಿಸ್ಥಿತಿಗೆ ಇದನ್ನು ಹೋಲಿಸಿ ನೋಡಿದರೆ ಇಂದಿನ ನಿರೀಕ್ಷಣೆಗಳೂ ಹೆಚ್ಚಾಗಿವೆ, ನಗರಗಳಲ್ಲಿ ನಮ್ಮ ಜೀವನ ಶೈಲಿಯೂ ಬದಲಾಗಿದೆ. ನಗರಗಳಲ್ಲಷ್ಟೇ ಅಲ್ಲ, ಈಗ ಸಣ್ಣ ಊರುಗಳಲ್ಲಿಯೂ, ಹಳ್ಳಿಗಳಲ್ಲಿಯೂ ಮೂಲಸೌಕರ್ಯಗಳು ಉತ್ತಮವಾಗುತ್ತಲೇ ಬಂದಿವೆ. ಹಾಗೆ ಆದಾಗ ನಮ್ಮ ಜೀವನವನ್ನು ತೀರಾ ಹೆಚ್ಚಾಗಿಯೇ ಯಾಂತ್ರೀಕರಿಸಿಕೊಂಡುಬಿಟ್ಟೆವೇನೋ ಎಂಬ ಯೋಚನೆಯಾದರೂ ಒಮ್ಮೊಮ್ಮೆ ಮನಸ್ಸಿನಲ್ಲಿ ಸುಳಿದಾಡದಿದ್ದರೆ ನಾವೆಲ್ಲೋ ಎಡವುತ್ತಿದ್ದೇವೆಂಬ ಭಾವನೆ ನನಗಾದರೂ ಬರುತ್ತದೆ.
 
ಡಿವಿಜಿಯವರು ಹಲವಾರು ದಶಕಗಳ ಹಿಂದೆಯೇ ತಮ್ಮ "ಋತ ಸತ್ಯ ಧರ್ಮ" ಕೃತಿಯಲ್ಲಿ ಹೇಳಿರುವಂತೆ ಜನರಿಗೆ ಈಗ "ಎಲ್ಲವೂ ಯಾಂತ್ರಿಕವಾಗಬೇಕು. ಗುಂಡಿ ಒತ್ತಿದರೆ ಸ್ವರ್ಗ, ಕೀಲು ತಿರುಗಿಸಿದರೆ ಮೋಕ್ಷ. ಕಾಲಸ್ಥಿತಿ ಹೀಗಿರುವಾಗ ಮೈಗೆ ನೀರು ಸೋಕಿಸಿ ಕಷ್ಟಪಡಿಸುವುದು ಅನಾಗರಿಕತೆ, ಅವಿಜ್ಞಾನ...". ಈ ಯಾಂತ್ರೀಕರಣ ನಮಗೆ ಕಷ್ಟಸಾಧ್ಯವಾದ ಕೆಲಸಗಳನ್ನು ಸುಲಭ ಮಾಡಿಕೊಟ್ಟು ಅಲ್ಲಿ ಉಳಿಸಿದ ಸಮಯವನ್ನು ಸೃಜನಶೀಲವಾಗಿ ಕಳೆಯುವತ್ತ ಸಹಾಯ ಮಾಡಬೇಕಾಗಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. "ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡುದಾರಕ್ಕೆ" ಎಂಬ ಗಾದೆಯಂತೆ ಯಂತ್ರಗಳ ಮತ್ತು ಮನೆ ಬಾಗಿಲಿಗೆ ಬೇಕಾದ್ದನ್ನು ತಂದೊದಗಿಸುವ ಸೇವೆಗಳ ಸಹಾಯದಿಂದ ಉಳಿಸಿದ ಸಮಯವನ್ನೆಲ್ಲಾ ಹೆಚ್ಚಿನವರು ಉಪಯೋಗವಿಲ್ಲದ "ಈಗಿನ ಕಾಲದ ಚಟ"ಗಳಿಗೆ ಧಾರೆ ಎರೆಯುತ್ತಿರುವಂತಿದೆ. ಇದಕ್ಕೆ ನಾನೇನೂ ಹೊರತಾಗಿಲ್ಲ. ಆದರೆ ಇದನ್ನು ಒಮ್ಮೊಮ್ಮೆಯಾದರೂ ಮೆಲುಕು ಹಾಕುವ ಮನಸ್ಥಿತಿ ನಮ್ಮಲ್ಲಿದ್ದರೆ ಅದರಿಂದ ಹೊರಬರುವ ಸಾಧ್ಯತೆಯನ್ನು ಕಾಪಾಡಿಕೊಳ್ಳಬಹುದೇನೋ. ಈಗಿನ ಕಾಲದ ಮನುಷ್ಯರ ಗಮನ ಕೇಂದ್ರೀಕರಿಸುವ ಅವಧಿ ಬಹಳವಾಗಿ ಕುಂಠಿತವಾಗಿದೆ ಎಂದು ಹಲವಾರು ಸಂಶೋಧನೆಗಳು ಪ್ರತಿಪಾದಿಸಿವೆ. ಇದಕ್ಕೆ ಸಂಶೋಧನೆಗಳೇ ಬೇಕಿಲ್ಲ. ನಮ್ಮನ್ನು ನಾವು ಅವಲೋಕಿಸಿಕೊಂಡರೆ ನಮಗೇ ಗೊತ್ತಾಗುತ್ತದೆ. ಉದಾಹರಣೆಗೆ ನಮ್ಮ ಮೊಬೈಲ್ ಫೋನ್‌ಗಳು ನಮ್ಮನ್ನು ತಮ್ಮ ಅಡಿಯಾಳಾಗಿ ಮಾಡಿಕೊಂಡುಬಿಟ್ಟಂತೆ ತೋರುತ್ತದೆ.
 
ಈಗಿನ ಕಾಲದಲ್ಲಿ ವಿದ್ಯುತ್ ಅಡಚಣೆ ಉಂಟಾದಾಗಲೂ ಇನ್ವರ್ಟರ್ ಸಹಾಯದಿಂದ ದೀಪಗಳು ಝಗಮಗಿಸುತ್ತಿರುತ್ತವೆ, ಜನರು ದೂರದರ್ಶನ ವೀಕ್ಷಣೆಯಲ್ಲಿ ಮುಂದುವರೆಯುತ್ತಾರೆ ಅಥವಾ ತಮ್ಮ ಮೊಬೈಲ್‌ನಲ್ಲಿ ಮಾಡಬಹುದಾದ ಹತ್ತಾರು ಕೆಲಸಗಳಲ್ಲಿ ಒಂದನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಇಪ್ಪತ್ನಾಲ್ಕು ಗಂಟೆಯೂ ಪ್ರಪಂಚಕ್ಕೆ "ಕನೆಕ್ಟ್" ಆಗಿರಬೇಕಾದ್ದು ಅನಿವಾರ್ಯತೆ ಎಂಬಂತೆ ವರ್ತಿಸುತ್ತೇವೆ. ಹೊರಗೆ ಬಂದರೆ ಈ ಮನೆಗಳೊಳಗಿನ ಬೆಳಕು, ನಗರದ ವಾಹನಗಳ ಬೆಳಕುಗಳಿಂದ ಉಂಟಾದ ಮಾಲಿನ್ಯದಿಂದ ಕತ್ತಲಿನಾಗಸದ ತಾರೆ - ಗ್ರಹಗಳೂ ಕಾಣವು. ಅವು ಕಂಡರೂ ಅವುಗಳನ್ನು ಗುರುತಿಸಿ ಸೃಷ್ಟಿಯ ಸೌಂದರ್ಯವನ್ನು ಕೆಲವು ನಿಮಿಷಗಳಷ್ಟಾದರೂ ಸವಿಯುವ ಕುತೂಹಲವಾಗಲೀ ಅಥವಾ ವ್ಯವಧಾನವಾಗಲೀ ಹೆಚ್ಚು ಜನರಲ್ಲಿ ಕಾಣುತ್ತಿಲ್ಲ. ಈಗಿನ ಮಕ್ಕಳನ್ನು ಬೆಳೆಸುವ ಪರಿಸರ ಅವರ ಸರ್ವತೋಮುಖ ಬೆಳವಣಿಗೆಗೆ ಸಹಾಯಕಾರಿಯಾಗುವಂತೆ ಅನ್ನಿಸುತ್ತಿಲ್ಲ. ಮಕ್ಕಳಿಗೆ ಹಾಗಿರಲಿ, ತಮ್ಮದೇ ಜೀವನದಲ್ಲಿ ಒಂದು ಕಾಲಕ್ಕೆ ಮಾಡಿ ಕೈ ಬಿಟ್ಟಿರುವ ಈ ರೀತಿಯ ಕೆಲಸಗಳನ್ನೂ ನೆನಪಿಗೆ ಸಹ ತಂದುಕೊಳ್ಳದಂತಹ ಪರಿಸ್ಥಿತಿಗೆ ದೊಡ್ಡವರಾದ ನಾವೂ ತಲುಪಿಬಿಟ್ಟಿದ್ದೇವೆ. ನಮ್ಮ ಯಾಂತ್ರಿಕ ಜೀವನದಿಂದ ದಿನಕ್ಕೊಂದಿಷ್ಟೆಂದು ಹೊತ್ತು ದೂರವಿದ್ದು ನೋಡಿ ಈ ಪರಿಸ್ಥಿತಿಯನ್ನು ಸುಧಾರಿಸಬಹುದೇನೋ? ನಾನಂತೂ ಈ ಪ್ರಯತ್ನಕ್ಕೆ ಕೈ ಹಾಕುವ ನಿರ್ಧಾರ ಮಾಡಿದ್ದೇನೆ. ನೋಡೋಣ, ಅದರ ಪರಿಣಾಮ ಏನಾಗುತ್ತದೆಂದು...

Comments