ಕುಟಿಲ ಶಿಖಾಮಣಿಗಳು

Here's an attempt at translating another of Bill Watterson's poems that appeared in Calvin and Hobbes, where Calvin hilariously thinks that his parents, alien beings in disguise according to him, are hatching a sinister plan to enslave him.

The translation follows a maatraa chhandas of 3/3/3/3/3/3/4:

ಕುಟಿಲ ಶಿಖಾಮಣಿಗಳು

ಇವರೆ ನನ್ನ ಅಪ್ಪ ಅಮ್ಮ, ಸಹಜವಿಲ್ಲ ತೋರಿಕೆ
ಇವರ ಮಂಕು ಕವಿದ ರೂಪ ಬಹಳ ಕುಟಿಲ ಹವಣಿಕೆ
ಇಂತು ನಮ್ಮ ಪಾಲಿಸುವರ ತಂತ್ರ ನನಗೆ ತಿಳಿದಿದೆ,
ಅಂತರಿಕ್ಷದಾಚೆಯಿಂದ ಬಂದರಿವರು ಪೊಡವಿಗೆ!

ದೊಡ್ಡ ಗಗನನೌಕೆಗಳಲಿ ಬಂದು ಭುವಿಯೊಳಿಳಿದರು
ದೊಡ್ಡವರಂತಿರುತ ನಮ್ಮ-ನಿಮ್ಮೊಳೆಲ್ಲ ಬೆರೆತರು.
ಹೆತ್ತವರೆಂದೆನಿಸಿಕೊಂಡು ಸುಳ್ಳೆ ನನಗೆ ನುಡಿವರು
ಗೊತ್ತು ನಿಜವು, ನನ್ನ ಹರೆಯವನ್ನು ಜೀತ ಪಡೆವರು!

ಬಂದು ರವಿಯು ಇರುಳ ನೀಗಿ ಬೆಳಕು ತಂದ ಚಣದಲೆ
ತಂದೆ ತಾಯಿ ಭುವಿಯ ಜನರ ಸೋಗು ಹಾಕಿಬಿಡುವರು
ತಕ್ಕುದಲ್ಲ ಅವರ ಮೊಗದ ಮುಸುಕು ಎಂಬುದರಿತಿಹೆ
ಸುಕ್ಕುಗಟ್ಟಿ ಜೋತುಬಿದ್ದ ಮೊಗದ ನೆರಿಗೆ ಸಡಿಲವೆ

ಗುರುತೆಯಿರುವ ಭುವಿಯ ಮೇಲೆ ಚುರುಕ ಮರೆತು ಬಾಳ್ವರು
ಕರೆವರೆನ್ನ ಗದರಿಸುತಲಿ ಓಡಬೇಡವೆನುವರು
ದಿನಚರಿಗಳ ದಾಸರವರು ಕಾಲದೊಡನೆ ನಡೆವರು
ಕನಸ ಮರೆತು ಯಂತ್ರದಂತೆ ವರ್ಷವೆಲ್ಲ ದುಡಿವರು

ದೂರದರ್ಶಿ ಕುರುಕು ತಿಂಡಿಗಳಿಗೆ ಬೆಲೆಯ ಕೊಡದಿಹ
ಬೇರೆ ಗೋಳದಿಂದ ಬಂದರಿವರು, ಭುವಿಗೆ ಹೊರಬರು
ಮನುಜರಲ್ಲದಿವರ ನೋಟದಿಂದ ಹೇಗೆ ನುಣುಚಲಿ?
ಮನಸನಿವರು ಆವರಿಸುವ ಹೊಂಚ ಹೇಗೆ ತಡೆಯಲಿ?

ಬಳಸುತಿಹರು ಸಂಚುಗಳನು ಕುಟಿಲ ಶಿಖಾಮಣಿಗಳು
ಬೆಳೆಸುತಿಹರು ನನ್ನನವರ ಪಂಗಡಕ್ಕೆ ಬೆಸೆಯಲು!


The original by Bill Watterson (click on the image to for a larger version to read)):


Comments