"ಕ್ಯಾಲ್ವಿನ್ ಅಂಡ್ ಹಾಬ್ಸ್" ಖ್ಯಾತಿಯ ಬಿಲ್ ವಾಟರ್‌ಸನ್ ಅವರ "ದಿ ಯೂಕಾನ್ ಸಾಂಗ್" ಪದ್ಯದ ಕನ್ನಡಾನುವಾದ:
A quick Kannada translation of Bill Watterson's funny poem on "Calvin and Hobbes", "The Yukon Song"
ಭೂತಾನದ ಹಾಡು
ತಂದಿದೆ ನೋಡಿರಿ ನನ್ನಯ ಹುಲಿಮರಿ
ಹಿಮದೊಳು ಜಾರುವ ಬಂಡಿಯನು,
ತಿಂಡಿಯ ಪೊಟ್ಟಣ ನಾ ಕಟ್ಟಿರುವೆನು
ಮರಳದ ಪಯಣಕೆ ಹೊರಟಿಹೆವು!
ತೊರೆದಿಹೆವಿಲ್ಲಿಯವರೆಗಿನ ಬಾಳನು,
ವಿದಾಯ ಅಮ್ಮಗೆ ಅಪ್ಪನಿಗೆ!
ರೋಸಿರುವೆವು ನಿಮ್ಮಾಜ್ಞೆಯ ಪಾಲಿಸಿ
ಮುಗಿದಿಹುದಿಲ್ಲಿಗೆ ನಿಮ್ಮ ಹಗೆ!
ವರುಷದೊಳೆಲ್ಲಾ ಹಿಮ ಸುರಿವಲ್ಲಿಗೆ
ಸಾಗಿ ಬದುಕ ನಾವ್ ಸವಿಯುವೆವು,
ಕೋಣೆಯ ಶುಚಿಯಾಗಿಸು ನೀನೆನ್ನುವ
ಬೈಗುಳ ಕೇಳದೆ ಬದುಕುವೆವು...
ಭೂತಾನವೆ ನಮಗಿರಿಸಿಹ ತಾಣವು!
ಅಲ್ಲಿಯೆ ಜೀವನ ಮಾಡುವೆವು.
ಕಿರುಚುತ ಶಪಿಸುತ ಅದರೆತ್ತರದಲಿ
ಮನಸಿಗೆ ಬಂದಂತಲೆಯುವೆವು!
ಶಾಲೆಗೆ ಹೋಗುವ ಕಾಟವೆ ತಪ್ಪಿತು,
ನಮ್ಮನು ಯಾರೂ ಪಳಗಿಸರು.
ಭಯವನು ತರಿಸುವ ಶಿಕ್ಷಕರಾರೂ
ಲೆಕ್ಕವ ಕಲಿಸದೆ ಕೊರಗುವರು!
ಊಟದ ತಟ್ಟೆಯ ಅಂಟುಗಳೆಲ್ಲವ
ತೊಳೆಯುವ ಗೋಜನು ಮರೆಯುವೆವು,
ಮನಸಿಗೆ ಬಂದಂತಗಿವೆವು ತಿನಿಸನು
ಸಿಕ್ಕಿದ ಚಮಚವ ಬಳಸುವೆವು!
ಹಿಮನಾಯಿಗಳೇ ನಮ್ಮಯ ಗೆಳೆಯರು
ಚಂದ್ರನ ನೋಡುತ ಊಳುವೆವು,
ನಿದ್ದೆಯ ಮಾಡದೆ ಎಚ್ಚರದಿಂದಲಿ
ಬೇಟೆಗೆ ಕಾಡಿಗೆ ತೆರಳುವೆವು.
ಎಂತಹ ಬಾಳದು! ಕಾಯಲಸಾಧ್ಯವು,
ಮಂಜಿನ ನಾಡಿಗೆ ತಲುಪುವುದು,
ನಮ್ಮಯ ಪಾಡಿಗೆ ನಾವೇ ಒಡೆಯರು
ಚಂದದ ಬಾಳನು ನಡೆಸುವೆವು!
ಕಟ್ಟಳೆ ಹಾಕಲು ಹೆತ್ತವರಿಲ್ಲದ
ಹಿಮವಿಹ ತಾಣಕೆ ಹೊರಟಿಹೆವು!
ದೊಡ್ಡವರೆನ್ನುವ ಭೂತಗಳಿಲ್ಲದ
ಭೂತಾನಕೆ ನಾವ್ ಹೊರಟಿಹೆವು!
The original:
Comments