Translation of Rudyard Kipling's "If" to Kannada

ರೆ...

ನಿನ್ನ ನೆಮ್ಮದಿಯ ನೀಂ ಕಾಪಿಟ್ಟುಕೊಳ್ಳುತಿರೆ
ನಿನ್ನನೇ ಹಳಿಯುತಿರೆ ತಲ್ಲಣಿಸಿದುಳಿದವರು,
ನಿನ್ನಳವಿನೊಳು ನಿನ್ನ ನಂಬುಗೆಯದಚಲವಿರೆ
ಅನ್ಯರಪನಂಬಿಕೆಯ ಮನ್ನಿಸುತ ನಡೆಯುತಿರೆ

ತಾಳುವಿಕೆ ನಿನ್ನೊಳಿರೆ, ತಾಳ್ಮೆಯಿಂ ದಣಿಯದಿರೆ
ದಾಳಿ ಹುಸಿಯಿಂ ನಡೆಸೆ ಹುಸಿಯ ನೀನಾಡದಿರೆ
ಬಾಳೆ ಹಗೆತನವಾಗೆ ಹಗೆಯ ನೀಂ ಬಯಸದಿರೆ
ಢಾಳಾಗಿ ಕಾಣಿಸದೆ ಮಾತಿನೊಳ್ ವಿನಯವಿರೆ

ಕನಸ ನೀಂ ಕಾಣುತಿರೆ ಕನಸಿನಾಳಾಗದಿರೆ
ಮನದಿ ಮಂಥನ ನಡೆಸೆ ಚಿಂತೆಯೀಡಾಗಿಸದೆ
ನಿನಗಾಗಿ ಬಂದಿರುವ ಗೆಲುವು ಸೋಲೆಂಬೆರಡು
ಘನಕಪಟಿಗಳ ನಡುವೆ ಸಮತೆಯಂ ತೋರುತಿರೆ

ನಿನ್ನ ಸತ್ಯವ ತಿರುಚಿ ಕೇಡಿಗರು ಮರುಳರಿಗೆ
ಗನ್ನವಾಗಿಸೆ, ಕೇಳಿ ಸಹಿಸುವಾಚಾರವಿರೆ
ಭಿನ್ನಗೊಂಡಿರೆ ಜೀವ ಮುಡಿಪಿಟ್ಟು ಮಾಳ್ದ ಬೆಸ
ಇನ್ನೊಮ್ಮೆ ನೀನದನು ಕಟ್ಟಲಣಿಯಾಗುತಿರೆ

ಗಳಿಕೆಯಂ ನಿನದೆಲ್ಲ ಕುತ್ತಿಗೆಂದಡವಿಟ್ಟು
ಬೆಳೆವುದೋ ಕಳೆವುದೋ ತಿಳಿಯದೇ ನಡೆಯುತಿರೆ 
ಕಳೆದರೂ ಮತ್ತೊಮ್ಮೆ ಮೊದಲಿನಿಂ ತೊಡಗುತಿರೆ
ಬಳಿಕ ಕಳೆದುದರ ಬಗೆಗುಸಿರನೇ ಎತ್ತದಿರೆ

ಮಿಡಿವೆದೆಯ ತುಡಿವ ನರ ದುಡಿವ ಕಸುವಂ ನೀನು
ಗಡುವು ದಾಟಿಯು ನಿನ್ನ ನಡೆಗೆಂದು ಸೆಳೆಯುತಿರೆ
ಉಡುಗಿರಲು ನಿನ್ನಳವು ಅಡಿಗಡಿಗೆ ಬಳಲಿರಲು
"ಬಿಡದೆ ಮುನ್ನಡೆ"ಯೆಂದು ದೃಢಮನವದೆನ್ನುತಿರೆ

ಎಲ್ಲರೊಳಗೊಂದಾಗಿಯೂ ನಿನ್ನ ಹಿರಿಮೆಯಿರೆ
ಮಲ್ಲರಾಜರ ಜತೆಗೆ ನಡೆದರೂ ವಿನಯವಿರೆ
ಬಲ್ಲ ಸಖರೂ ಹಗೆಗಳೂ ನಿನ್ನ ಕುಟುಕದಿರೆ
ಎಲ್ಲ ನಿನ್ನೊಡನಾಡಿಗಳು ತಮ್ಮ ಮಿತಿಯೊಳಿರೆ

ಕರಗದಾ ಕಠಿಣತೆಯ ನಿಮಿಷವೊಂದರ ಬೆಲೆಯ
ಅರಿತು ನೀ ಚಣಚಣದ ಓಟಕೆಂದೆರೆಯುತಿರೆ
ಧರೆಯೆ ನಿನದಾಗುವುದು ಧರೆಯೊಳಗಿನೆಲ್ಲವೂ
ವರಪುರುಷ ನೀನೆನಿಸಿಕೊಳುವೆಯೆನ್ನಣುಗನೇ!


Hugely indebted and immensely grateful to Dr. Chandana Sri who pushed me towards attempting this translation. I had attempted this translation earlier, a few years ago, and had given up as I felt whatever I was attempting was unable to capture the heart and soul of the original. The original poem by Rudyard Kipling is in 4 stanzas of 8 lines each, and set to iambic pentameter, so it lends well to a rhythmic reading.

In my Kannada translation, I have stuck to the Chandas I'm most comfortable with, that of Panchamatra Choupadi, with 8 verses of 4 lines each. I've also attempted to blend in Adipraasa throughout and anupraasa at times, and due to the fact that it is all about "ifs", in most places, we get antyapraasa too due to the use of "ರೆ" at the end, although I did not attempt it willingly.

Another important aspect of the original poem is that it is essentially a single line of causes and consequence expanded over 32 lines of the poem. 30 lines of cause and 2 lines of effect. I've also tries retaining this feature in the Kannada translation and hence the whole poem is just a single line of text.

The original poem by Rudyard Kipling (image from Wikimedia commons):




Comments