ಶಿವನ ಸ್ತುತಿ - ಕವನ / ಕೃತಿ - Poem on Shiva


ಕಳೆದೆರಡು ದಿನಗಳಲ್ಲಿ ಸಮಯ ದೊರೆತಾಗ ಯೋಚಿಸುತ್ತಾ ಶಿವನ ಸ್ತುತಿಯಾಗಿ ಬರೆದ ಕವನ - ಸಂಗೀತ ಕೃತಿಯ ರೂಪದಲ್ಲಿ ಈ ಕೆಳಗೆ ಹಂಚಿಕೊಂಡಿರುತ್ತೇನೆ...

ಛಂದಸ್ಸು:
4/4/4/4
4/4/4/1


ಗುಡಿಯೊಂದಿಹುದಲ ಮದನಹರನಿಗೆಂ -
ದಡವಿಗಳಾಚೆಗೆ ಬಡಗಣದೆ ।। ಪ ॥

ಕಡವಸದುಡುಪಿನ ಹೆಡೆಹಾವೊಡವೆಯ
ಅಡವಿಯ ವಾಸದ ಮೃಡಹರಗೆ ॥ ಅ ॥

ಪೊಡವಿಯೊಳೋಡುತ ಮೂಡುವ ಗಂಗೆಯ
ತಡೆದು ಜಡೆಯೊಳಗೆ ಮುಡಿದವಗೆ
ಕಡಲಿನಲೆಗಳನೆ ತಡಿಗೆಡತಾಕಿಪ
ಉಡುರಾಜನ ಮುಡಿಗೇರಿಪಗೆ ॥ ೧ ॥

ಕುಡಿದೆಲ್ಲ ಗರಳ ಪಿಡಿದುಮೆಯ ಕರವ
ಪಡಿ ಬೇಡುತ ವರ ಕೊಡುವವಗೆ
ಬಡಿದು ಡಮರು ಜಬಗಡದಶವೆನಿಸುತ
ನುಡಿಯ ನಡೆಗಳನು ಹಡೆದವಗೆ ॥ ೨ ॥

ಗುಡುಗು ಸಿಡಿಲು ಕರಿಮೋಡದ ನೆರಳಿನ
ಕಡುಕಾರ್ಪಣ್ಯವ ತೊಡೆವವಗೆ
ಸುಡುಗಣ್‌ ಬಿಡುವಗೆ ಸುಜನರ ಪೊರೆವಗೆ
ಜಡತೆ ಕೊಡಹಿ ತಾ ಕುಣಿವವಗೆ ॥ ೩ ॥

ಸಡಗರದಿಂದಲಿ ಸೊಡರನು ಬೆಳಗುತ
ಮೃಡನ ನೆನೆವುದಿನ್ನಡಿಗಡಿಗೆ
ಬಿಡುಗಡೆ ಭವದಿಂ ಪಡಿಸೆನ್ನುತಲವ -
ನಡಿಗೆರಗುವುದದೆ ಬೆಳವಣಿಗೆ ॥ ೪ ॥





Image credits: Painting by @santalum_aurum on Twitter (doctor, poet, painter, knowledgeable in Sanskrit, Kannada and English literature - a budding polymath!



This painting is also an inspiration for large sections of this poem.

The poem recited beautifully by @nirbhaavuka here:






Comments