ಅದೂ ಒಂದು ಕಾಲವಿತ್ತು. ಇಡೀ ಊರಿಗೆ ಊರೇ ಪರಿಚಿತವಿರುವಷ್ಟು ಊರೂ ಚಿಕ್ಕದಿರುತ್ತಿತ್ತು, ಬಹುಪಾಲು ಜನರೂ ಗುರುತಿರುತ್ತಿದ್ದರು. ಹೆಚ್ಚೇನೂ ಹಿಂದಕ್ಕೆ ಹೋಗಬೇಕಿಲ್ಲ. ಒಂದು ಇಪ್ಪತ್ತು-ಇಪ್ಪತ್ತೈದು ವರ್ಷಗಳು ಹಿಂದೆ ಹೋದರೂ ಸಾಕು. ಬೆಂಗಳೂರಿನಂತಹ ನಗರಿಯನ್ನು ಬಿಟ್ಟರೆ ಉಳಿದ ಹಲವು ಜಿಲ್ಲಾ ಕೇಂದ್ರಗಳಂತಹ ಎರಡನೇ ಶ್ರೇಣಿಯ ನಗರಗಳಿಗೂ ಇದು ಅನ್ವಯಿಸುತ್ತಿತ್ತು. ನಾನು ಕಂಡಂತೆ ಒಂದು ಹಂತಕ್ಕೆ ಹಾಸನ, ಮೈಸೂರುಗಳೂ ಇದಕ್ಕೆ ಸಾಕ್ಷಿ. ಮೊಬೈಲ್ ಫೋನುಗಳ, ಅಂತರ್ಜಾಲದ ಮತ್ತು ಸಾಮಾಜಿಕ ಜಾಲತಾಣಗಳ ಹಾವಳಿಯಿಲ್ಲದಾಗ್ಯೂ ಎಲ್ಲರೂ ಒಬ್ಬರಿಗೊಬ್ಬರು "connected" ಆಗಿ ಇದ್ದ ಕಾಲ. ಈ ರೀತಿಯ ಬಿರುಸಾದ ಸಂಪರ್ಕ ಇಡೀ ಊರಿನ ಜನಸಾಮಾನ್ಯರಲ್ಲಿ ಹಾಸುಹೊಕ್ಕಾಗಿತ್ತು. ಒಬ್ಬರಿಗೊಬ್ಬರು ಕಷ್ಟಸುಖಗಳಲ್ಲಿ ಆಗುವುದು ಅನ್ನುವುದನ್ನು ಪಕ್ಕಕ್ಕಿಟ್ಟರೂ ಸಹ ಇಡೀ ಊರಿನ ನಾಡಿಮಿಡಿತ ಎಲ್ಲರಿಗೂ ಹೇಗೋ ಪರಿಚಿತವಿರುತ್ತಿತ್ತು.
ಈ ರೀತಿಯ ಸಂಪರ್ಕಗಳನ್ನು ಕಲ್ಪಿಸುವಲ್ಲಿ ಮತ್ತು ಊರಿನ ನಾಡಿಮಿಡಿತವನ್ನು ಪಸರಿಸುವಲ್ಲಿ ಕೇಂದ್ರಗಳಾಗಿ ನೆರವಾಗುತ್ತಿದ್ದ ಊರಿನ ಕೆಲವು ಚಿರಪರಿಚಿತ ಜಾಗಗಳೂ ಇರುತ್ತಿದ್ದವು, ಅಂತಹ ವ್ಯಕ್ತಿಗಳೂ ಇರುತ್ತಿದ್ದರು. ಹಾಗೆಂದು ನಾನಿಲ್ಲಿ ಹೇಳುತ್ತಿರುವುದು ಕಾಲಹರಣ ಮಾಡುತ್ತಾ ಗೊಡ್ಡು ಹರಟೆಗಳನ್ನು ಹರಟುವ ಸೋಮಾರಿ ಕಟ್ಟೆಗಳು ಮತ್ತು ಅದರಲ್ಲಿ ಪಾಲ್ಗೊಳ್ಳುತ್ತಿದ್ದ ಜನರ ಬಗ್ಗೆಯಲ್ಲ. ತಮ್ಮ ಸುತ್ತಲಿನ ಜನಜೀವನವನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತಿದ್ದ ಮತ್ತು ಊರಿನ ಆಗುಹೋಗುಗಳನ್ನು ಗಮನಿಸುತ್ತಾ, ಒಳಿತು ಕೆಡುಕುಗಳನ್ನು ಅರ್ಥೈಸಿಕೊಳ್ಳುತ್ತಾ ಪ್ರತ್ಯುಪಕಾರದ ಹಂಗಿಲ್ಲದೇ ಸಮಾಜಮುಖಿಯಾದ ಕೆಲಸಗಳನ್ನು ಮಾಡುವಂತಹ ಸಾಮಾನ್ಯ ನಾಯಕರನ್ನು ಸೃಷ್ಟಿಸುವ ಸಾಮರ್ಥ್ಯವಿದ್ದ ಅನಧಿಕೃತ ಕೂಟಗಳ ಬಗ್ಗೆ, ಅಂತಹವರನ್ನು ಒಗ್ಗೂಡಿಸುವ ಶಕ್ತಿಯಿದ್ದ ಅಂತಹ ಸಾಮಾನ್ಯ ಆಯೋಜಕರ ಬಗ್ಗೆ. ಇಂತಹ ಸ್ಥಳಗಳಲ್ಲಿ ಊರಿನ ಬಗ್ಗೆ ಮತ್ತು ಸಮಾಜದ ಬಗ್ಗೆ ಸಣ್ಣವಾದರೂ ಆರೋಗ್ಯಕರವಾದ ಸಂವಾದಗಳು ನಡೆಯುತ್ತಿದ್ದವು. ತಮ್ಮ ಬಿಡುವಿಲ್ಲದ ದಿನಚರಿಯ ನಡುವೆಯೂ ಮಧ್ಯವಯಸ್ಕ ಸಹೃದಯರಿಗೆ ದಿನಕ್ಕೊಂದು ಐದು-ಹತ್ತು ನಿಮಿಷಗಳಲ್ಲೇ ಸಮಾಜದ ಬಗ್ಗೆ ತಿಳಿದುಕೊಳ್ಳುವ ಮತ್ತು ಸ್ಪಂದಿಸುವ ದಾರಿಗಳನ್ನು ಹುಡುಕುವ ಅವಕಾಶಗಳು ದೊರೆಯುತ್ತಿದ್ದವು. ನನಗೆ ಹಾಗೆ ನೆನಪಿರುವಂಥವು, ನಾನು ಚಿಕ್ಕವನಿದ್ದಾಗ ನಮ್ಮ ತಂದೆ ಹೀಗೆ ತಮ್ಮ ಸಮಾನಮನಸ್ಕರನ್ನು ಭೇಟಿಯಾಗುತ್ತಿದ್ದ ಜಾಗಗಳು - ಚನ್ನರಾಯಪಟ್ಟಣದಲ್ಲಿ ಊರೊಳಗೆ ನೇತಾಜಿ ರಸ್ತೆಯಲ್ಲಿದ್ದ "ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿ" ಮತ್ತು ಹಾಸನದಲ್ಲಿ ಅಂದಿನ ಬಸ್ ನಿಲ್ದಾಣದೆದುರಿನ "ರಜತಾದ್ರಿ ಟಿಫನ್ ಸೆಂಟರ್". ಈ ಸರ್ಕ್ಯುಲೇಟಿಂಗ್ ಲೈಬ್ರರಿಯ ಪರಿಕಲ್ಪನೆಯೇ ಇಂದಿಗೆ ಅಪ್ರಸ್ತುತವಾಗುವಷ್ಟು ಹಳತಾಗಿದೆ. ಇರಲಿ, ಅದು ಮತ್ತೊಂದು ಬರಹದ ವಿಷಯ. ಈ ಕೇಂದ್ರಸ್ಥಾನಗಳಾದ ಅಂಗಡಿಗಳ ಮಾಲೀಕರು ಒಂದು ರೀತಿ "ಸಾಮಾನ್ಯ ಅಪವರ್ತನ"ಗಳಾಗಿ (common factor) ವರ್ತಿಸಿ ಈ ಕೆಳೆಕೂಟಗಳ ಜೀವಾಳವಾಗಿರುತ್ತಿದ್ದರು.
ಈ ಕೇಂದ್ರದಂತಹ ತಾಣಗಳಿಲ್ಲಿಯೇ ಅಚಾನಕ್ಕಾಗಿ ಭೇಟಿಯಾದವರು ಮುಂದೆ ಒಳ್ಳೆಯ ಸ್ನೇಹಿತರಾದವರೂ ಹಲವರಿರುತ್ತಿದ್ದರು. ಅಲ್ಲಿಗೆ ಬರುತ್ತಿದ್ದವರೇ ಸಮಾನಮನಸ್ಕರಾಗಿರುತ್ತಿದ್ದರಿಂದ ಅವರ ಯೋಚನೆಗಳಲ್ಲಿ, ಆಸಕ್ತಿಗಳಲ್ಲಿ ಹೊಂದಾಣಿಕೆಯಿರುತ್ತಿತ್ತು, ಸಾಮರಸ್ಯ ಏರ್ಪಡುತ್ತಿತ್ತು. ಇದು ಬಹುಕಾಲದ ಗೆಳೆತನಕ್ಕೆ ಬುನಾದಿಯಾಗುತ್ತಿತ್ತು. ಹಾಗಂದ ಮಾತ್ರಕ್ಕೆ ಆ ರೀತಿಯ ಕೆಳೆಕೂಟಗಳು ಈಗ ಇಲ್ಲವೆಂದಲ್ಲ. ಆದರೆ ಬಹುಪಾಲು ಅಂತಹ ಗುಂಪುಗಳು ಈಗ ತಂತ್ರಜ್ಞಾನದ ಸಹಾಯವನ್ನೂ ಪಡೆದುಕೊಳ್ಳುತ್ತಾ ಬೇರೆಯದೇ ರೀತಿಯಲ್ಲಿ ಬೆಳವಣಿಗೆ ತಳೆಯುವುದರಲ್ಲಿ ಅನುಮಾನವಿಲ್ಲ. ಅಂದಿನ ದಿನದಲ್ಲಾದರೋ, ಮೊದಲೇ ನಿಶ್ಚಿತಗೊಳಿಸಿಲ್ಲದಿದ್ದರೆ ಯಾರು ಯಾವತ್ತು ಮತ್ತು ಯಾವಾಗ ಇಂತಹ ಕೇಂದ್ರಸ್ಥಾನಗಳಿಗೆ ಬರುತ್ತಾರೆಂದು ಯಾರಿಗೂ ತಿಳಿದಿರುತ್ತಿರಲಿಲ್ಲ. ಯಾರೂ ಹಾಗೆ ನಿಶ್ಚಿತಗೊಳಿಸುವ ಗೊಡವೆಗೂ ಹೋಗುತ್ತಿರಲಿಲ್ಲ. ತಮಗೆ ಪುರುಸೊತ್ತಿದ್ದಾಗ ಹೋಗಿ ಯಾರು ಸಿಕ್ಕಿದರೆ ಅವರೊಟ್ಟಿಗೆ ಕೆಲವಷ್ಟು ಮಾತುಗಳನ್ನಾಡಿಕೊಂಡು ಹಿಂತಿರುಗುತ್ತಿದ್ದ ಕಾಲ. ಮೊಬೈಲ್ ಫೋನುಗಳು ಒತ್ತಟ್ಟಿಗಿರಲಿ, ಲ್ಯಾಂಡ್ಲೈನ್ ದೂರವಾಣಿಗಳೇ ಆಗ ಎಲ್ಲರ ಮನೆಯಲ್ಲೂ ಇರದಿದ್ದ ಕಾಲ. ಕರಾರುವಾಕ್ಕಾಗಿ ಯಾರು ಭೇಟಿಯಾಗಬಹುದೆಂದು ಗೊತ್ತಿರದ ಈ ಪರಿಸ್ಥಿತಿಯೇ ಒಂದು ರೀತಿ ಅಂತಹ ಭೇಟಿಗಳಿಗೆ ಎದುರು ನೋಡುವಂತಹ ಪರಿಸ್ಥಿತಿಯನ್ನೂ ಸೃಷ್ಟಿಸುತ್ತಿತ್ತೇನೋ. ಇಂದಿನ ತಂತ್ರಜ್ಞಾನಸ್ನೇಹಿ ಯುಗಕ್ಕಿಂತ ಸ್ವಲ್ಪ ಮಟ್ಟಕ್ಕೆ ಹೆಚ್ಚಾದ ಮನಸ್ಸಂತೃಪ್ತಿಯನ್ನೂ ಅಂತಹ ಭೇಟಿಗಳು ನೀಡುತ್ತಿದ್ದವೇನೋ. ಬಹುಶಃ ಆ "serendipity"ಯ ಆನಂದವೇ ಬೇರೆಯೇನೋ.
ಒಂದರ್ಥದಲ್ಲಿ ನೋಡಿದಾಗ ಇಂದಿನ ಟ್ವಿಟರ್ನಂತಹ ಸಾಮಾಜಿಕ ಜಾಲತಾಣದ ಸದಭಿರುಚಿಯ ಉಪಯೋಗವನ್ನು ಅಂದಿನ ಆ ಅನಧಿಕೃತ ಕೆಳೆಕೂಟಗಳಿಗೆ ಹೋಲಿಸಬಹುದು. ಟ್ವಿಟರ್ನಲ್ಲೂ ಸಹ ಹೆಚ್ಚಾಗಿ ಹಿಂಬಾಲಿಸುವಿಕೆಗಳು ಉಂಟಾಗುವುದು ಆಸಕ್ತಿ ಆಧಾರಿತ ಹೊಂದಾಣಿಕೆಗಳಲ್ಲೇ. ಆ ವಿಷಯದಲ್ಲಿ ಇದು ಬೇರೆ ಸಾಮಾಜಿಕ ಜಾಲತಾಣಗಳಿಗಿಂತ ಭಿನ್ನವೆನ್ನಬಹುದು. ಉದಾಹರಣೆಗೆ ಫೇಸ್ಬುಕ್ನಲ್ಲಾದರೋ ಮೊದಲೇ ಪರಿಚಿತವಿರುವ ಸ್ನೇಹಿತರು ಮತ್ತು ನೆಂಟರೊಡನೆ ಸಂಪರ್ಕದಲ್ಲಿರುವ ಆಶಯವಿದ್ದರೆ ಲಿಂಕ್ಡ್ಇನ್ನಲ್ಲಿ ವೃತ್ತಿಪರ ಸಂಪರ್ಕಗಳಿಗೆ ಮಾನ್ಯತೆ. ಎಷ್ಟೇ ಆದರೂ ಅಂದಿನಂತೆ ಖುದ್ದಾಗಿ ಉಪಸ್ಥಿತರಿಲ್ಲದಿರುವ ಪರಿಸ್ಥಿತಿಯಿಂದಾಗಿ ಹಲವು ನಿಟ್ಟಿನಿಂದ ನೋಡಿದಾಗಲೂ ಟ್ವಿಟರ್ನ ಅನುಭವ ಕೆಲವು ಕೊರೆಗಳನ್ನು ಉಳಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಉದಾಹರಣೆಗೆ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿರುವ ಇಬ್ಬರು ಟ್ವಿಟರ್ ಬಳಕೆದಾರರು ಹಲವಾರು ವಿಷಯಗಳಲ್ಲಿ ತಮ್ಮಿಬ್ಬರ ನಡುವೆ ಹೊಂದಾಣಿಕೆಯಿದೆಯೆಂದು ಸಮಯ ಕಳೆದಂತೆ ಅರಿತುಕೊಂಡಿದ್ದರೂ, ಕೆಲವು ವಿಚಾರಗಳಲ್ಲಿ ವಿರುದ್ಧವೆನಿಸುವಂತಹ ನಂಬಿಕೆಗಳನ್ನುಳ್ಳವರಾಗಿರಬಹುದು. ಆದರೆ ಸಾಮರಸ್ಯವಿರುವ ವಿಷಯಗಳ ಬಗ್ಗೆ ಅವರ ಅನಿಸಿಕೆಗಳನ್ನು ಕೇಳುವ ಸಲುವಾಗಿ ಹಿಂಬಾಲಿಸುತ್ತಿದ್ದರೂ ಸಹ ಅವರ ಇನ್ನುಳಿದ, ತಮಗೆ ಬೇಕಿಲ್ಲದ, ಹೇಳಿಕೆಗಳಿಗೂ ಕಿವಿಗೊಡಬೇಕಾಗುವ ಅನಿವಾರ್ಯತೆ ಅಲ್ಲಿದೆ. ಅಂದಿನ ಕೆಳೆಕೂಟಗಳಲ್ಲಾಗಿದ್ದರೆ ಕೆಲ ಭೇಟಿಗಳ ನಂತರ ಅವರವರಲ್ಲೇ ತಮ್ಮಲ್ಲಿ ಯಾವ ವಿಷಯಗಳ ಬಗ್ಗೆ ಹೊಂದಾಣಿಕೆಯಿಲ್ಲವೆಂಬ ಅರಿವಾಗಿ ಈರ್ವರೂ ಒಂದೆಡೆ ಸೇರಿದಾಗ ಆ ವಿಚಾರಗಳನ್ನೇ ಎತ್ತದೇ ತಮ್ಮ ಭೇಟಿಗಳನ್ನು ಹಿತವಾಗಿರುವಂತೆ ನೋಡಿಕೊಳ್ಳುವ ಸ್ವಾತಂತ್ರ್ಯವಿರುತ್ತಿತ್ತು.
ಬಹುಶಃ ಇಂತಹ ಸನ್ನಿವೇಶಗಳನ್ನು ದೂರ ಮಾಡಲು ಈ ತಂತ್ರಜ್ಞಾನಾಧಾರಿತ ಯುಗದಲ್ಲಿ ನಮಗೆ ದೊರಕುವ ಆಯ್ಕೆಗಳಲ್ಲೊಂದು ಮೀಟಪ್ನಂತಹ ಜಾಲತಾಣಗಳು. ಹೆಸರೇ ಸೂಚಿಸುವಂತೆ ಸಮಾನ ಆಸಕ್ತಿಯುಳ್ಳವರು ಆ ಆಸಕ್ತಿಯ ಬಗ್ಗೆ ಚರ್ಚಿಸಲು ಮೊದಲೇ ನಿರ್ಧರಿಸಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಖುದ್ದಾಗಿ ಭೇಟಿ ಮಾಡಲು ಅನುಕೂಲ ಮಾಡಿಕೊಡುವ ತಾಣ ಮೀಟಪ್. ಆದರೆ ಮೊದಲೇ ಹೇಳಿದಂತೆ ಅಂದಿನ "serendipity" ಮತ್ತು ಅದರಿಂದ ಸಿಗುವ ಆನಂದದ ಆಯಾಮ ಇಲ್ಲಿ ಇಲ್ಲದಿರುವುದು ಒಂದು ಅಭಾವವಾದರೆ, ನಿಗದಿಯಾದ ಒಂದೇ ಒಂದು ವಿಷಯದ ಬಗ್ಗೆ ಆಸಕ್ತಿಯುಳ್ಳವರು ಮಾತ್ರ ಭೇಟಿಯಾಗುವ ಪರಿಸ್ಥಿತಿ ಇನ್ನೊಂದು ತೊಂದರೆ. ಉದಾಹರಣೆಗೆ ನಾನು ಹೊಯ್ಸಳ ದೇಗುಲಗಳ ಶಿಲ್ಪಕಲೆಯ ಬಗ್ಗೆಯೂ ಆಸಕ್ತಿ ಹೊಂದಿದ್ದೇನೆ, ಹಾಗೆಯೇ ಯಾಂತ್ರಿಕ ಕಲಿಕೆಯ (machine learning) ಬಗ್ಗೆಯೂ ಮತ್ತು ಜಿಂಬಾಬ್ವೆ ಕ್ರಿಕೆಟ್ ತಂಡದ ಬಗ್ಗೆಯೂ! ಅಂದಿನ ಕೆಳೆಕೂಟಗಳಲ್ಲಿ ಭೇಟಿಯಾದ ನಂತರ ತಮ್ಮ ತಮ್ಮ ಹಲವಾರು ಆಸಕ್ತಿಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು ತಮ್ಮ ಸ್ನೇಹಜಾಲವನ್ನು ಬೆಳೆಸಿಕೊಳ್ಳುವ ಮತ್ತು ಸಾಂದರ್ಭಿಕವಾಗಿ ಬೇರೆ ಬೇರೆ ವಿಷಯಗಳನ್ನು ಚರ್ಚಿಸುವ ಸಾಧ್ಯತೆಗಳಿದ್ದವು. ಇದರಿಂದಾಗಿ ಒಬ್ಬರಗೆ ಇನ್ನೊಬ್ಬರಲ್ಲಿರುವ ವಿಷಯಗಳ ಬಗ್ಗೆ ತಾವೂ ಆಸಕ್ತಿ ಬೆಳೆಸಿಕೊಳ್ಳುವ ಮತ್ತು ಆ ಬಗ್ಗೆ ಚರ್ಚಿಸುವ ಅವಕಾಶಗಳಿರುತ್ತಿದ್ದವು.
ಅಂದಿನ ಆ ಕೆಳೆಕೂಟಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮಲ್ಲೇ ಯಾರಿಗಾದರೋ ಅಥವಾ ತಮ್ಮ ಸುತ್ತಮುತ್ತಲಿನ ಪರಿಚಯದವರಿಗೋ ಇದ್ದ ಕಷ್ಟಗಳಿಗೆ ಸ್ಪಂದಿಸುವ ವೇದಿಕೆಯಾಗಿ ಮಾರ್ಪಡುತ್ತಿದ್ದವು. ನಾನೇ ಕಂಡಂತೆ ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿಯಲ್ಲಿ ಸೇರುತ್ತಿದ್ದ ಸ್ನೇಹಿತರು ಮತ್ತು ಅದರ ಮಾಲೀಕರಾದ ಜಯರಾಮು (ಅವರ ಬಗ್ಗೆಯೇ ಒಂದು ಬೇರೆ ಲೇಖನದ ಅವಶ್ಯಕತೆಯಿರುವಷ್ಟು ಮಹಾತ್ಮರು ಅವರು) ಅವರ ವಿಶಾಲ ಹೃದಯದ ಫಲವಾಗಿ ಹಲವು ಬಡ ಮಕ್ಕಳಿಗೆ ವಿದ್ಯಾಭ್ಯಾಸದ ಕನಸು ನನಸಾಯಿತು. ಅನಿರೀಕ್ಷಿತ ಸಾವುಗಳನ್ನು ಕಂಡ ಮನೆಗಳಿಗೆ ಕಾಯಾ ವಾಚಾ ಮನಸಾ, ಮತ್ತು ಆರ್ಥಿಕವಾಗಿಯೂ ಸಮಯದಲ್ಲಿ ನೆರವಾಗುವಂತಹ ಪ್ರತಿಫಲಾಪೇಕ್ಷೆಯಿಲ್ಲದ ಕೆಲಸಕ್ಕೆ ಮೊದಲಾಗುತ್ತಿದ್ದರು. ಊರಿಗೆ, ಊರಿನ ನಿರ್ದಿಷ್ಟ ಪ್ರದೇಶಗಳಿಗೆ ಮತ್ತು ಸಮುದಾಯಗಳಿಗೆ ಯಾವ ರೀತಿಯ ಸೌಲಭ್ಯಗಳ ಕೊರತೆಯಿದೆ ಎಂಬ ವಿಷಯಗಳನ್ನು ತಮ್ಮ ಮಾತುಕತೆಗಳ ಮೂಲಕ ಮನಗಂಡು ಅದಕ್ಕಾಗಿ ಸಂಬಂಧಪಟ್ಟವರಲ್ಲಿ ಪ್ರಸ್ತಾಪಿಸುವ ಕಾರ್ಯಗಳೂ ನೆರವೇರಿದವು. ಯಾರೋ ಎಷ್ಟೋ ಕೊಟ್ಟ ಸಣ್ಣ ಕೊಡುಗೆಗಳೂ ಇಲ್ಲಿ ಬಹಳ ಪ್ರಾಮುಖ್ಯತೆ ಪಡೆಯುತ್ತವೆ, ಕಾರ್ಯ ನಿರ್ವಹಣೆಗೆ ಸಹಕಾರಿಯಾಗುತ್ತವೆ. ಇದಕ್ಕೆ ಎದುರಾಗಿ ಇಂದು ಆನ್ಲೈನ್ ಪಿಟಿಶನ್ ಮತ್ತು ಆನ್ಲೈನ್ ದೇಣಿಗೆ ಎತ್ತುವ ಜಾಲತಾಣಗಳೂ ಹಲವಿವೆ. ಅವುಗಳ ಹರವೂ ಅಂದಿನ ಕೂಟಗಳಿಗಿಂತ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ - ತಂತ್ರಜ್ಞಾನದ ಸಹಾಯದಿಂದ. ಹೆಚ್ಚು ಸಹಾಯಗಳೂ ದೊರಕಬಹುದು, ಸಂಬಂಧಪಟ್ಟವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲೂ ಸುಲಭಸಾಧ್ಯ. ಆದರೂ ಅಂದಿನ ಕೆಳೆಕೂಟಗಳ ಅನ್ಯೋನ್ಯತೆಯನ್ನು ಬಹುಶಃ ಇವುಗಳಿಂದ ಸೃಷ್ಟಿಸಲು ಸಾಧ್ಯವಿಲ್ಲವೇನೋ. ಇಂದಿನ ಸಂಪರ್ಕ ಮಾಧ್ಯಮಗಳು ಮತ್ತು ಅವುಗಳ ಸರ್ವವ್ಯಾಪಿಯಾದ ಹರಹು ಪ್ರಾದೇಶಿಕವಾಗಿ ದೂರದಲ್ಲಿರುವವರನ್ನು ಹತ್ತಿರ ತರುವಲ್ಲಿ ಯಶಸ್ವಿಯಾಗಿದ್ದರೂ ಸಹ ಭೌತಿಕವಾಗಿ ಹತ್ತಿರದಲ್ಲಿರುವವರನ್ನು ಮಾನಸಿಕವಾಗಿ ದೂರವಾಗಿಯೇ ಇಟ್ಟಿರುವುದರಲ್ಲಿ ಸಂದೇಹವಿಲ್ಲ. ಅವುಗಳಲ್ಲಿಲ್ಲದ ಆ ಮಾನವೀಯ ಸ್ಪರ್ಶ (human touch) ಎದ್ದು ಕಾಣುತ್ತದೆ.
Comments