ಕನಕದಾಸರ ಈ ದೇವರನಾಮ ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುವಂತಾಗಿ ಕಳೆದ ಕೆಲವು ದಿನಗಳಲ್ಲಿ ಹಲವು ಬಾರಿ ಕೇಳಿದ್ದಾಗಿದೆ. ಅಷ್ಟು ಸುಂದರ ಸಾಹಿತ್ಯ. ಅಷ್ಟೇ ಭಕ್ತಿಪರವಶವಾಗುವಂತಹ ಗಾಯನ ಕುರುಡಿ ವೆಂಕಣ್ಣಾಚಾರ್ ಮತ್ತು ಅವರ ಮಗ ಕೆ. ವಿ. ನಂದಕುಮಾರ್ ಅವರಿಂದ. ಆಹಿರ್ ಭೈರವ್ ರಾಗವೂ ತನ್ನ ಪ್ರಭಾವವನ್ನು ಸಂಪೂರ್ಣವಾಗಿ ಬೀರುತ್ತದೆ...
ದಾಮೋದರ ಹರಿ ವಿಷ್ಣು ಮುಕುಂದಾ... ॥ ಅ ॥
ಮಚ್ಚಾವತಾರದೊಳಾಡಿದನೇ
ಮಂದರಾಚಲ ಬೆನ್ನೊಳಗಾಂತವನೇ
ಅಚ್ಚಸೂಕರನಾಗಿ ಬಾಳಿದನೇ
ಮದ ಹೆಚ್ಚೆ ಹಿರಣ್ಯಕನ ಸೀಳಿದನೇ ॥ ೧ ॥
ಬಲಿಯೊಳು ದಾನವ ಬೇಡಿದನೇ
ಕ್ಷತ್ರಕುಲವ ಬಿಡದೆ ಕ್ಷಯ ಮಾಡಿದನೇ
ಜಲನಿಧಿಗೆ ಬಿಲ್ಲನ್ನು ಹೂಡಿದನೇ
ಕಾಮಕ್ಕೊಲಿದು ಗೊಲ್ಲತಿಯೊಳಗಾಡಿದನೇ ॥ ೨ ॥
ಸಾಧಿಸಿ ತ್ರಿಪುರರ ಗೆಲಿದವನೇ
ಪ್ರತಿಪಾದಿಸಿ ಹಯವೇರಿ ನಲಿದವನೇ
ಭೇದಿಸಿ ವಿಶ್ವವ ಗೆಲಿದವನೇ
ಬಾಡದಾದಿಕೇಶವ ನಮಗೊಲಿದವನೇ ॥ ೩ ॥
Comments