ಎತ್ತ ಹೋಯಿತೆನ್ನ ಬಾಲ್ಯ

A very old poem in Kannada that I had written over 15 years ago...

ಎತ್ತ ಹೋಯಿತೆನ್ನ ಬಾಲ್ಯ

ಎಳೆಯ ಹೊಂಬಿಸಿಲಿನಲ್ಲಿ
ಹೊಳೆಯ ದಂಡೆಗುಂಟ ಓಡಿ
ಮಳೆಬಿಲ್ಲಿನ ಮಾದಕತೆಯ
ಹೊಳೆವ ಕಂಗಳಲ್ಲೆ ಹಿಡಿದ
ಎಳೆಯತನದ ದಿನಗಳೆಲ್ಲ
ಕಳೆದುಹೋದುವೆಲ್ಲಿ ಇಂದು?

ಗುಬ್ಬಿಗಳ ಕಲರವಕ್ಕೆ
ಹಬ್ಬಗಳ ಸಡಗರಕ್ಕೆ
ಕಬ್ಬು ಮಾವು ಸಜ್ಜಿಗೆಗೆ
ಹುಬ್ಬೇರಿಸಿ ಕಣ್ಣರಳಿಸಿ
ಸಭ್ಯರಾಗಿ ಕಾಯುತ್ತಿದ್ದ
ಹೆಬ್ಬಯಕೆಯ ಆ ಕ್ಷಣಗಳೆಲ್ಲಿ?

ಅಕ್ಕ ತಮ್ಮರೊಡನೆ ಕೂಡಿ
ಸಿಕ್ಕ ಮರಳ ಗುಡ್ಡೆ ಹತ್ತಿ
ಹೆಕ್ಕಿ ಕಪ್ಪೆ ಚಿಪ್ಪು ತೆಗೆದು
ಲೆಕ್ಕ ಮಾಡಿ ನಲಿಯುತ್ತಿದ್ದ
ದುಃಖದುಮ್ಮಾನವಿರದ
ಮಕ್ಕಳಾಟದ ಆ ದಿನಗಳೆಲ್ಲಿ?

ಹಚ್ಚಹಸಿರು ಸೀಬೆಯನ್ನು
ಕಚ್ಚಿ ಕಾಗೆ ಎಂಜಲೆನುತ
ರಚ್ಚೆ ಹಿಡಿದು ಜಗಳವಾಡಿ
ಹಂಚಿ ತಿಂದು ಖುಷಿಯ ಪಟ್ಟ
ಮುಚ್ಚು ಮರೆಯ ಅರಿಯದಂಥ
ಅಚ್ಚರಿಯ ಆ ಸ್ನೇಹವೆಲ್ಲಿ?

ಸುತ್ತಲಿರುವ ಪ್ರಕೃತಿಯನ್ನು
ಮತ್ತೆ ತಿರುಗಿ ನೋಡದಂತೆ
ಹತ್ತು ಹಲವು ಚಿಂತೆಗಳನು
ಹೊತ್ತು ತಿರುಗುತ್ತಿರುವೆನಲ್ಲ!
ಎತ್ತ ಹೋಯಿತೆನ್ನ ಬಾಲ್ಯ
ಅತ್ತು ಕರೆದರೂ ಬಾರದಲ್ಲ...

- ವೆಂಕಟೇಶಪ್ರಸನ್ನ

Comments