ಮೇಲ್ಪಂಕ್ತಿಯಾದವರು

ತಿರುಕನಂದದಿ ದಿರಿಸು
ಚರಕವನು ಹಿಡಿದಾತ
ಪರಕೀಯರನು ಹೊರಗಟ್ಟಿಲ್ಲವೇ?

ಶೋಷಣೆಗೆ ಒಳಗಾಗಿ
ದೂಷಣೆಯ ತಾಳಿದವ
ದೇಶವಾಳುವ ವಿಧಿಯ ಬರೆದಿಲ್ಲವೇ?

ಕನ್ನಡದ ಉಲಿಗಳಲಿ
ಬಣ್ಣಿಸುತ ಜೀವನವ
ಅಣ್ಣನಾಗಿಲ್ಲವೇ ಜಗದ ಜನರಿಗೆಲ್ಲ?

ಹಳ್ಳಿಗಾಡಿನ ಹುಡುಗಿ
ಒಳ್ಳೆ ಕಲಿಕೆಯ ಪಡೆದು
ಬೆಳ್ಳಿಮೋಡಗಳಾಚೆ ಹಾರಿಲ್ಲವೇ?

ಯುವರಾಜನಾದವನು
ಬವಣೆ ಮನುಜನದರಿತು
ಭವಸಾಗರವ ದಾಟಿ ಬರಲಿಲ್ಲವೇ?

ನಿಂತು ಎದುರಲಿ ವಿಧಿಯು
ಎಂತು ನಿನ್ನುಳಿವೆನಲು
ಇಂಥವರ ಮೇಲ್ಪಂಕ್ತಿ ಒಳಿತಲ್ಲವೇ?

-ವೆಂಕಟೇಶಪ್ರಸನ್ನ

Comments