An attempt, again, of about a couple of years ago, to bring out the seriousness of Global Warming through a Teacher's lecture to his little students. A "Shishu Kavya":
ನಮ್ಮಯ ಮಾಸ್ತರು ಬಂದರು ಮತ್ತೆ
ವಿಜ್ಞಾನ ತರಗತಿ ಸಮಯದಲಿ
ಕೈಯಲಿ ಪುಸ್ತಕ ಹೆಗಲಲಿ ನಕ್ಷೆ
ಕಾಳಜಿಯಿತ್ತು ಮುಖದಲ್ಲಿ
ನಮ್ಮಗಳೆಲ್ಲರ ಕುರಿತು ಪ್ರಶ್ನೆಗಳ
ಸುರಿಮಳೆಯನ್ನೇ ಸುರಿಸಿಹರು
ಇವುಗಳಿಗುತ್ತರ ಗೊತ್ತೇ ನಿಮಗೆ
ಎಂದು ಸವಾಲನು ಹಾಕಿಹರು
ಉತ್ತರ ದಕ್ಷಿಣ ಧ್ರುವಗಳ ಮಂಜು
ಏಕೋ ಹೆಚ್ಚಿಗೆ ಕರಗಿಹುದು?
ಸಾಗರದಾಳದ ನೀರಿನ ಮಟ್ಟ
ಏಕೋ ಈಚೆಗೆ ಏರಿಹುದು?
ಕರಾವಳಿಯಲಿ ಕಡಲ್ಗೊರೆತಕೆ
ಮನೆಗಳು ಏಕೆ ಮುಳುಗಿಹವು?
ಕಲಬುರ್ಗಿಯಲ್ಲಿ ಕೆರೆಗಳು ಏಕೆ
ವಸಂತದಲ್ಲೇ ಒಣಗಿಹವು?
ಪ್ರಶ್ನೆಗಳೆಲ್ಲಾ ಅರ್ಥವಾದರೂ
ಉತ್ತರ ಮಾತ್ರ ಹೊಳೆದಿಲ್ಲ
ದಿನವೂ ವಿಚಾರ ಕೇಳುತಲಿದ್ದರೂ
ಕಾರಣ ಮಾತ್ರ ತಿಳಿದಿಲ್ಲ
ಉತ್ತರ ನಾನೇ ಹೇಳುವೆನೆಂದು
ಮಾಸ್ತರು ನಕ್ಷೆಯ ಬಿಡಿಸಿಹರು
ಗಮನವನಿತ್ತ ಹರಿಸಿರಿ ಮಕ್ಕಳೇ,
ವಿಷಯ ಗಂಭೀರವೆಂದಿಹರು
ಕೇಳಿರಿ ಮಕ್ಕಳಾ, ವಾತಾವರಣದ
ಚಕ್ರವು ಮತ್ತೆ ಉರುಳಿಹುದು
ಶೀತೋಷ್ಣ ಯುಗಗಳ ವಲಯಗಳಲ್ಲಿ
ವ್ಯತ್ಯಾಸವೀಚೆಗೆ ಕಂಡಿಹುದು
ಭುವಿಯೊಳಗಿರುತಿಹ ಸಂಪನ್ಮೂಲವ
ಮಾನವನೆಂದೂ ಬಳಸಿಹನು
ಈಚೆಗೆ ಹೆಚ್ಚಿದ ಬೇಡಿಕೆಯಿಂದ
ಮತ್ತೂ ಹೆಚ್ಚನು ಸೆಳೆದಿಹನು
ಕಲ್ಲಿದ್ದಲು ಮರ ಖನಿಜ ತೈಲಗಳ
ಬಳಕೆಯ ದಿನವೂ ಮಾಡಿಹನು
ಮನುಕುಲವನ್ನು ಬೆಳೆಸುವೆನೆನ್ನುತ
ವಾತಾವರಣವ ಕೆಡೆಸಿಹನು
ಕೊಡುತಿಹಳೆಮಗೆ ಭೂಮಿತಾಯಿಯು
ಕೇಳಿದ್ದೆಲ್ಲವ ಒಲ್ಲೆನದೇ
ಸಿಕ್ಕಿದ್ದೆಲ್ಲವ ಸವೆಸಿರೆ ಮಾನವ
ಬರಿದಾಗುವಳವಳಿಷ್ಟರಲೇ
ನಮ್ಮದೆ ಭುವಿಯಿದು ನಮ್ಮದೆ ಆಗಸ
ನಮ್ಮದೆ ನೀರು ನಮ್ಮದೆ ಗಾಳಿ
ಕೇವಲ ನಮ್ಮದೆ ಅಲ್ಲವೊ ಚಿಣ್ಣರಾ
ಇನ್ನೂ ಹಲವಿವೆ ಜೀವಪ್ರಜಾತಿ
ಎಲ್ಲವ ಹಂಚುತ ಮಿತಿಯಲ್ಲಿರಿಸುತ
ಬಳಸಿದರಷ್ಟೇ ನಮಗುಳಿವು
ಇರಲಿ ಮಕ್ಕಳು, ಮರಿಮಕ್ಕಳಿಗೂ
ಜೀವಸಂಕುಲದ ಕೆಲ ಸುಳಿವು
-ವೆಂಕಟೇಶಪ್ರಸನ್ನ
Comments