"ಜ್ಞಾನಲೋಕ"ವೆಂಬ ಮರೀಚಿಕೆ, ಸಡಗರದ ಕೈಬರಹ ಪತ್ರಿಕೆ

ಇಂದಿಗೆ ಸರಿಯಾಗಿ ೨೦ ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿದ್ದಾಗ ನಿಂತುಹೋದದ್ದೊಂದು ಖಯಾಲಿಯನ್ನು ಮತ್ತೇಕೆ ಆರಂಭಿಸಬಾರದೆಂಬ ಮನಸ್ಸು ನನಗೂ ನನ್ನ ಸ್ನೇಹಿತ ಶಿವಪ್ರಸಾದನಿಗೂ ಇಂದು ಬೆಳಿಗಿನ ಜಾವದ ನಡಿಗೆಯ ಸಮಯದಲ್ಲಿ ಒಟ್ಟಿಗೇ ಬಂದದ್ದು ಆಶ್ಚರ್ಯಕರವೇ. ೧೪ ಏಪ್ರಿಲ್ ೧೯೯೯ರ ದಿನ ನಾವಿಬ್ಬರೂ ಕೈಜೋಡಿಸಿ ಆರಂಭಿಸಿದ್ದ ಕೈಬರಹ ಪತ್ರಿಕೆ "ಜ್ಞಾನಲೋಕ"ದ ಕೊನೆಯ ಪ್ರತಿ ಪ್ರಕಟಗೊಂಡ ದಿನ. ಅಂದು ಅಂಬೇಡ್ಕರ್ ಜಯಂತಿಯೆಂದು ಶಿವಪ್ರಸಾದನು ಅಂಬೇಡ್ಕರರ ಚಿತ್ರವೊಂದನ್ನೂ ಬಿಡಿಸಿ ಒಂದೇ ಹಾಳೆಯ ಪೇಪರನ್ನು ಚೆನ್ನಾಗಿಯೇ ತುಂಬಿಸಿದ್ದ. ಆ ಪತ್ರಿಕೆ ಅಂದು ದಿನಪತ್ರಿಕೆಯಾಗಿತ್ತು. ದಿನಕ್ಕೆ ಎರಡು ಪ್ರತಿಗಳನ್ನು ಹೊರತರುತ್ತಿದ್ದೆವು. ಒಂದು ದಿನ ನಾನು ಪತ್ರಿಕೆ ಬರೆದರೆ ಮಾರನೆಯ ದಿನ ಅವನು. ಅದರ ನಂತರ ಮತ್ತೆ ನಾನು. ಹಾಗೆ. ಯಾರು ಬರೆದರೂ ಕೆಳಗೊಂದು ಕಾರ್ಬನ್ ಶೀಟ್ ಇಟ್ಟುಕೊಂಡು ಬರೆಯುವುದು. ಅದೇ ಎರಡನೇ ಪ್ರತಿ. ನಾನು ಬರೆದ ದಿನ ಆ ಕಾರ್ಬನ್ ಕಾಪಿ ಪ್ರತಿಯನ್ನು ಶಿವಪ್ರಸಾದನಿಗೆ ಕೊಡುವುದು, ಅವನು ಬರೆದ ದಿನ ಅವನು ನನಗೆ ಕೊಡುತ್ತಿದ್ದ. ಅಷ್ಟೇ. ಅದರಲ್ಲೇ ಒಂದು ಸಂತೃಪ್ತಿ. ಯಾರಿಗೇನು ಅದರ ಬಗ್ಗೆ ನಾವು ಹೇಳಿಯೂ ಇರಲಿಲ್ಲ. 
 
ಇಷ್ಟೆಲ್ಲಾ ಪ್ರಚಾರ ಕೊಡುವುದು ನೋಡಿದರೆ ಓದುಗರು ನಾವೇನೋ ಆ ಪತ್ರಿಕೆಯನ್ನು ಹಲವು ವರ್ಷಗಳ ಕಾಲ ನಡೆಸಿದೆವೆಂದುಕೊಳ್ಳಬಹುದು. ಆದರೆ ನಾವು ಹೊರತಂದದ್ದು ಕೇವಲ ಐದೋ ಆರೋ ಸಂಚಿಕೆಗಳನ್ನು! ನಮ್ಮಿಬ್ಬರಿಗೂ ಆಗ ಪ್ರಚಲಿತ ವಿದ್ಯಮಾನಗಳ ಬಗೆಗೆ ತಿಳಿದುಕೊಳ್ಳಲು ಬಹಳ ಆಸಕ್ತಿ. ನನಗಂತೂ ರಸಪ್ರಶ್ನೆ, ಸಾಮಾನ್ಯ ಜ್ಞಾನಗಳಲ್ಲಿದ್ದ ಆಸಕ್ತಿಯಿಂದ ಆಗ ವೃತ್ತಪತ್ರಿಕೆಗಳನ್ನೋದುವ ಗೀಳು ಬಹಳ. ಅದು ನನ್ನ ಭಾಷೆಯ ಬೆಳವಣಿಗೆಗೂ ಬಹಳ ಸಹಕಾರಿಯಾಯಿತು. ಅಷ್ಟೇ ಅಲ್ಲದೆ ನಮ್ಮ ಕುಟುಂಬದ ಅತ್ಯಂತ ಆತ್ಮೀಯ ಸ್ನೇಹಿತರೊಬ್ಬರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದದ್ದು ನನಗೆ ಇನ್ನೊಂದು ರೀತಿಯ ಕುಮ್ಮಕ್ಕು ಕೊಟ್ಟಿತ್ತು. ನನಗೆ ಆಗ ಅವರಂತೆಯೇ ಪತ್ರಿಕೋದ್ಯಮ ಸೇರುವಾಸೆಯಿದ್ದದ್ದು ಸಹಜ. 
 
ಆ ಜ್ಞಾನಲೋಕ ಪತ್ರಿಕೆಯ ವಿಚಾರಕ್ಕೆ ಮತ್ತೆ ಬರೋಣ. ೧೪ ಏಪ್ರಿಲ್ ೧೯೯೯ರಂದು ಬಂದ ಸಂಚಿಕೆಯ ನಂತರ, ಕಾರಣಾಂತರಗಳಿಂದ ಅದರ ಮಾರನೆಯ ದಿನ ನಾನು ನನ್ನ ಜವಾಬ್ದಾರಿ ನಿರ್ವಹಿಸಲಾಗಲಿಲ್ಲ. ನಂತರದ ದಿನ ಶಿವಪ್ರಸಾದನೂ ಸಹ. ಪರಿಸ್ಥಿತಿಯನ್ನು ಮನಗಂಡು ನಾವು ನಮ್ಮ ಪತ್ರಿಕೆಯನ್ನು ಸಾಪ್ತಾಹಿಕವನ್ನಾಗಿ ಮಾರ್ಪಡಿಸಿದೆವು. ಒಂದು ಸಂಚಿಕೆ ಹೊರಬಂತು. ನಂತರ "ಜ್ಞಾನಲೋಕ" ಮಾಸಿಕವಾಯಿತು. ಉಪಯೋಗ ಕಾಣಲಿಲ್ಲ. ತ್ರೈಮಾಸಿಕವಾಯಿತು, ಅರ್ಧವಾರ್ಷಿಕವಾಯಿತು, ವಾರ್ಷಿಕವಾಯಿತು. ಯಾವುದೂ ಬೆಳಕು ಕಾಣಲಿಲ್ಲ. ಆಮೇಲೆ ನಮ್ಮ ನಮ್ಮ ಓದು ಮುಖ್ಯವಾಗಿಬಿಟ್ಟು ಜ್ಞಾನಲೋಕ ನೇಪಥ್ಯಕ್ಕೆ ಸರಿಯಿತು. ೨೦೧೦ರಲ್ಲಿ ಹಲವು ವರ್ಷಗಳ ನಂತರ ಶಿವಪ್ರಸಾದನನ್ನು ಭೇಟಿಯಾಗಲು ಮತ್ತೆ ಆರಂಭಿಸಿದ ಮೇಲೆ ಹಲವು ಬಾರಿ ನಮ್ಮ "ಪತ್ರಿಕೆ"ಯ ಬಗ್ಗೆ ನೆನಪಿಸಿಕೊಂಡು ನಮಗೆ ನಾವೇ ಹಾಸ್ಯ ಮಾಡಿಕೊಂಡು ನಕ್ಕಿದ್ದಿದೆ.
 
ಆದರೆ ಇಂದಿನ ಮಾತುಕತೆ ಸ್ವಲ್ಪ ಮುಂದುವರೆದು "ಮತ್ತೇಕೆ ಈ ಪ್ರಯತ್ನ ಮಾಡಬಾರದು?" ಎನಿಸಿತು. ನಾವು ಯಾವುದರ ಬಗ್ಗೆ ಬರೆಯುತ್ತೇವೆ ಎಂಬುದೂ ಇನ್ನೂ ಸ್ಪಷ್ಟವಿಲ್ಲ. ಈ ಬಾರಿಯೂ ಇದು ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ. ಆದರೆ ಅದೇ ಬಾಲ್ಯದ ಸಡಗರ ಈ ವಿಚಾರದಲ್ಲಿ ಈಗಲೂ ಇದೆ. ಮಾಸಿಕವೆಂದು ಹೊರತರುವ ಇರಾದೆಯಿದೆ. ಇಂದು ನಮಗೆ ಹತ್ತು ಹಲವು ತಂತ್ರಜ್ಞಾನಗಳ ಸಹಾಯವಿದೆ. ಪತ್ರಿಕೆಯನ್ನು ಹಲವು ರೀತಿಗಳಲ್ಲಿ ಆಕರ್ಷಕವನ್ನಾಗಿಸುವ ಸಾಧ್ಯತೆಯಿದೆ. ಆದರೆ ನಾವು ಇದನ್ನು ಕೈಬರಹಕ್ಕೇ ಸೀಮಿತಗೊಳಿಸಿ ಬಹುಮಟ್ಟಿಗೆ ನಿಂತೇ ಹೋಗಿರುವ ನಮ್ಮ ಬರಹಗಳನ್ನು ಮತ್ತೆ ಬಳಕೆಗೆ ತರಲು ಆಲೋಚಿಸಿದ್ದೇವೆ. ಅದರೊಟ್ಟಿಗೇ ಇದು ಕೈಬರಹದ್ದಾಗಿದ್ದರೆ ಅದರದ್ದೇ ವೈಶಿಷ್ಟ್ಯ ಹೊಂದಿರುತ್ತದೆಂಬ ಅನಿಸಿಕೆ. ಕಾರ್ಬನ್ ಶೀಟ್‌ನ ಮಟ್ಟಕ್ಕಿಳಿಯದೆ ಬರೆದದ್ದನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಕಡತವಾಗಿ ಹಂಚಿಕೊಳ್ಳುವ ಮಟ್ಟಕ್ಕೆ ಮಾತ್ರ ತಂತ್ರಜ್ಞಾನದ ಬಳಕೆಗೆ ಮನಸ್ಸಿದೆ. ನೋಡೋಣ, ಹೇಗೆ ಮುಂದುವರೆಯುತ್ತದೆಂದು...
 
ವೆಂಕಟೇಶಪ್ರಸನ್ನ.

 

Comments

Mahesh M said…
ಖಂಡಿತಾ ಬರೆಯಿರಿ. e-ಪತ್ರಿಕೆಯಾದರೆ ಹೆಚ್ಚು ಜನರನ್ನು ತಲುಪುವುದು. ನಾನು ಕಾಯುತ್ತಿರುವೆ.